ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕ ವಿಚಾರದ ಜತೆ ಚೆಲ್ಲಾಟ ಬೇಡ- ಹೋರಾಟಗಾರರಿಗೆ ಮುರುಘಾ ಶರಣರ ಕಿವಿಮಾತು

ಅಭಿನಂದನಾ ಸಮಾರಂಭ
Last Updated 21 ಡಿಸೆಂಬರ್ 2021, 15:37 IST
ಅಕ್ಷರ ಗಾತ್ರ

ಬೀದರ್: ಚರ್ಚೆಗೆ ಬಹಳಷ್ಟು ವೇದಿಕೆಗಳು, ಸಮಯಾವಕಾಶವೂ ಇರುತ್ತದೆ. ಪುತ್ಥಳಿಗೆ ಅವಮಾನ ಮಾಡಿ ಭಾವನಾತ್ಮಕ ವಿಚಾರಗಳ ಜತೆ ಚೆಲ್ಲಾಟ ಬೇಡ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೋರಾಟಗಾರರಿಗೆ ಕಿವಿಮಾತು ಹೇಳಿದರು.

ಬಸವ ಕೇಂದ್ರದ ಜಿಲ್ಲಾ ಘಟಕದ ವತಿಯಿಂದ ಪಟ್ಟಾಧಿಕಾರದ ತೃತೀಯ ದಶಮಾನೋತ್ಸವ ಪ್ರಯುಕ್ತ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಇಂದು ಸಾಮಾಜಿಕ ಸಾಮರಸ್ಯ ಕಾಪಾಡುವ ಅವಶ್ಯಕತೆ ಇದೆ. ಶಾಂತಿ ಕದಡುವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದು ತಿಳಿಸಿದರು.

ನಮ್ಮೆಲ್ಲರ ವಿಚಾರ ಶಕ್ತಿ, ಅಂತಶಕ್ತಿ ಒಂದಾಗಬೇಕು. ಮನುಷ್ಯ ಅರಿಷಡ್ವರ್ಗಗಳ ದಾಸನಾಗದೆ, ದಯಾಶೀಲ, ದಾನವಂತನಾಗಬೇಕು. ಎಂಥ ಪರಿಸ್ಥಿತಿಯಲ್ಲೂ ಪ್ರಚೋದನೆಗೆ ಅವಕಾಶ ಕೊಡಬಾರದು ಎಂದು ಹೇಳಿದರು.

ಬಸವಣ್ಣನವರ ಹೊಸ ಅವಿಷ್ಕಾರದಿಂದ ಕಲ್ಯಾಣ ರಾಜ್ಯ ನಿರ್ಮಾಣಗೊಂಡಿತು. ಮಾನವತಾವಾದಕ್ಕೆ ಬೆಲೆ ಸಿಕ್ಕಿತು ಎಂದು ತಿಳಿಸಿದರು.

ಭೌತಿಕವಾದ ಕಟ್ಟಡಗಳನ್ನು ಕಟ್ಟಬಹುದು. ಆದರೆ, ಬೌದ್ಧಿಕತೆ ಕಟ್ಟಲಾಗದು. 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಬೌದ್ಧಿಕ ಸಿದ್ಧಾಂತಗಳನ್ನು ನಾವು ಉಳಿಸಿಕೊಂಡರೆ ಸಾಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿ, ಮುರುಘಾ ಶರಣರು ಜನಪರ ಕಾಳಜಿಯ ಅಪರೂಪದ ಸ್ವಾಮೀಜಿ ಆಗಿದ್ದಾರೆ ಎಂದು ನುಡಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಅನ್ನಪೂರ್ಣ ತಾಯಿ, ಗಂಗಾಂಬಿಕೆ ಅಕ್ಕ, ಉದ್ಯಮಿ ಗುರುನಾಥ ಕೊಳ್ಳೂರು, ಎಚ್.ಕೆ.ಇ. ಸಂಸ್ಥೆ ನಿರ್ದೇಶಕ ಡಾ. ರಜನೀಶ್ ವಾಲಿ, ಮಾತೆ ಮಾಣಿಕೇಶ್ವರಿ ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರು, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಮತೆ, ಯುವ ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಅನಿಲಕುಮಾರ ಪನ್ನಾಳೆ, ವಿದ್ಯಾವತಿ ಬಲ್ಲೂರು, ಪ್ರೊ.ರಾಜಶೇಖರ ಮಂಗಲಗಿ, ಪ್ರಭುಲಿಂಗ ತೂಗಾವೆ, ಕಸ್ತೂರಿ ಪಟಪಳ್ಳಿ ಉಪಸ್ಥಿತರಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಶಂಕರ ಟೋಕರೆ ಸ್ವಾಗತಿಸಿದರು. ಚೆನ್ನಬಸವ ಹೇಡೆ ನಿರೂಪಿಸಿದರು. ಅಲ್ಲಮ ಪ್ರಭು ನಾವದಗೆರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT