ಗುರುವಾರ , ಆಗಸ್ಟ್ 22, 2019
27 °C
ಎರಡನೇ ಪ್ರಗತಿ ಪರಿಶೀಲನಾ ಸಭೆಗೂ ಕೆಲ ಅಧಿಕಾರಿಗಳು ಗೈರು

ಬೀದರ್‌: ಸಿಇಒ ನೋಟಿಸ್‌ಗೂ ಇಲ್ಲ ಬೆಲೆ

Published:
Updated:
Prajavani

ಬೀದರ್‌: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅವರು ಮೊದಲ ಬಾರಿಗೆ ಕರೆದಿದ್ದ ಕೆಡಿಪಿ ಮಾಸಿಕ ಸಭೆಗೆ 17 ಅಧಿಕಾರಿಗಳು ಗೈರಾಗಿದ್ದರೆ, ಸಿಇಒ ನೀಡಿದ್ದ ನೋಟಿಸ್‌ನ್ನೂ ನಿರ್ಲಕ್ಷ್ಷಿಸಿ ಕೆಲ ಅಧಿಕಾರಿಗಳು ಮಂಗಳವಾರ ಮತ್ತೆ ಎರಡನೇ ಸಭೆಯಿಂದಲೂ ದೂರ ಉಳಿದು ನಿರ್ಲಕ್ಷ್ಯ ತೋರಿದರು.

ಹಿಂದಿನ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್‌ ಜಾರಿ ಮಾಡಲಾಗಿದೆ. ಒಬ್ಬರೂ ಅದಕ್ಕೆ ಉತ್ತರ ನೀಡಿಲ್ಲ. ಅಧ್ಯಕ್ಷೆ ಕೇಳಿದ ಮಾಹಿತಿಯನ್ನೂ ಒದಗಿಸಿಲ್ಲ. ಕೆಲವರು ಮಾಹಿತಿ ಇಲ್ಲದೆ ಸಭೆಗೆ ಬಂದು ಹಾರಿಕೆಯ ಉತ್ತರಗಳನ್ನು ಕೊಟ್ಟರು. ಪ್ರಗತಿಯ ಮಾಹಿತಿ ನೀಡದ್ದಕ್ಕೆ ಅಧ್ಯಕ್ಷೆ ಗೀತಾ ಚಿದ್ರಿ ಹಾಗೂ ಸಿಇಒ ಮಹಾಂತೇಶ ಬೀಳಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಅಧಿಕಾರಿಗಳಲ್ಲೇ ತಾಳಮೇಳ ಇಲ್ಲ, ನಾವೇನು ಮಾಡಬೇಕು? ಎಂದು ಸಭೆಯಲ್ಲಿ ಹಾಜರಿದ್ದ ಕೆಲ ಅಧಿಕಾರಿಗಳೇ ಗೊಣಗಾಡುತ್ತಿದ್ದರು. ಕೆಡಿಪಿ ಸಭೆಗೆ ಹಾಜರಾಗುವಂತೆ ಸಿಇಒ ಸೂಚನೆ ನೀಡಿದರೆ, ದೇವರಾಜು ಅರಸು ಜಯಂತಿ ಆಚರಣೆಯ ಪೂರ್ವಭಾವಿ ಸಭೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು. ಕೆಲವರು ಅಲ್ಲಿ ಗೈರಾದರೆ, ಕೆಲವರು ಇಲ್ಲಿ ಗೈರಾದರು. ಕೆಲವು ಅಧಿಕಾರಿಗಳು ಎರಡೂ ಸಭೆಗಳಿಗೆ ಹಾಜರಾಗದೆ ತಪ್ಪಿಸಿಕೊಂಡರು.

ಬಸವಕಲ್ಯಾಣ, ಭಾಲ್ಕಿ ತಾಲ್ಲೂಕು ಪಂಚಾಯಿತಿ ಇಒ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಬಂದಿರಲಿಲ್ಲ. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಸಭೆಗೆ ಹಾಜರಾದರೂ ಮಾಹಿತಿಯನ್ನೇ ತಂದಿರಲಿಲ್ಲ. ಹಿರಿಯ ಅಧಿಕಾರಿಗಳಿಗೆ ಮುಂಚಿತವಾಗಿ ವರದಿಯನ್ನೂ ಕೊಟ್ಟಿರಲಿಲ್ಲ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಖಾಲಿದ್‌ಗೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಲು ಬರಲಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗೆ ಇಲಾಖೆಯ ಪ್ರಗತಿ ವಿವರಿಸಲಾಗಲಿಲ್ಲ. ಅವರು ಇನ್ನೊಬ್ಬ ಅಧಿಕಾರಿಯ ಸಹಾಯ ಪಡೆಯಬೇಕಾಯಿತು. ಒಟ್ಟಾರೆ ಪ್ರಗತಿ ಪರಿಶೀಲನೆ ಸಭೆ ಅಭಿವೃದ್ಧಿಯನ್ನೇ ಅಣಕಿಸುವಂತಿತ್ತು.

ಪ್ರಮುಖ ಇಲಾಖೆಯ ಅಧಿಕಾರಿಗಳ ಗೈರು ಎದ್ದು ಕಾಣಿಸಿತು. ಅಧಿಕಾರಿಗಳು ಸಭೆಗೆ ಸರಿಯಾಗಿ ಮಾಹಿತಿ ಕೊಡದ ಕಾರಣ ಸಿಇಒ ಮಧ್ಯಪ್ರವೇಶಿಸಿ ತರಾಟೆಗೆ ತೆಗೆದುಕೊಂಡರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅವ್ಯವಸ್ಥೆ ಮುಂದುವರಿದಿದೆ. ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಅನೇಕ ಬಾರಿ ಎಚ್ಚರಿಕೆ ನೀಡಿದರೂ ಕಾರ್ಯವೈಖರಿಯಲ್ಲಿ ಸುಧಾರಣೆ ಕಂಡು ಬಂದಿಲ್ಲ ಎಂದು ಆಕ್ರೋಶದಿಂದ ಹೇಳಿದರು.

ಎಸ್‌ಸಿ, ಎಸ್‌ಟಿ ಹಾಗೂ ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಕೊಡಲಾಗುತ್ತಿದೆ. ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಿದ್ದೇನೆ. ವ್ಯವಸ್ಥೆಯಲ್ಲಿ ಸುಧಾರಣೆಯಾಗಿಲ್ಲ ಎಂದು ಗೀತಾ ಚಿದ್ರಿ ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಗೆ ಮೂರು ದಿನ ಮೊದಲೇ ಮೇಲ್‌ ಮೂಲಕ ಮಾಹಿತಿ ಕಳಿಸಿದ್ದರೂ ಅಲ್ಲಿನ ಅಧಿಕಾರಿಗಳು ಮೇಲ್‌ ನೋಡಿರಲಿಲ್ಲ. ಹೀಗಾಗಿ ಈ ಅಧಿಕಾರಿಗಳು ಮೇಲ್‌ ಕಳಿಸಿದ್ದ ಬಗ್ಗೆ ಮೊಬೈಲ್‌ನಲ್ಲಿ ಪ್ರತ್ಯೇಕ್ಷವಾಗಿಯೇ ತೋರಿಸಿದರು.

ಸಭೆಯಲ್ಲಿ ಪ್ರಗತಿಯ ವಿವರ ದೊರೆಯಲೇ ಇಲ್ಲ. ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದಕ್ಕಾಗಿ ಅಧಿಕಾರಿಗಳು ಮೇಲ್ನೋಟಕ್ಕೆ ಹಾರಿಕೆ ಉತ್ತರ ಕೊಡುತ್ತಿರುವುದು ಕಂಡು ಬಂದಿತು.

Post Comments (+)