ಸೋಮವಾರ, ನವೆಂಬರ್ 29, 2021
20 °C
ಜಿಲ್ಲೆಯ ಗಡಿ ಗ್ರಾಮಗಳ ಜನತೆಗೆ ಉತ್ತಮ ಆರೋಗ್ಯ ಸೇವೆ

ಬೀದರ್‌ ಜಿಲ್ಲೆಯ ಮೂರು ಪಿಎಚ್‌ಸಿಗಳಿಗೆ ಗುಣಮಟ್ಟದ ಪ್ರಮಾಣಪತ್ರ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೈರ್ಮಲ್ಯ ಸೇರಿದಂತೆ ಆರು ವಿಭಾಗಗಳಲ್ಲಿ ಮೌಲ್ಯಮಾಪನ ನಡೆಸಿ ರಾಷ್ಟ್ರಮಟ್ಟದಲ್ಲಿ ನೀಡಲಾಗುವ ಗುಣಮಟ್ಟದ ಪ್ರಮಾಣಪತ್ರ ಬೀದರ್‌ ಜಿಲ್ಲೆಯ ಮೂರು ಪಿಎಚ್‌ಸಿಗಳಿಗೆ ಲಭಿಸಿದೆ.

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯದ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಮಾಣಪತ್ರ ನೀಡಿದೆ. ಇದರಲ್ಲಿ ಜಿಲ್ಲೆಯ ಮೂರು ಪಿಎಚ್‌ಸಿಗಳು ಇರುವುದು ವಿಶೇಷ.

ಔರಾದ್ ತಾಲ್ಲೂಕಿನ ಚಿಂತಾಕಿ, ಭಾಲ್ಕಿ ತಾಲ್ಲೂಕಿನ ಧನ್ನೂರಾ, ಕಮಲನಗರ ತಾಲ್ಲೂಕಿನ ಠಾಣಾಕುಶನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಮಾಣಪತ್ರ ಪಡೆದಿವೆ.

ಸ್ವಚ್ಛತೆ, ಸೇವಾ ನಿಬಂಧನೆ, ರೋಗಿಯ ಹಕ್ಕುಗಳು, ಒಳ ವಿಭಾಗದ ಸೇವೆ, ಬೆಂಬಲ ಸೇವೆ, ಕ್ಲಿನಿಕಲ್ ಸೇವೆ,
ಸೋಂಕು ನಿಯಂತ್ರಣ, ಗುಣಮಟ್ಟ ನಿರ್ವಹಣೆ ಹಾಗೂ ಸಮಗ್ರ ಫಲಿತಾಂಶ ಪರಿಶೀಲಿಸಲಾಗಿತ್ತು. ಆರೋಗ್ಯ ಇಲಾಖೆಯ ಮಾನದಂಡಗಳ ಅಡಿಯಲ್ಲಿ ಸೇವೆಗಳನ್ನು ಅಚ್ಚುಕಟ್ಟಾಗಿ ಒದಗಿಸಲಾಗಿದೆಯೇ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಮೌಲ್ಯಮಾಪನದ ಸಂದರ್ಭದಲ್ಲಿ ಅಂಕಗಳನ್ನು ನೀಡಲಾಗಿತ್ತು. ಶೇಕಡ 70ಕ್ಕೂ ಹೆಚ್ಚು ಅಂಕ ಪಡೆದ ಪಿಎಚ್‌ಸಿಗಳನ್ನು ಪ್ರಮಾಣಪತ್ರಕ್ಕೆ ಪರಿಗಣಿಸಲಾಗಿತ್ತು.

ಮೊದಲ ಹಂತದಲ್ಲಿ ಆಯಾ ಪಿಎಚ್‌ಸಿಗಳು ಆಂತರಿಕ ಮೌಲ್ಯಮಾಪನ ಮಾಡಿ ವರದಿ ಕೊಟ್ಟಿದ್ದವು. ನಂತರ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮೌಲ್ಯಮಾಪನ ನಡೆದಿತ್ತು. ಒಟ್ಟು ನಾಲ್ಕು ಹಂತಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು.

ಕೋವಿಡ್‌ ತಡೆಗಟ್ಟುವ ಕಾರ್ಯದ ಹೊರತಾಗಿಯೂ ಜಿಲ್ಲೆಯ ಮೂರು ಆರೋಗ್ಯ ಸಂಸ್ಥೆಗಳು ಗುಣಮಟ್ಟದ ಪ್ರಮಾಣಪತ್ರ ಪಡೆದಿರುವುದು ದೊಡ್ಡ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಇನ್ನುಳಿದ ಆರೋಗ್ಯ ಸಂಸ್ಥೆಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯ ಇಲಾಖೆ ಹಾಗೂ ಜಿಲ್ಲೆಯ ಘನತೆ ಹೆಚ್ಚಿಸಬೇಕು  ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು