ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕೌಂಟ್‌ಡೌನ್‌ ಆರಂಭ: ಶಾ

Last Updated 7 ಮೇ 2018, 7:12 IST
ಅಕ್ಷರ ಗಾತ್ರ

ಸವದತ್ತಿ: ‘ರಾಜ್ಯದ ಹಲವು ಕಡೆ ಸುತ್ತಿದ್ದೇನೆ. ಬಿಜೆಪಿ ಪರ ಅಲೆ ಅಲ್ಲ, ಸುನಾಮಿ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರವನ್ನು ಉಳಿಸಿಕೊಳ್ಳಿ ನೋಡೋಣ’ ಎಂದು ಸವಾಲು ಹಾಕಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ‘ಸಿದ್ದರಾಮಯ್ಯ ಸರ್ಕಾರದ ಕೌಂಟ್‌ಡೌನ್‌ ಆರಂಭವಾಗಿದೆ’ ಎಂದು ಎಚ್ಚರಿಕೆ ನೀಡಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಕ್ಕೆ ₹ 2.19 ಲಕ್ಷ ಕೋಟಿ ಅನುದಾನ ನೀಡಿದೆ. ಆದರೆ, ಈ ಹಣವನ್ನು ಸಿದ್ದರಾಮಯ್ಯ ಸರ್ಕಾರವು ಹಳ್ಳಿಗಳಿಗೆ ತಲುಪಿಸಿಲ್ಲ. ಈ ಹಣ ಎಲ್ಲಿ ಹೋಗಿದೆ ಎಂದು ಗೊತ್ತಾಗಬೇಕಾದರೆ ನಿಮ್ಮ ಪ್ರದೇಶದಲ್ಲಿರುವ ಕಾಂಗ್ರೆಸ್‌ ಮುಖಂಡರ ಮನೆಗಳತ್ತ ಒಮ್ಮೆ ಕಣ್ಣು ಹಾಯಿಸಿ’ ಎಂದರು.

‘ಮೊದಲು ಸಣ್ಣ ಮನೆ. ಮನೆಯ ಮುಂದೆ ಮೊಪೆಡ್‌ ಸ್ಕೂಟರ್‌ ನಿಂತಿರುತ್ತಿತ್ತು. ಈಗ ನಾಲ್ಕು ಮಜಲಿನ ಮನೆ ತಲೆಎತ್ತಿ ನಿಂತಿದೆ. ಮನೆಯ ಮುಂದೆ ಔಡಿ ಕಾರು ನಿಂತಿದೆ. ಈಗ ಗೊತ್ತಾಯಿತೇ ಕೇಂದ್ರ ಸರ್ಕಾರದ ಹಣ ಎಲ್ಲಿಗೆ ಹೋಗಿದೆ ಅಂತಾ? ರಾಜ್ಯದ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದನ್ನು ಕಿತ್ತೊಗೆಯಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ 100 ದಿನಗಳ ಒಳಗೆ ಸಂಪೂರ್ಣ ಹಣ ಸಂದಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಆನಂದ ಮಾಮನಿ ಮಾತನಾಡಿ, ‘ಕಳೆದ ಹತ್ತು ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ನನಗೆ ಮತ ನೀಡಿ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ನನ್ನನ್ನು ಆಯ್ಕೆ ಮಾಡಿ’ ಎಂದು ಕೋರಿದರು.

ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಸಿದ್ದರಾಮಯ್ಯ ಸಹಾಯ ಮಾಡಲಿಲ್ಲ. ಹಲವು ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಕೆ.ಎಂ.ಎಫ್‌ ನಿರ್ದೇಶಕ ಎಸ್‌.ಎಸ್‌ ಮುಗಳಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇಲ್ಲಿನ ಹಿರಿಯ ವಕೀಲ ಬಿ.ವಿ ಮಲಗೌಡರ ಹಾಗೂ ಕೆ.ಎಂ.ಎಫ್ ನಿರ್ದೇಶಕ ಎಸ್‌.ಎಸ್‌ ಮುಗಳಿ ಬಿಜೆಪಿ ಸೇರಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರುಪಾದಪ್ಪ ಕಳ್ಳಿ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಗುಳಪ್ಪ ಹಾಸಂಗಿ, ವಿನಾಯಕ ಜಾನವೇಕರ, ಚಂದ್ರಶೇಖರ ಜಂಬ್ರಿ, ಉಪಸ್ಥಿತರಿದರು.

ಸುನೀಲ ಸುಳ್ಳದ ಸ್ವಾಗತಿಸಿದರು. ಬಸವರಾಜ ಯರಗಣವಿ ನಿರೂಪಿಸಿದರು. ಈರಣ್ಣ ಚಂದರಗಿ ವಂದಿಸಿದರು.

ಬಿಸಿಲಿನ ಝಳಕ್ಕೆ ತತ್ತರ: ಅಮಿತ್‌ ಶಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಜನರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. 11.30ಕ್ಕೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮವು 12.15ಕ್ಕೆ ಆರಂಭವಾಯಿತು. ಸುಮಾರು 50 ನಿಮಿಷಗಳವರೆಗೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ಬಿರುಬಿಸಿಲಿನ ಝಳಕ್ಕೆ ಸಿಲುಕಿದ ಜನರು ತತ್ತರಿಸಿಹೋದರು.

ನೀರಿನ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಕಟೌಟ್‌ ಹೊತ್ತು ಹೋದ ಜನರು: ಭಾಷಣ ಮುಗಿಯುತ್ತಿದ್ದಂತೆ ಜನರು ಮೋದಿ ಹಾಗೂ ಅಮಿತ್‌ ಶಾ ಅವರ ಕಟೌಟ್‌ಗಳನ್ನು ಹೊತ್ತುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT