ಮಂಗಳವಾರ, ಫೆಬ್ರವರಿ 18, 2020
20 °C
ತಾಲ್ಲೂಕಿನ ನಿರ್ಣಾ ಗುತ್ತಿ ಬಸವಣ್ಣ ಸನ್ನಿಧಿಗೆ ಸಹಸ್ರಾರು ಭಕ್ತರ ಭೇಟಿ

ನಿರ್ಣಾ: ಜಾತ್ರಾ ಮಹೋತ್ಸವ ಡಿ.15ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ಐತಿಹಾಸಿಕ ನಿರ್ಣಾ ಗ್ರಾಮದ ಗುತ್ತಿಬಸವಣ್ಣ ದೇವರ ಜಾತ್ರೆಯು ಡಿ.15 ರಿಂದ 19ರವರೆಗೆ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ವಿಶಾಲವಾದ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಂಡ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಮುಗಿಲೆತ್ತರಕ್ಕೆ ಬೆಳೆದಿರುವ ಪುರಾತನ ಆಲದ ಮರಗಳಿಗೆ ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿದೆ. ಕಲ್ಯಾಣ ಮಂಟಪದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಗುತ್ತಿಬಸವಣ್ಣ ಇಲ್ಲಿನ ಜನರ ಆರಾಧ್ಯ ದೈವ. ನಾಟಕ, ಕೋಲಾಟ,ವಾಲಿಬಾಲ್ ಟೂರ್ನಿ ಸೇರಿದಂತೆ ವಿಶಿಷ್ಟ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಯನ್ನು ಪ್ರತಿಬಿಂಬಿಸುವುದು ಈ ಜಾತ್ರೆಯ ವಿಶೇಷ.

ಜಾತಿ, ಮತ, ಧರ್ಮ ಮೀರಿ ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಐದು ದಿನ ನಡೆಯುವ ಈ ವಿಶಿಷ್ಟ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಸಾಕ್ಷ್ಯಿಯಾಗುತ್ತಾರೆ.

ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಡಿ.15 ರಿಂದ ಆರಂಭವಾಗಲಿವೆ ಎಂದು ಗುತ್ತಿಬಸವಣ್ಣ ದೇವಸ್ಥಾನದ ಜಾತ್ರಾ ವ್ಯವಸ್ಥಾಪಕ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಡಿ.15 ರ ಬೆಳಿಗ್ಗೆ 6ಕ್ಕೆ ರುದ್ರಾಭಿಷೇಕ, ಮಹಾಮಂಗಳಾರತಿ, ರಾತ್ರಿ 8 ಗಂಟೆಗೆ ಗ್ರಾಮದ ಮಠದಿಂದ ದೇಗುಲದವರೆಗೆ ದೇವರ ಪಲ್ಲಕ್ಕಿ ಮೆರವಣಿಗೆ ಭಜನೆ, ಪುರವಂತರ ಪುರವಂತಿಗೆ ಸೇವೆಯೊಂದಿಗೆ ಉತ್ಸವ ಜರುಗಲಿದೆ.

ಡಿ.16 ರಂದು ಬೆಳಿಗ್ಗೆ 6 ಗಂಟೆಗೆ ದೇವರಿಗೆ ಮಹಾರುದ್ರಾಭಿಷೇಕ ಪೂಜೆ ನಡೆಯುತ್ತದೆ. ರಾತ್ರಿ 8 ಗಂಟೆಗೆ ನಗೆ ಹಬ್ಬ ಕಾರ್ಯಕ್ರಮ ನಡೆಯುತ್ತದೆ. ವಿವಿಧೆಡೆಗಳಿಂದ ಆಗಮಿಸಿದ ಹಾಸ್ಯಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಂತರ ಸಿಡಿಮದ್ದುಗುಂಡು, ವಿದ್ಯುತ್ ದೀಪಾಲಂಕಾರಗಳಿಂದ ಪಲ್ಲಕ್ಕಿ ಮೆರವಣಿಗೆ ನಂತರ ಭಕ್ತರ ಮಧ್ಯೆ ವಿವಿಧ ಪುಷ್ಪಮಾಲೆಗಳಿಂದ ಅಲಂಕರಿಸಿದ ರಥೋತ್ಸವ ನಡೆಯುವುದು. ಜಾತ್ರೆಯ ಪೂಜಾ ಕಾರ್ಯಕ್ರಮಗಳಲ್ಲಿ ಸ್ವಂತದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಬಾಲಯೋಗಿ ಶಂಕರಲಿಂಗ ಮಹಾರಾಜ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಡಿ.17ಕ್ಕೆ ಬೆಳಗ್ಗೆ 8 ಗಂಟೆಗೆ ರಾಜ್ಯ, ಆಂಧ್ರಪ್ರದೇಶ, ತೆಲಂಗಾಣಗಳಿಂದ ಆಗಮಿಸುವ ಕುಸ್ತಿ ಪೈಲ್‌ವಾನರಿಂದ ಜಂಗಿ ಕುಸ್ತಿ ಸ್ಪರ್ಧೆ ನಡೆಯುವುದು. ಸಂಜೆ 4 ಗಂಟೆಗೆ ಪಶುಗಳ ಪ್ರದರ್ಶನ ನಡೆಯುವುದು. ಈ ಪ್ರದರ್ಶನದಲ್ಲಿ ಭಾಗವಹಿಸುವ ಜಾನುವಾರುಗಳಿಗೆ ಹಾಗೂ ರೈತರಿಗೆ ಬಹುಮಾನ ವಿತರಿಸಲಾಗುವುದು. ನಂತರ ಪಾಲ್ಗೊಂಡ ಎಲ್ಲರಿಗೂ ದೇಗುಲದಿಂದ ಮಹಾಪ್ರಸಾದ ವಿತರಿಸಲಾಗುತ್ತದೆ. ಸಂಜೆ 5 ರಿಂದ 10 ರವರೆಗೆ ಕಲಗಿ, ತುರಾಯಿ ಕಾರ್ಯಕ್ರಮ ನಡೆಯುವುದು.

ಡಿ.18 ರಂದು ವಾಲಿಬಾಲ್ ಟೂರ್ನಿ ನಡೆಸಿ ಪ್ರಥಮ, ದ್ವಿತಿಯ, ತೃತಿಯ ಸ್ಥಾನ ಪಡೆದ ಟೀಮ್‌ಗಳ ಕ್ರೀಡಾಪಟುಗಳಿಗೆ ದೇಗುಲದಿಂದ ನಗದು ಹಣ ನೀಡಿ ಸನ್ಮಾನಿಸಲಾಗುತ್ತದೆ.

ಡಿ.19ಕ್ಕೆ ಪುರವಂತರ ಸೇವೆಯೊಂದಿಗೆ ಬಾಜ ಭಜಂತ್ರಿ ಮೂಲಕ ದೇವಾಲಯದಿಂದ ನಿರ್ಣಾ ಗ್ರಾಮದವರೆಗೆ ಪಲ್ಲಕ್ಕಿ ಉತ್ಸವ ನಡೆಸಿ, ಮಠದಲ್ಲಿ ಮಹಾಮಂಗಳಾರತಿ ಮೂಲಕ ಜಾತ್ರೆಗೆ ವಿದಾಯ ಹೇಳಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು