ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 14ಕ್ಕೆ ಬೀದರ್‌ಗೆ ಮುಖ್ಯಮಂತ್ರಿ: ಸಚಿವ ಬಂಡೆಪ್ಪ ಕಾಶೆಂಪೂರ

Last Updated 26 ಅಕ್ಟೋಬರ್ 2018, 15:38 IST
ಅಕ್ಷರ ಗಾತ್ರ

ಬೀದರ್‌: ‘ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನವೆಂಬರ್‌ 14 ರಂದು ಬೀದರ್‌ಗೆ ಬರಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ನವೆಂಬರ್‌ 14 ರಿಂದ 20 ರ ವರೆಗೆ ದೇಶದಾದ್ಯಂತ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಬೆಂಗಳೂರಿನಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಾರಿ ಬೀದರ್‌ನಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಸಹಕಾರ ಸಚಿವರೂ ಆದ ಅವರು ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ದೇಶದ ವಿವಿಧ ಭಾಗಗಳ ಸಹಕಾರ ಧುರೀಣರು ಆಗಮಿಸಲಿದ್ದು, ಅಂದಾಜು 40 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಸಹಕಾರ ರಂಗದಲ್ಲಿ ಅದ್ಭುತ ಸೇವೆ ಸಲ್ಲಿಸಿದ ವಿಭಾಗಕ್ಕೆ ಒಬ್ಬರಂತೆ ಐವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು.

‘ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆಯು 65ನೇ ಸಹಕಾರ ಸಪ್ತಾಹದ ಧ್ಯೇಯವಾಗಿದೆ. ನ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಮಾರಾಟ, ಸಂಸ್ಕರಣ ಮತ್ತು ಶೇಖರಣೆ ಶೀರ್ಷಿಕೆಯಡಿ ಚರ್ಚೆ, ಚಿಂತನ –ಮಂಥನ ನಡೆಯಲಿದೆ’ ಎಂದು ತಿಳಿಸಿದರು.

‘ನ.15ರಂದು ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮವು ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳದ ಕೃಷಿಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರದ ಮೇಲೆ ಬೆಳಕು ಚೆಲ್ಲಲಿದೆ. ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ ಕುರಿತು ನ.16 ರಂದು ರಾಯಚೂರು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿಂತನ– ಮಂಥನ ನಡೆಯಲಿದೆ. ನ.17ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.

‘ನ.18ರಂದು ಹಾವೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸರ್ಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತ ಚರ್ಚೆ ನಡೆಯಲಿದೆ. ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಕುರಿತು 19ರಂದು ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವಲೋಕನ ನಡೆಯಲಿದೆ. ನ.20ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಕೌಶಲ, ತಾಂತ್ರಿಕತೆ ವೃದ್ಧಿ ಕುರಿತು ಚರ್ಚೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಬೀದರ್‌ ಡಿಸಿಸಿ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ನಿಕಟಪೂರ್ವ ಉಪಾಧ್ಯಕ್ಷ ಭೀಮರಾವ್‌ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT