ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಪ್ರವಾಸೋದ್ಯಮಕ್ಕಿಲ್ಲ ಕೊಡುಗೆ

ಕಮರಿದ ಕಾರಂಜಾ ಸಂತ್ರಸ್ತರ, ಜಿಲ್ಲಾ ಕನ್ನಡ ಭವನದ ಕನಸು
Last Updated 8 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೀದರ್‌: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಬೀದರ್‌ ಜಿಲ್ಲೆಗೆ ಕನಿಷ್ಠ ₹ 420 ಕೋಟಿ ಕೊಡುಗೆ ನೀಡಿದ್ದಾರೆ. ಸಾಮಾನ್ಯ ಯೋಜನೆಯಲ್ಲೂ ಜಿಲ್ಲೆಗೆ ಅನುಕೂಲವಾಗಿದೆ. ಆದರೆ, ಜಿಲ್ಲೆಯ ಬಹುಜನರ ನಿರೀಕ್ಷೆಯ ಪ್ರವಾಸೋದ್ಯಮವನ್ನೇ ನಿರ್ಲಕ್ಷ್ಯ ಮಾಡಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಬೀದರ್ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ₹ 300 ಕೋಟಿ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲ್ಲೂಕಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ₹ 75 ಕೋಟಿ ಕಾಯ್ದಿರಿಸಲಾಗಿದೆ. ಅನುರಾಗ ತಿವಾರಿ ಜಿಲ್ಲಾಧಿಕಾರಿಯಾಗಿದ್ದಾಗ 130 ಕೆರೆಗಳ ಹೂಳು ತೆಗೆದು ರಾಜ್ಯ ಸರ್ಕಾರವೇ ಕೆರೆ ಸಂಜೀವಿನಿ ಯೋಜನೆ ರೂಪಿಸಲು ಪ್ರೇರಣೆ ನೀಡಿದ್ದರು. ಈಗಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರೂ ಕೆರೆಗಳ ಹೂಳು ತೆಗೆಯುವ ಕಾರ್ಯಕ್ಕೆ ಆದ್ಯತೆ ನೀಡಿದ್ದಾರೆ.
ರಾಜ್ಯ ಸರ್ಕಾರ ಜಲ ಸಂರಕ್ಷಣೆ ಹಾಗೂ ನೀರಾವರಿಗೆ ಆದ್ಯತೆ ನೀಡಿ ವಿಶೇಷ ಅನುದಾನ ಒದಗಿಸಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ.

‘ಎರಡು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಮಾಂಜ್ರಾ ನದಿಗೆ ಅಪಾರ ನೀರು ಹರಿದು ಬಂದು ಜನವಾಡ ಸಮೀಪದ ಬ್ಯಾರೇಜ್‌ನ ಒಂದು ಬದಿ ಕೊಚ್ಚಿಕೊಂಡು ಹೋಗಿದೆ. ಬ್ಯಾರೇಜ್‌ ದುರಸ್ತಿಗೆ ರೈತ ಸಂಘಟನೆಗಳು ಅನೇಕ ಬಾರಿ ಮನವಿ ಮಾಡಿವೆ. ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಸೇತುವೆ ಮೇಲಿಂದ ಅನೇಕ ಬಾರಿ ಓಡಾಡಿದ್ದಾರೆ. ರೈತರಿಗೆ ಅನುಕೂಲವಾಗುವ ದಿಸೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲವಾಗಿದ್ದಾರೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ ಹೇಳಿದರು.

ಬೀದರ್‌ನಿಂದ ಸಾರ್ವಜನಿಕ ವಲಯದ ವಿಮಾನ ಯಾನ ಪ್ರಾರಂಭಿಸಲು ₹ 32 ಕೋಟಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಆದರೆ, ಜಿಎಂಆರ್‌ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದ ತೊಡಕಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ, ಜಿಎಂಆರ್‌ ಅಧಿಕಾರಿಗಳೊಂದಿಗೆ ಅನೇಕ ಬಾರಿ ಮಾತುಕತೆ ನಡೆಸಿದರೂ ಅದು ಫಲ ನೀಡಿಲ್ಲ. ಜಿಲ್ಲೆಯ ಜನರ ಪಾಲಿಗೆ ಭರವಸೆ ಆಗಿಯೇ ಉಳಿದಿದೆ.

ಗುರುನಾನಕರ 550ನೇ ಜಯಂತಿ ಅಂಗವಾಗಿ ಗುರುನಾನಕ ಝೀರಾ ಗುರುದ್ವಾರಕ್ಕೆ ₹ 10 ಕೋಟಿ ಹಾಗೂ ಹೊಸ ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ₹ 3 ಕೋಟಿ ಕೊಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಮೇಲ್ನೋಟಕ್ಕೆ ಬೀದರ್‌ ಜಿಲ್ಲೆಗೆ ಉತ್ತಮ ಬಜೆಟ್‌ ಆಗಿದ್ದರೂ ಶಾಶ್ವತವಾಗಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಬಲ್ಲ ಪ್ರವಾಸೋದ್ಯಮಕ್ಕೆ ಒಂದು ಪೈಸೆ ನೀಡಿಲ್ಲ. ಕನ್ನಡ ಭವನಕ್ಕೆ ಬಿಡಿಗಾಸು ಕೊಟ್ಟಿಲ್ಲ.

ಮೂವರು ಸಚಿವರು, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಇರುವ ಜಿಲ್ಲೆಗೆ ನಿರೀಕ್ಷಿತ ಫಲ ದೊರೆತಿಲ್ಲ. ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ, ಕೈಗಾರಿಕೋದ್ಯಮಬೆಳವಣಿಗೆ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ, ಕಾರಂಜಾ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಹಾಗೂ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಪುನಃಶ್ಚೇತನದ ನಿರೀಕ್ಷೆ ಹುಸಿಯಾಗಿದೆ.

‘ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿತ್ತು. ಸಚಿವ ಸಂಪುಟದಲ್ಲಿ ಜಿಲ್ಲೆಯ ಮೂವರು ಸಚಿವರು ಇದ್ದಾರೆ. ಜಿಲ್ಲೆಗೆ ಇನ್ನೂ ಹೆಚ್ಚಿನ ಯೋಜನೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಜನರ ನಿರೀಕ್ಷೆ ಹುಸಿಯಾಗಿದೆ’ ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT