ನಿರ್ವಹಣೆ ಕೊರತೆ: ಕಳೆಗುಂದಿದ ಉದ್ಯಾನ, ಹೆಚ್ಚಿದ ಬೀದಿ ನಾಯಿಗಳ ಹಾವಳಿ

7
ಕೊಳವೆಬಾವಿಯಲ್ಲಿ ನೀರು ಬದಲು ನೊರೆ

ನಿರ್ವಹಣೆ ಕೊರತೆ: ಕಳೆಗುಂದಿದ ಉದ್ಯಾನ, ಹೆಚ್ಚಿದ ಬೀದಿ ನಾಯಿಗಳ ಹಾವಳಿ

Published:
Updated:
Prajavani

ಬೀದರ್‌: ಇಲ್ಲಿಯ ಹೈದರಾಬಾದ್‌ ರಸ್ತೆ ಬದಿಯಲ್ಲಿ ಕರ್ನಾಟಕ ಕಾಲೇಜು ಸಮೀಪ ಇರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನ ಅನೇಕ ವರ್ಷಗಳಿಂದ ಪಾಳು ಬಿದ್ದಿದೆ. ಅದರೊಳಗಿನ ಗ್ರಂಥಾಲಯದಲ್ಲಿನ ಪುಸ್ತಕಗಳು ದೂಳು ತಿನ್ನುತ್ತಿದ್ದರೆ, ಕೊಳವೆಬಾವಿಯಿಂದ ನೀರಿನ ಬದಲು ನೊರೆ ಬರುತ್ತಿದೆ.

2003ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿಯೇ ಉದ್ಯಾನ ನಿರ್ಮಾಣ ಮಾಡಲಾಗಿದೆ. ಉದ್ಯಾನದಲ್ಲಿ ನಿರ್ಮಿಸಿದ ಡಾ.ಅಂಬೇಡ್ಕರ್‌ ಗ್ರಂಥಾಲಯವನ್ನು 2003ರ ಏಪ್ರಿಲ್ 14 ರಂದು ಅಂದಿನ ಶಾಸಕ ರಮೇಶಕುಮಾರ ಪಾಂಡೆ, ಸಂಸದ ರಾಮಚಂದ್ರ ವೀರಪ್ಪ, ವಿಧಾನ ಪರಿಷತ್‌ ಸದಸ್ಯರಾದ ಮಾರುತಿರಾವ್ ಮಾಲೆ ಹಾಗೂ ರತ್ನಾ ಕುಶನೂರ ಉಪಸ್ಥಿತಿಯಲ್ಲಿ ಇಂಧನ ಸಚಿವರಾಗಿದ್ದ ಬಸವರಾಜ ಪಾಟೀಲ ಉದ್ಘಾಟಿಸಿದ್ದರು. ಈಗ ಉದ್ಯಾನದ ಸ್ಥಿತಿಯನ್ನು ನೋಡುವವರಿಲ್ಲ.

ಉದ್ಯಾನ ಹಿಂಬದಿಯಲ್ಲಿ ಬೃಹತ್‌ ಕಂದಕ ಇದ್ದು ಓಲ್ಡ್‌ ಸಿಟಿಯ ಮನೆಗಳಿಂದ ಹೊರಬರುವ ಕೊಳಚೆ ನೀರು ಸಂಗ್ರಹವಾಗುತ್ತಿದೆ. ನಗರದಲ್ಲಿ ಒಳಚರಂಡಿ ನಿರ್ಮಾಣ ಮಾಡಿದರೂ ಕಂದಕಕ್ಕೆ ಶೌಚಾಲಯದ ಹೊಲಸು ನೀರು ಬಿಡುವುದು ನಿಂತಿಲ್ಲ. ಕೊಳಚೆ ನೀರು ಕಂದಕದಿಂದ 30 ಅಡಿ ಅಂತರದಲ್ಲಿದ್ದರೂ ಕೊಳವೆಬಾವಿ ಸೇರುತ್ತಿದೆ. ಸಸಿಗಳಿಗೆ ನೀರು ಬಿಡಲು ಮೋಟರ್‌ ಶುರು ಮಾಡಿದರೆ ಸಾಕು ಅದರಿಂದ ನೊರೆಯೇ ಹೊರಗೆ ಬರುತ್ತಿದೆ.

‘ನಗರಸಭೆಯ ಜಾಗ ಒತ್ತುವರಿಯಾಗದಿರಲಿ ಎನ್ನುವ ಉದ್ದೇಶದಿಂದ 15 ವರ್ಷಗಳ ಹಿಂದೆ ಉದ್ಯಾನ ಹಾಗೂ ಗ್ರಂಥಾಲಯ ನಿರ್ಮಿಸಲಾಗಿದೆ. ಕಂದಕದಲ್ಲಿ ಅಪಾರ ಪ್ರಮಾಣದಲ್ಲಿ ಕೊಳಚೆ ನೀರು ಸಂಗ್ರಹವಾಗಿ ಗಬ್ಬು ನಾರುತ್ತಿದೆ. ಹೀಗಾಗಿ ಯಾರೂ ಸಹ ಉದ್ಯಾನದಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಿಲ್ಲ’ ಎಂದು ಕಾವಲುಗಾರ ಅನಂತರಾಮ ಹೇಳುತ್ತಾರೆ.

ಉದ್ಯಾನದ ಅಂದ ಹೆಚ್ಚಿಸಲು ಭಿತ್ತಿಯ ಮೇಲೆ ರಚಿಸಿದ ಬುದ್ಧನ ಪ್ರತಿಕೃತಿ, ಬೌದ್ಧ ಸ್ತೂಪಗಳ ಉಬ್ಬು ಶಿಲ್ಪಗಳು ಇಂದಿಗೂ ಚೆನ್ನಾಗಿಯೇ ಇವೆ. ನೀರಿನ ಟ್ಯಾಂಕ್‌ ಮಾತ್ರ ಹಾಳಾಗಿದೆ. ಬೀದಿ ನಾಯಿಗಳ ಹಿಂಡುಗಳು ಇಲ್ಲಿ ನೆಲೆಯೂರಿವೆ. ಒಬ್ಬ ಮಾಲಿ ಮಾತ್ರ ಇದ್ದು, ಅಲಂಕಾರಿಕ ಸಸ್ಯ ಹಾಗೂ ಗಿಡಗಳಿಗೆ ನೀರು ಬಿಟ್ಟು ಜೀವ ಉಳಿಸಿದ್ದಾರೆ. ಇಷ್ಟು ಬಿಟ್ಟರೆ ಉದ್ಯಾನಕ್ಕೆ ಕಳೆಯೇ ಇಲ್ಲ.

ಗ್ರಂಥಾಲಯಕ್ಕೆ ಇಂದಿಗೂ ಅನೇಕ ದಿನಪತ್ರಿಕೆಗಳು ಬರುತ್ತವೆ. ಕೆಲ ವೃದ್ಧರು ಮಾತ್ರ ಆಗಾಗ ಬಂದು ಹೋಗುತ್ತಾರೆ.
ಗ್ರಂಥಾಲಯದಲ್ಲಿರುವ ಪುಸ್ತಕಗಳು ಅನೇಕ ವರ್ಷಗಳಿಂದ ದೂಳು ತಿನ್ನುತ್ತಿವೆ. ಗ್ರಂಥಾಲಯ ಸ್ವಚ್ಛಗೊಳಿ ಸಲು ಸಿಬ್ಬಂದಿಯೂ ಇಲ್ಲ. ಕಾವಲು ಗಾರರೇ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಕೊಂಡಿದ್ದಾರೆ. ಟೇಬಲ್‌, ಕುರ್ಚಿಗಳು ತುಕ್ಕು ಹಿಡಿದಿವೆ. ಹರಕಲು ಬಟ್ಟೆಯನ್ನು ಟೇಬಲ್‌ ಮೇಲೆ ಹಾಕಲಾಗಿದೆ. ಒಟ್ಟಾರೆ ಗ್ರಂಥಾಲಯ ಅಂದವನ್ನೇ ಕಳೆದುಕೊಂಡಿದೆ.

‘ಮೊದಲು ಗ್ರಂಥಾಲಯ ಹಾಗೂ ಉದ್ಯಾನ ನಿರ್ವಹಣೆಗೆ ಒಂಬತ್ತು ಜನ ನೌಕರರು ಇದ್ದರು. ಆಗ ಉದ್ಯಾನ ಹಸಿರಿನಿಂದ ನಳನಳಿಸುತ್ತಿತ್ತು. ಈಗ ಕಾವಲುಗಾರ ಬಿಟ್ಟರೆ ನಾನು ಒಬ್ಬನೇ ಇದ್ದೇನೆ. ಕೊಳವೆಬಾವಿ ನೀರು ಕಲುಷಿತಗೊಂಡಿದ್ದು, ಮೈಗೆ ತಗುಲಿದರೆ ಸಾಕು ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಉದ್ಯಾನದ ಮಾಲಿ ಬಸಪ್ಪ ಹೇಳುತ್ತಾರೆ.

‘ಪ್ರಸ್ತುತ ಜಿಲ್ಲೆಯಲ್ಲಿ ಮೂವರು ಸಚಿವರು ಇದ್ದಾರೆ. ಮೂರು ಅವಧಿಗೆ ಶಾಸಕರಾಗಿ ಇದೀಗ ಸಚಿವ ಸ್ಥಾನ ಅಲಂಕರಿಸಿರುವ ರಹೀಂ ಖಾನ್‌ ಒಂದು ಬಾರಿಯೂ ಉದ್ಯಾನ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿಲ್ಲ. ಸಚಿವರು ಹಾಗೂ ಅಧಿಕಾರಿಗಳು ಇದೇ ಮಾರ್ಗದಲ್ಲಿ ನೂರಾರು ಬಾರಿ ಓಡಾಡಿದರೂ ಉದ್ಯಾನದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ’ ಎಂದು ಬೀದರ್‌ ಯುಥ್ ಎಂಪಾವರ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶಾಹೇದ್‌ ಅಲಿ ಬೇಸರ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !