ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಎನ್‍ಎಸ್‍ಎಸ್‍ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ

ಜಿಲ್ಲೆಯಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟ ಅಚ್ಚರಿಯ ಬೆಳವಣಿಗೆ
Last Updated 29 ಅಕ್ಟೋಬರ್ 2020, 15:51 IST
ಅಕ್ಷರ ಗಾತ್ರ

ಜನವಾಡ: ಅಚ್ಚರಿಯ ಬೆಳವಣಿಗೆಯಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ ಆಯ್ಕೆಯಾಗಿದ್ದಾರೆ.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಡಿ.ಕೆ. ಸಿದ್ರಾಮ ಅಧ್ಯಕ್ಷ ಮತ್ತು ಬಾಲಾಜಿ ಚವ್ಹಾಣ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅವಧಿಗೆ ಕಾರ್ಖಾನೆ ಅಧ್ಯಕ್ಷರಾಗಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಉಮಾಕಾಂತ ನಾಗಮಾರಪಳ್ಳಿ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಕಾರ್ಖಾನೆಯ ಎಲ್ಲ 13 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಹೀಗಾಗಿ ಅವರೇ ಅಧ್ಯಕ್ಷರಾಗಿ ಮರು ಆಯ್ಕೆಯಾಗುವುದು ನಿಶ್ಚಿತ ಎಂದೇ ನಂಬಲಾಗಿತ್ತು.

ಆದರೆ, ಇದೀಗ ಡಿ.ಕೆ. ಸಿದ್ರಾಮ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹಾಗೂ ಉಮಾಕಾಂತ ನಾಗಮಾರಪಳ್ಳಿ ಅವರೇ ಅಧ್ಯಕ್ಷ ಸ್ಥಾನಕ್ಕೆ ಸಿದ್ರಾಮ ಅವರ ಹೆಸರು ಪ್ರಸ್ತಾಪಿಸಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಹೊಸ ಬೆಳವಣಿಗೆಗೆ ಕಾರಣ ಏನಿರಬಹುದು?, ಇದಕ್ಕೂ ಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೂ ಸಂಬಂಧ ಇದೆಯೇ?, ಆ ಚುನಾವಣೆಯಲ್ಲಿ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿರುವ ಪ್ರಯುಕ್ತ ಈ ಬೆಳವಣಿಗೆ ನಡೆದಿದೆಯೇ ಎಂಬಿತ್ಯಾದಿ ಚರ್ಚೆಗಳು ಜೋರು ಹಿಡಿದಿವೆ.

ಅಧ್ಯಕ್ಷ ಗಾದಿ ಮೇಲೆ ಡಿ.ಕೆ. ಸಿದ್ರಾಮ ಅವರನ್ನು ಕೂಡಿಸಿರುವುದರ ಹಿಂದಿನ ಹೊಸ ರಾಜಕೀಯ ಸಮೀಕರಣ ಏನಿರಬಹುದು ಎನ್ನುವುದು ಜಿಲ್ಲೆಯ ಜನರ ಕುತೂಹಲ ಕೆರಳಿಸಿದೆ.

ಕಾರ್ಖಾನೆಯಲ್ಲಿ ಅನಿರೀಕ್ಷಿತ ವಿದ್ಯಮಾನ: ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಕಾರ್ಖಾನೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅನಿರೀಕ್ಷಿತ ವಿದ್ಯಮಾನಗಳು ಜರುಗಿದವು.

ಉಮಾಕಾಂತ ನಾಗಮಾರಪಳ್ಳಿ ಅವರು ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಸಿದ್ರಾಮ ಅವರ ಹೆಸರು ಪ್ರಸ್ತಾಪಿಸಿದಾಗ, ನಿರ್ದೇಶಕರು ಅವಕ್ಕಾದರು. ನಿಮ್ಮ ನೇತೃತ್ವದಲ್ಲಿ ಕಾರ್ಖಾನೆ ಚುನಾವಣೆ ನಡೆದಿದೆ. ನಿಮ್ಮ ಮೇಲೆ ವಿಶ್ವಾಸ ಇಟ್ಟು ರೈತರು ನಮ್ಮನ್ನು ನಿರ್ದೇಶಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಾವು ನಿಮ್ಮನ್ನು ಬಿಟ್ಟು ಬೇರೆ ಯಾರೂ ಅಧ್ಯಕ್ಷರಾಗಲು ಒಪ್ಪುವುದಿಲ್ಲ. ನೀವೇ(ಉಮಾಕಾಂತ ನಾಗಮಾರಪಳ್ಳಿ) ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದರು.

‘ನನ್ನ ಮೇಲೆ ನಂಬಿಕೆ ಇಡಿ. ನಿಮ್ಮ ಆಶಯದಂತೆಯೇ ಕಾರ್ಖಾನೆ ಮುನ್ನಡೆಯಲಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿ’ ಎಂದು ಉಮಾಕಾಂತ ಅವರು ಮನವಿ ಮಾಡಿ, ನಿರ್ದೇಶಕರ ಮನವೊಲಿಸಿದರು.

ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕಾರ್ಯದರ್ಶಿ ವಿಜಯಕುಮಾರ ಎಸ್. ಪಾಟೀಲ ಗಾದಗಿ ಹಾಜರಿದ್ದರು.

ನಿರ್ದೇಶಕರ ಮನವೊಲಿಕೆ ಬೆಳವಣಿಗೆ ಒಂದೆಡೆ ನಡೆದರೆ, ಮತ್ತೊಂದೆಡೆ ಕಾರ್ಖಾನೆ ಕಾರ್ಮಿಕರು ಉಮಾಕಾಂತ ನಾಗಮಾರಪಳ್ಳಿ ಅವರು ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಧ್ಯಕ್ಷ ಸ್ಥಾನದಲ್ಲಿ ಅವರೇ ಮುಂದುವರಿಯಬೇಕು. ಇಲ್ಲವಾದರೆ, ನಾವ್ಯಾರೂ ನಾಳೆಯಿಂದ ಕೆಲಸಕ್ಕೆ ಹಾಜರಾಗುವುದಿಲ್ಲ. ಸಾಮೂಹಿಕ ರಾಜೀನಾಮೆ ಕೊಡುತ್ತೇವೆ ಎಂದು ಬೆದರಿಕೆ ಒಡ್ಡಿದ ಪ್ರಸಂಗವೂ ನಡೆಯಿತು.

ಕಾರ್ಖಾನೆ ಚುಕ್ಕಾಣಿ ಹಿಡಿದ ಮೂರನೇ ವ್ಯಕ್ತಿ

ಬೀದರ್‌: ಜಿಲ್ಲಾ ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕೀಯ ಪಯಣ ಆರಂಭಿಸಿದ ಭಾಲ್ಕಿ ತಾಲ್ಲೂಕಿನ ಕೇಸರಜವಳಗಾದ ಡಿ.ಕೆ. ಸಿದ್ರಾಮ ಅವರಿಗೆ ಎನ್‍ಎಸ್‍ಎಸ್‍ಕೆ ಅಧ್ಯಕ್ಷ ಗಾದಿಯ ಅದೃಷ್ಟ ಒಲಿದಿದೆ.
ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾಪರಳ್ಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಅವರ ನಂತರ ಕಾರ್ಖಾನೆ ಚುಕ್ಕಾಣಿ ಹಿಡಿದ ಗೌರವಕ್ಕೆ ಭಾಜನರಾಗಿದ್ದಾರೆ.
ಸಿದ್ರಾಮ ಅವರು 2013 ರಲ್ಲಿ ಕೆಜೆಪಿ ಹಾಗೂ 2018 ರಲ್ಲಿ ಬಿಜೆಪಿಯಿಂದ ಭಾಲ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದರು. ಜಿಲ್ಲೆಯಲ್ಲಿ ಅವರು ದಿ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT