ಅಭಿವೃದ್ಧಿಗೆ ತಂಡದ ರೂಪದಲ್ಲಿ ಕಾರ್ಯ ನಿರ್ವಹಿಸಿ: ಎಲ್.ಕೆ. ಅತಿಕ್ ಸೂಚನೆ

7

ಅಭಿವೃದ್ಧಿಗೆ ತಂಡದ ರೂಪದಲ್ಲಿ ಕಾರ್ಯ ನಿರ್ವಹಿಸಿ: ಎಲ್.ಕೆ. ಅತಿಕ್ ಸೂಚನೆ

Published:
Updated:
Deccan Herald

ಬೀದರ್: ‘ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ತಂಡದ ರೂಪದಲ್ಲಿ ಕಾರ್ಯ ನಿರ್ವಹಿಸಬೇಕು’ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತಿಕ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದುಳಿದ ಕಾರಣಕ್ಕೆ ಈ ಭಾಗಕ್ಕೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಸೇರಿದಂತೆ ಸರ್ಕಾರ ವಿವಿಧ ರೀತಿಯಲ್ಲಿ ವಿಶೇಷ ಅನುದಾನ ಒದಗಿಸುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಶಂಕಿತ ಎಚ್1ಎನ್1 ಪ್ರಕರಣಗಳ ಬಗೆಗೆ ಮಾಹಿತಿ ಪಡೆದ ಅವರು, ‘ಎಚ್‌1ಎನ್‌1ಗೆ ಸಂಬಂಧಿಸಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಎಚ್1ಎನ್1 ಕುರಿತು ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗಡಿ ಜಿಲ್ಲೆಯಾಗಿರುವ ಕಾರಣ ಎಲ್ಲರ ಅನುಕೂಲಕ್ಕಾಗಿ ಬೇರೆ ಬೇರೆ ಭಾಷೆಗಳಲ್ಲಿ ಮಾಹಿತಿ ಒಳಗೊಂಡ ಕರಪತ್ರ ಮುದ್ರಿಸಿ ಹಂಚಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್ ತಿಳಿಸಿದರು.

ಜಿಲ್ಲೆಯ 22 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಸಭೆಯ ಗಮನಕ್ಕೆ ತಂದರು.

‘ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕೆಆರ್‍ಐಡಿಎಲ್ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು 15 ದಿನಗಳ ಒಳಗೆ ದುರಸ್ತಿಪಡಿಸಬೇಕು. ಸಂಪೂರ್ಣ ಕೆಲಸ ಆಗದಿದ್ದರೆ ಬಿಲ್ ಪಾವತಿ ಮಾಡಬಾರದು’ ಎಂದು ಉಸ್ತುವಾರಿ ಕಾರ್ಯದರ್ಶಿ ಆದೇಶಿಸಿದರು.

ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 5,970 ವಿದ್ಯಾರ್ಥಿಗಳು ಇದ್ದಾರೆ. 77 ವಸತಿ ನಿಲಯಗಳ ಪೈಕಿ 23 ಬಾಡಿಗೆ ಕಟ್ಟಡಗಳಲ್ಲಿ ಇವೆ. 35 ರಲ್ಲಿ ಅಧೀಕ್ಷಕರ ಕೊರತೆ ಇದೆ. ನಿವೇಶನ ಲಭ್ಯ ಇರುವ 18 ವಸತಿ ನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು.

‘ವಸತಿ ನಿಲಯಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಾಗುವುದು. ಅವ್ಯವಸ್ಥೆ ಕಂಡು ಬಂದರೆ ನಿಲಯ ಪಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಅತಿಕ್ ಎಚ್ಚರಿಕೆ ನೀಡಿದರು.

‘ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸುತ್ತುಗೋಡೆ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಜಿಲ್ಲೆಯಲ್ಲಿ ಪ್ರತಿ ದಿನದ ಗುರಿ ಇಟ್ಟುಕೊಂಡು ತ್ವರಿತಗತಿಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು’ ಎಂದು ಹೇಳಿದರು.
ಬೀದರ್ ತಾಲ್ಲೂಕಿನಲ್ಲಿ 7,954 ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ 4,400 ಶೌಚಾಲಯಗಳ ನಿರ್ಮಾಣ ಬಾಕಿ ಇದೆ’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಯಸ್ಕರ ಶಿಕ್ಷಣದ ಪ್ರಗತಿ ಕುರಿತು ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿ ಟಿ.ಆರ್. ದೊಡ್ಡೆ ಅಂಕಿಅಂಶಗಳನ್ನು ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಆಯುಷ್, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !