ಭಾನುವಾರ, ನವೆಂಬರ್ 17, 2019
24 °C

ಬೀದರ್ ನಗರದಲ್ಲಿ ಸಹಜ ಸ್ಥಿತಿ

Published:
Updated:
Prajavani

ಬೀದರ್: ಶನಿವಾರ ಬೆಳಿಗ್ಗೆ ಹೊರ ಬಿದ್ದ‌ಅಯೋಧ್ಯೆ ವಿವಾದ ಕುರಿತ ಸುಪ್ರೀಂಕೋರ್ಟ್‌ ತೀರ್ಪು ಜಿಲ್ಲೆಯ ಜನ ಸಮುದಾಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ನಗರದಲ್ಲಿ ಸಹಜ ಸ್ಥಿತಿ ಇತ್ತು. ವ್ಯಾಪಾರಿಗಳು ತೀರ್ಪಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ವ್ಯಾಪಾರಿಗಳು ಎಂದಿನಂತೆ ಬೆಳಿಗ್ಗೆ ಅಂಗಡಿಗಳ ಬಾಗಿಲು ತೆರೆದು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಎರಡನೆಯ ಶನಿವಾರವಾದ ಕಾರಣ ಸರ್ಕಾರಿ ಕಚೇರಿಗಳಿಗೆ ರಜೆ ಇತ್ತು. ಶಾಲಾ ಕಾಲೇಜುಗಳಿಗೂ ಸರ್ಕಾರ ರಜೆ ಘೋಷಿಸಿದ್ದರಿಂದ ಅನೇಕರು ಹಬ್ಬದ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.

ದೀಪಾವಳಿ ಪ್ರಯುಕ್ತ ಕೆಲವರು ಲಕ್ಷ್ಮಿಪೂಜೆ ನೆರವೇರಿಸಿದರೆ, ಇನ್ನು ಕೆಲವರು ತುಳಸಿ ವಿವಾಹ ಮಾಡಿ ಭಕ್ತಿಭಾವ ಮೆರೆದರು. ಮಾರುಕಟ್ಟೆಯಲ್ಲಿ ಕಬ್ಬು, ಚೆಂಡು ಹೂವು, ಅಡಿಕೆ ಹೂವು, ಹುಣಸೆಕಾಯಿ, ನೆಲ್ಲಿಕಾಯಿ ಮಾರಾಟ ಭರದಿಂದ ನಡೆಯಿತು. ಭಗತ್‌ಸಿಂಗ್‌ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಹಾಗೂ ಸಿದ್ಧಾರ್ಥ ಕಾಲೇಜು ಸಮೀಪದ ವೃತ್ತದಲ್ಲಿ ಖರೀದಿ ಭರಾಟೆ ಕಂಡು ಬಂದಿತು.

ಪ್ರಮುಖ ವೃತ್ತಗಳಲ್ಲಿ ನಾಲ್ವರು ಪೊಲೀಸ್‌ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ರಾತ್ರಿ ಗಸ್ತುತಿರುಗಿ ಸೂಕ್ಷ್ಮ ಪ್ರದೇಶದ ಮೇಲೆ ನಿಗಾ ಇಟ್ಟಿದ್ದರು. ಕೆಎಸ್‌ಆರ್‌ಪಿ, ಡಿಎಆರ್ ತುಕ್ಕಡಿ ಪೊಲೀಸ್‌ ಮುಖ್ಯಾಲಯದಲ್ಲೇ ಇದ್ದವು. ಯಾವುದೇ ಸಂದರ್ಭದಲ್ಲಿ ಪೊಲೀಸ್‌ ತುಕ್ಕಡಿಯನ್ನು ಬಳಸಿಕೊಳ್ಳಲು ಅಣಿಗೊಳಿಸಲಾಗಿತ್ತು.

ಹೊರ ಜಿಲ್ಲೆಗಳಿಂದ ಬರುವ ಹಾಗೂ ನಗರದಿಂದ ಹೊರಗೆ ಹೋಗುವ ವಾಹನಗಳ ಮೇಲೆ ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿತ್ತು. ಬಸ್, ಆಟೊ ಸಂಚಾರ ಸಹಜವಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಪ್ರತಿಕ್ರಿಯಿಸಿ (+)