ಬೀದರ್ ಜಿಲ್ಲೆಯಲ್ಲಿ ಇಲ್ಲ ಹಕ್ಕಿ ಜ್ವರ

ಬೀದರ್: ಜಿಲ್ಲೆಯಲ್ಲಿ ಹಕ್ಕಿ ಜ್ವರದ ಯಾವುದೇ ಪ್ರಕರಣ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು.
ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.
ಕೇರಳದ ಕೊಟ್ಯಾಯಂ ಮತ್ತು ಅಲಪ್ಜುಳ ಜಿಲ್ಲೆಗಳಲ್ಲಿ ಕೋಳಿ ಶೀತ ಜ್ವರ, ಹಕ್ಕಿ ಜ್ವರ ರೋಗೋದ್ರೇಕ ದೃಢಪಟ್ಟಿದೆ. ಈ ಪ್ರಯುಕ್ತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಳಿ ಶೀತ ಜ್ವರದ ನಿಯಂತ್ರಣ ಮತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಸ್ವಾಭಾವಿಕವಾಗಿ ಕೋಳಿಗಳು, ವನ್ಯಪಕ್ಷಿಗಳ ಮರಣ ಹೊಂದುವುದು ಕಂಡುಬಂದಲ್ಲಿ ವರದಿ ಸಲ್ಲಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಎಲ್ಲ ಕುಕ್ಕಟ ಕ್ಷೇತ್ರಗಳಲ್ಲಿ ವಿಶೇಷವಾಗಿ ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಅಗತ್ಯವಿರುವ ಎಲ್ಲ ಪರಿಕರ ಹಾಗೂ ರಾಸಾಯನಿಕಗಳನ್ನು ಸಂಗ್ರಹಿಸಿ ರೋಗೋದ್ರೇಕ ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಿ ಸನ್ನದ್ಧ ಸ್ಥಿತಿಯಲ್ಲಿರಿಸಬೇಕು. ಫಾರಂಗಳ ಒಳ, ಹೊರ ಆವರಣಗಳನ್ನು ರಾಸಾಯನಿಕಗಳಿಂದ ಸ್ವಚ್ಛಗೊಳಿಸಬೇಕು. ಜೈವಿಕ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಜಿಲ್ಲಾ ಮಟ್ಟದ ರೋಗ ನಿಯಂತ್ರಣ ಸಮಿತಿ ಸಭೆ ನಡೆಸಿ, ಮುಂಜ್ರಾಗತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಹಾಗೂ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಕೃಷ್ಣಾ ರೆಡ್ಡಿ ಅವರಿಗೆ ನಿರ್ದೇಶನ ನೀಡಿದರು.
ನಗರಸಭೆ ಆಯುಕ್ತ ಈರಣ್ಣ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಮಲ್ಲಿಕಾರ್ಜುನ ಹಂಚಿನಾಳ, ಪಶು ವೈದ್ಯಾಧಿಕಾರಿ ಗೌತಮ ಅರಳಿ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.