ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಪೂರ ಪೋಷಕಾಂಶಗಳ ಆಹಾರ ‘ಮೊಟ್ಟೆ’

ಸರ್ಕಾರಿ ಶಾಲೆಗಳಲ್ಲಿ ತತ್ತಿಗೆ ಹೆಚ್ಚಿದ ಬೇಡಿಕೆ
Last Updated 13 ಡಿಸೆಂಬರ್ 2021, 15:13 IST
ಅಕ್ಷರ ಗಾತ್ರ

ಬೀದರ್‌: ಅಪೌಷ್ಟಿಕತೆ ನಿವಾರಿಸಲು ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಪ್ರಾಥಮಿಕ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಹಾಗೂ ಹಾಲು ಕೊಡುತ್ತಿದೆ. ಕಡಲೆ ಚಿಕ್ಕಿ ಸಹ ಕೊಡಲು ಮುಂದಾಗಿದೆ. ಆದರೆ, ಮೊಟ್ಟೆಗೆ ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಮೊಟ್ಟೆ ಸಸ್ಯಾಹಾರವೋ, ಮಾಂಸಾಹಾರವೋ ಎನ್ನುವುದೇ ವಿವಾದಕ್ಕೆ ಮೂಲವಾಗಿದೆ. ಬಹುಸಂಖ್ಯಾತ ಮಕ್ಕಳು ಮಾತ್ರ ಖುಷಿಯಿಂದ ಮೊಟ್ಟೆ ಸೇವಿಸುತ್ತಿದ್ದಾರೆ.

ಬೆಂಗಳೂರಿನ ಹೆಬ್ಬಾಳದಲ್ಲಿ 2013ರಲ್ಲಿ ನಡೆದ ವಿಶ್ವ ಮೊಟ್ಟೆ ದಿನಾಚರಣೆ ಕಾರ್ಯಕ್ರಮದಲ್ಲಿ ಅಂದಿನ ಕಾನೂನು ಹಾಗೂ ಪಶು ಸಂಗೋಪನೆ ಸಚಿವ ಜಯಚಂದ್ರನ್ ಅವರು ಮೊಟ್ಟೆಯ ಬಗ್ಗೆ ತಪ್ಪು ಕಲ್ಪನೆ ಇದೆ. ಮಾಂಸಾಹಾರವಲ್ಲ, ಸಸ್ಯಾಹಾರ ಎಂದು ಪ್ರತಿಪಾದಿಸಿದ್ದರು. ಈಗಿನ ಪಶು ಸಂಗೋಪನೆ ಸಚಿವರೂ ಮೊಟ್ಟೆ ವಿತರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೂಡ ಮೊಟ್ಟೆ ದ್ರವಾಹಾರ ಹೊರತು ಮಾಂಸಾಹಾರ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ವ್ಯಕ್ತಿಯ ಆರೋಗ್ಯ ಸದೃಢಗೊಳಿಸುವಲ್ಲಿ ಮೊಟ್ಟೆ ಬಹುಮುಖ್ಯ ಪಾತ್ರ ವಹಿಸುತ್ತದೆ. ವರ್ಷದಲ್ಲಿ 180 ಮೊಟ್ಟೆಗಳನ್ನು ಸೇವಿಸುವುದರಿಂದ ಯಾವ ರೋಗಗಳೂ ಬರುವುದಿಲ್ಲ’ ಎಂದು ಕರ್ನಾಟಕ ಪಶು, ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರದ ಮುಖ್ಯಸ್ಥ ಪ್ರಕಾಶ ರಾಠೋಡ್ ಹೇಳುತ್ತಾರೆ.

‘ಮೊಟ್ಟೆಯಲ್ಲಿ ವಿಟಮಿನ್ ಬಿ12, ವಿಟಮಿನ್ ಡಿ, ಒಮೆಗಾ 3, ವಿಟಮಿನ್. ಜಿಂಕ್, ಫಾಸ್ಪರಸ್ ಅಂಶಗಳು ಬಹಳಷ್ಟು ಇವೆ. ಮೊಟ್ಟೆ ಮಿದುಳು, ಹೃದಯ ಹಾಗೂ ಚರ್ಮದ ಆರೋಗ್ಯಕ್ಕೆ ಹೇರಳವಾಗಿ ಪೋಷಕಾಂಶ ಒದಗಿಸುತ್ತದೆ. ದೃಷ್ಟಿ ದೋಷ ನಿವಾರಣೆ ಮಾಡುವ ಜತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ’ ಎನ್ನುತ್ತಾರೆ.
‘ಮೊಟ್ಟೆ ದೇಹದಲ್ಲಿನ ಅಪೌಷ್ಟಿಕತೆ ಕಡಿಮೆ ಮಾಡುತ್ತದೆ. ಅಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಮೊಟ್ಟೆ ಕೊಡುತ್ತಿದೆ. ಮೊಟ್ಟೆ ಮಕ್ಕಳ ಆರೋಗ್ಯ ಪೂರ್ಣ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ ಹೇಳುತ್ತಾರೆ.

‘ತಾಯಿಯ ಎದೆ ಹಾಲಿನ ನಂತರ ಮೊಟ್ಟೆ ಎಲ್ಲಕ್ಕಿಂತ ಮೊಟ್ಟೆ ಶ್ರೇಷ್ಠ ಆಹಾರವಾಗಿದೆ’ ಎಂದು ವಿವರಿಸುತ್ತಾರೆ.

* * *
ಮೊಟ್ಟೆಯಲ್ಲಿ ಅಂತಹದ್ದೇನಿದೆ ?

ಪ್ರತಿ 100 ಗ್ರಾಂ ಮೊಟ್ಟೆಯಲ್ಲಿ 12.14 ಗ್ರಾಂ ಪ್ರೊಟಿನ್, 11.15 ಗ್ರಾಂ. ಕೊಬ್ಬಿನಾಂಶ, 1.2 ಗ್ರಾಂ. ಸಕ್ಕರೆ ಹಾಗೂ ಉಳಿದ 74.07 ಗ್ರಾಂ. ನಷ್ಟು ನೀರಿನಾಂಶ ಇರುತ್ತದೆ. ಒಂದು ಮೊಟ್ಟೆಯಲ್ಲಿ 0.3 ಗ್ರಾಂ. ಪ್ರೊಟಿನ್ ಅಂಶವಿದ್ದು ಸುಲಭವಾಗಿ ಜೀರ್ಣವಾಗಬಲ್ಲದು.

ಅತಿ ಕಡಿಮೆ ಬೆಲೆಯಲ್ಲಿ ದೊರಕುವ ಮೊಟ್ಟ ಕಲಬೆರಕೆ ಮಾಡಲಾಗದ ಶುದ್ಧ ಹಾಗೂ ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವಾಗಿದೆ. ಮನುಷ್ಯನಿಗೆ ಅಗತ್ಯವಾಗಿ ಬೇಕಿರುವ 24 ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪೌಷ್ಟಿಕಾಂಶಗಳ ಪೈಕಿ 23 ಅವಶ್ಯಕ ಪೌಷ್ಟಿಕಾಂಶಗಳು ಕೋಳಿ ಮೊಟ್ಟೆಯಲ್ಲಿದವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ ಒಬ್ಬ ಮನುಷ್ಯ ವರ್ಷಕ್ಕೆ ಸರಾಸರಿ 180 ಮೊಟ್ಟೆಗಳನ್ನು ಸೇವಿಸಬೇಕು. ಆದರೆ, ಭಾರತದಲ್ಲಿ ಈಗ ಕೇವಲ ಸರಾಸಗಿ 86 ಮೊಟ್ಟೆಗಳನ್ನು ಸೇವಿಸಲಾಗುತ್ತಿದೆ. ಆಹಾರದಲ್ಲಿ ಹೆಚ್ಚು ಮೊಟ್ಟೆಯನ್ನು ಬಳಸಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಎಷ್ಟು ಪ್ರಯೋಜನ

ಮೊಟ್ಟೆಯು ಬೆಳೆಯುವ ಮಕ್ಕಳಿಗೆ ಪರಿಪೂರ್ಣ ಆಹಾರ. ಮೊಟ್ಟೆಯಲ್ಲಿ ವಿಟಮಿನ್ ‘ಎ’ ಅಧಿಕವಾಗಿದೆ, ಮಕ್ಕಳ ದೃಷ್ಟಿ ಸಮಸ್ಯೆಯನ್ನು ನಿವಾರಿಸುತ್ತದೆ. ವಿಟಮಿನ್ ‘ಡಿ’ ಗಟ್ಟಿಮುಟ್ಟಾದ ಹಲ್ಲು ಮತ್ತು ಎಲುಬುಗಳ ಬೆಳವಣಿಗೆಗೆ ಉಪಯುಕ್ತವಾಗಿದೆ. ವಿಟಮಿನ್ ಬಿ1 , ಬಿ2 ಮತ್ತು ಬಿ12 ಶರೀರಕ್ಕೆ ಅತಿ ಅವಶ್ಯಕವಾದ ಶಕ್ತಿ ಮತ್ತು ಕೆಲವು ರಕ್ತ ಕಣಗಳ ಉತ್ಪಾದನೆಗೆ ನೆರವಾಗುತ್ತದೆ.

ಮೊಟ್ಟೆಯಲ್ಲಿನ ಕ್ಯಾಲ್ಸಿಯಂ, ಮ್ಯಾಗ್ನೆಶಿಯಂ ಮತ್ತು ಲವಣಾಂಶಗಳು ಮಕ್ಕಳ ಮಾಂಸಖಂಡಗಳ ಬೆಳವಣಿಗೆಗೆ ಪೂರಕವಾಗಿವೆ. ಮಿದುಳಿನ ಕ್ರಿಯಾಶೀಲತೆ ಹಾಗೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗಿದೆ.

ಕೂದಲು ಸೊಂಪಾಗಿ ಬೆಳೆಯಲು, ಉಗುರು ಗಟ್ಟಿಯಾಗಿ ಬೆಳೆಯಲು, ಮೂಳೆಗಳನ್ನು ಗಟ್ಟಿಗೊಳಿಸಲು, ಮೊಡವೆ ಸಮಸ್ಯೆ, ಹೃದ್ರೋಗ ಸಮಸ್ಯೆ ನಿವಾರಣೆಗೆ, ದೇಹದಲ್ಲಿ ಥೈರಾಯಿಡ್ ಹಾರ್ಮೋನ್ ಗಳನ್ನು ಸೃಷ್ಟಿ ಮಾಡಲು ಹಾಗೂ ಗರ್ಭಿಣಿಯರು ಆರೋಗ್ಯವಂತ ಭ್ರೂಣ ಹೊಂದಲು ನಿತ್ಯ ಬೇಯಿಸಿದ ಎರಡು ಮೊಟ್ಟೆಗಳನ್ನು ಸೇವಿಸುವುದು ಒಳ್ಳೆಯದು.

ಅದಕ್ಕಾಗಿಯೇ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಮೊಟ್ಟೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಶಾಲೆಗಳಲ್ಲಿ ಮೊಟ್ಟೆ, ಬಾಳೆ ಹಣ್ಣು ಹಾಗೂ ಹಾಲು ಕೊಡಲು ಶುರು ಮಾಡಿದ ನಂತರ ಮಕ್ಕಳ ಹಾಜರಾತಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಮೊಟ್ಟೆಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಸರ್ಕಾರ ಮಕ್ಕಳಿಗೆ ಚಿಕ್ಕಿಯನ್ನೂ ಕೊಡಲು ಚಿಂತನೆ ನಡೆಸಿದ್ದು, ಮಕ್ಕಳು ಇನ್ನಷ್ಟು ಖುಷಿಯಲ್ಲಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT