ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಎರಡು ವರ್ಷವಾದರೂ ಜನಪ್ರತಿನಿಧಿಗಳಿಗಿಲ್ಲ ಅಧಿಕಾರ

ನಗರಸಭೆಗೆ ಚುನಾವಣೆ ನಡೆಸುವರೇ ಪೌರಾಡಳಿತ ಸಚಿವ ರಹೀಂ ಖಾನ್‌?
Published 7 ಜೂನ್ 2023, 1:54 IST
Last Updated 7 ಜೂನ್ 2023, 1:54 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿನ ನಗರಸಭೆಗೆ ಚುನಾವಣೆ ಪ್ರಕ್ರಿಯೆ ಮುಗಿದು ಎರಡು ವರ್ಷಕ್ಕೂ ಹೆಚ್ಚು ಸಮಯ ಕಳೆಯುತ್ತ ಬಂದರೂ ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.

ಒಟ್ಟು 35 ಸದಸ್ಯ ಬಲದ ನಗರಸಭೆಗೆ 2021ರ ಏಪ್ರಿಲ್‌ 27ರಂದು ಚುನಾವಣೆ ನಡೆಸಲಾಗಿತ್ತು. ವಾರ್ಡ್‌ ಸಂಖ್ಯೆ 26, 32ರ ಮೀಸಲಾತಿ ವಿವಾದ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಇವೆರಡೂ ವಾರ್ಡ್‌ಗಳಿಗೆ 2021 ಸೆಪ್ಟೆಂಬರ್‌ನಲ್ಲಿ ಮತದಾನ ನಡೆದಿತ್ತು.

ಫಲಿತಾಂಶ ಬಂದ ನಂತರ ಯಾವುದೇ ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಂದಿರಲಿಲ್ಲ. 16 ವಾರ್ಡ್‌ಗಳಲ್ಲಿ ಜಯ ಗಳಿಸಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್‌ 9, ಬಿಜೆಪಿ 7, ಎಂಐಎಂ 2, ಎಎಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಎಂಐಎಂ, ಎಎಪಿ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಮುಂದಾಗಿತ್ತು. ಆದರೆ, ಆಗ ಕೋವಿಡ್‌ ವಕ್ಕರಿಸಿಕೊಂಡಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಅಂದಿನ ಬಿಜೆಪಿ ಸರ್ಕಾರ ಕೂಡ ಚುನಾವಣೆಗೆ ಮನಸ್ಸು ಮಾಡಲಿಲ್ಲ ಎಂಬ ಆರೋಪಗಳಿವೆ.

ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯಾವುದೇ ರೀತಿಯ ಸಾಧ್ಯತೆಗಳು ಇರಲಿಲ್ಲ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿಯೇ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದಂತೆ ನೋಡಿಕೊಂಡಿದೆ ಎಂಬ ಆರೋಪವೂ ಇದೆ. ಆದರೆ, ಬೀದರ್‌ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಹಾಗೂ ಹಾಲಿ ಪೌರಾಡಳಿತ ಸಚಿವ ರಹೀಂ ಖಾನ್‌ ಕೂಡ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಿಲಿಲ್ಲ ಎನ್ನುವ ಆರೋಪಗಳೂ ಇವೆ. ಈಗ ಅವರು ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅದು ಕೂಡ ಪೌರಾಡಳಿತ ಇಲಾಖೆಯದ್ದು. ಈಗಲಾದರೂ ಶೀಘ್ರದಲ್ಲಿ ಚುನಾವಣೆ ನಡೆಸುವರೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ನಗರಾಭಿವೃದ್ಧಿ ಇಲಾಖೆಯು ಈ ಹಿಂದೆ ಅಧ್ಯಕ್ಷ ಸ್ಥಾನವನ್ನು ಬಿಸಿಎ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಬಳಿಕ ಜಿಲ್ಲಾಡಳಿತಕ್ಕೆ ಪತ್ರ ಬರೆದು ಶೀಘ್ರ ಚುನಾವಣೆ ನಡೆಸುವಂತೆ ತಿಳಿಸಿತ್ತು. ಆದರೂ ಇದುವರೆಗೆ ಚುನಾವಣೆ ನಡೆದಿಲ್ಲ.

ನಗರಸಭೆಗೆ ಹೊಸದಾಗಿ ಸದಸ್ಯರು ಆಯ್ಕೆಯಾಗಿದ್ದರೂ ಅವರಿಗೆ ಅಧಿಕಾರ ನಡೆಸುವ ಭಾಗ್ಯ ಒಲಿದು ಬಂದಿಲ್ಲ. ಅಧಿಕಾರಿಗಳೇ ಎಲ್ಲ ನೋಡಿಕೊಳ್ಳುತ್ತಿದ್ದಾರೆ. ಆದರೆ, ವಾರ್ಡ್‌ಗಳಲ್ಲಿ ಯಾವುದೇ ರೀತಿಯ ಕೆಲಸಗಳು ಆಗುತ್ತಿಲ್ಲ. ಜನಸಾಮಾನ್ಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಪಾಲಿಕೆ ರಚನೆ ಪ್ರಕ್ರಿಯೆ:

‘ಕೆಲ ತಾಂತ್ರಿಕ ಕಾರಣಗಳಿಂದ ರಾಜ್ಯದ 50ರಿಂದ 60 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಅದರಲ್ಲಿ ಬೀದರ್‌ ಕೂಡ ಸೇರಿದೆ’ ಎಂದು ಹೆಸರು ಹೇಳಲಿಚ್ಛಿಸದ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಇದರ ನಡುವೆ ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯೂ ಮತ್ತೊಂದೆಡೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಘೋಷಿಸಿದೆ. ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣಕ್ಕೆ ಸಂಬಂಧಿಸಿದ ಮಾನದಂಡಗಳಿಗೆ ಒಪ್ಪಿಗೆ ಸಿಕ್ಕಿದೆ. ಇನ್ನಷ್ಟೇ ಸಿಬ್ಬಂದಿ ನೇಮಕಾತಿ ಕುರಿತ ವಿಷಯ ಅಂತಿಮಗೊಳ್ಳಬೇಕಿದೆ. ಕಳೆದೊಂದು ವರ್ಷದಿಂದ ಸತತವಾಗಿ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪಾಲಿಕೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಕಳಿಸಿಕೊಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬಹುದು. ಒಂದುವೇಳೆ ಹೀಗಾದರೆ ಆರು ತಿಂಗಳಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕಾಗುತ್ತದೆ. ಇದು ಕೂಡ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ವಿಳಂಬಕ್ಕೆ ಪ್ರಮುಖ ಕಾರಣವೆಂದು ಮೂಲಗಳಿಂದ ತಿಳಿದು ಬಂದಿದೆ.

ಏನೇ ಕಾರಣವಿದ್ದರೂ ವಾರ್ಡ್‌ಗಳಲ್ಲಿ ಜನಸಾಮಾನ್ಯರು ಅವರ ಗೋಳು ಯಾರಿಗೆ ಹೇಳಬೇಕು? ಎರಡು ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಸಿಗದೆ ಜನ ಸಮಸ್ಯೆಗಳ ನಡುವೆ ಬದುಕು ನಡೆಸುತ್ತಿದ್ದಾರೆ. ಸ್ಥಳೀಯರೇ ಆದ ಪೌರಾಡಳಿತ ಸಚಿವರು ಇದಕ್ಕೆ ಪರಿಹಾರ ಕಲ್ಪಿಸುವರೇ?

ರಹೀಂ ಖಾನ್‌
ರಹೀಂ ಖಾನ್‌

ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಕೂಡ ಬಂದಿದೆ. ಶೀಘ್ರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಬೇಕು. –ಸುರೇಖಾ ಫಿಲೋಮಿನ್‌ರಾಜ್‌ ಪ್ರಸಾದ ನಗರಸಭೆ ಸದಸ್ಯೆ

ನಗರಸಭೆಯಲ್ಲಿ ಪಕ್ಷಗಳ ಬಲಾಬಲ 35 ಒಟ್ಟು ಸದಸ್ಯರು 16 ಕಾಂಗ್ರೆಸ್‌, 09 ಜೆಡಿಎಸ್‌, 07 ಬಿಜೆಪಿ 02–ಎಂಐಎಂ, 01–ಎಎಪಿ

ಸಚಿವರು ಏನು ಹೇಳ್ತಾರೆ? ‘ಬೀದರ್‌ ನಗರಸಭೆಗೆ ಶೀಘ್ರದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಕ್ರಮ ಜರುಗಿಸಲಾಗುವುದು. ಮಹಾನಗರ ಪಾಲಿಕೆ ಮೇಲ್ದರ್ಜೆಗೆ ಸಂಬಂಧಿಸಿದ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. ಎಲ್ಲರೊಂದಿಗೆ ಚರ್ಚಿಸಿ ಮುಂದುವರೆಯಲಾಗುವುದು’ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT