ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌| ಓಲ್ಡ್‌ಸಿಟಿ ಮೇಲೆ ಡ್ರೋಣ್‌ ಕಣ್ಗಾವಲು

ಏ.20 ರವರೆಗೂ ‘ಕರ್ಫ್ಯೂ ಮಾದರಿ ನಿರ್ಬಂಧ’ ಇನ್ನಷ್ಟು ಕಠಿಣ: ಪರಿಸ್ಥಿತಿ ಅವಲೋಕಿಸಿದ ಎಡಿಜಿಪಿ ಅಮೃತ್‌ ಪಾಲ್
Last Updated 16 ಏಪ್ರಿಲ್ 2020, 9:00 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 13ಕ್ಕೆ ತಲುಪಿದ ನಂತರ ಅವರ ಸಂಪರ್ಕಕ್ಕೆ ಬಂದವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಜಿಲ್ಲೆಯ 27,602 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿರುವವರ ಸಂಖ್ಯೆ 125ಕ್ಕೆ ಏರಿದೆ. 237 ಜನರ ವೈದ್ಯಕೀಯ ವರದಿ ಬರಬೇಕಿದೆ.

ಏಪ್ರಿಲ್‌ 20ರ ವರೆಗೂ ಕಠಿಣ ನಿಯಮಗಳನ್ನು ಅನುಸರಿಸಬೇಕು. ಮೇ 3ರ ವರೆಗೆ ಲಾಕ್‌ಡೌನ್‌ ಅವಧಿಯನ್ನು ಮುಂದುವರಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದ ನಂತರ ಹಾಟ್‌ಸ್ಪಾಟ್‌ ಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್‌ ಅನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಮಾತ್ರ ದಿನಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಓಲ್ಡ್‌ಸಿಟಿಯಲ್ಲಿ ಒಂದು ವಾರದಿಂದ ದಿನಪತ್ರಿಕೆ ಹಾಗೂ ಹಾಲು ಸಹ ಪೂರೈಕೆಯಾಗುತ್ತಿಲ್ಲ. ರೆಡ್‌ ಪಾಸ್‌ ಇದ್ದರೆ ಮಾತ್ರ ಅವಕಾಶ ನೀಡಲಾಗುವುದು. ಪಾಸ್‌ ಇಲ್ಲದೆ ಒಳಗೆ ಪ್ರವೇಶ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಖಡಕ್‌ ಆಗಿ ಎಚ್ಚರಿಕೆ ನೀಡುತ್ತಿದ್ದಾರೆ.

ಬಿಸಿಲಿನ ಧಗೆ ತಡೆದುಕೊಳ್ಳಲು ಯುವಕರು ಮನೆಯಿಂದ ಹೊರಗೆ ಬಂದು ಕಟ್ಟೆಗಳ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರ ವಾಹನ ಬರುತ್ತಿದ್ದಂತೆಯೇ ಓಡಿ ಹೋಗಿ ಮನೆಗಳಿಗೆ ಸೇರುತ್ತಿದ್ದಾರೆ. ಎಲ್ಲ ಓಣಿಗಳ ಪ್ರವೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳಡಿಸಿ ಮಾರ್ಗಗಳನ್ನು ಬಂದ್‌ ಮಾಡಲಾಗಿದೆ. ಈಗ ಅದೇ ಪೊಲೀಸರಿಗೆ ಮುಳುವಾಗಿದೆ. ಪೊಲೀಸ್‌ ವಾಹನಗಳಿಗೇ ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ ಗರ್ಭಿಣಿಯರು ಹಾಗೂ ವೃದ್ಧರನ್ನು ಆಸ್ಪತ್ರೆಗಳಿಗೆ ಸಾಗಿಸದಂತಹ ಸ್ಥಿತಿ ನಿರ್ಮಾಣವಾಗಿದೆ.

ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಪೊಲೀಸರು ಎರಡು ಡ್ರೋಣ್ ಕ್ಯಾಮೆರಾಗಳ ಮೂಲಕ ಗಲ್ಲಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಯುವಕರು ಕಟ್ಟೆಗಳ ಮೇಲೆ ಹರಟೆ ಹೊಡೆಯುವುದನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡು ಅವರ ಮನೆಗಳಿಗೆ ತೆರಳಿ ಎಚ್ಚರಿಕೆ ನೀಡಿದ್ದಾರೆ. ಕೆಲವರಿಗೆ ಬೆತ್ತದ ರುಚಿಯನ್ನೂ ತೋರಿಸಿದ್ದಾರೆ.

’ಓಲ್ಡ್‌ಸಿಟಿಯಲ್ಲಿ ಬಹುತೇಕ ಮಾರ್ಗಗಳನ್ನು ಬಂದ್ ಮಾಡಿರುವ ಕಾರಣ ಸಿಲಿಂಡರ್‌, ತರಕಾರಿ ಹಾಗೂ ಪೊಲೀಸ್‌ ವಾಹನಗಳು ಸಹ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಗುರುವಾರ ಎಲ್ಲ ಬೇಲಿಗಳನ್ನು ತೆಗೆದು ಹಾಕಲಾಗುವುದು. ಯಾರಾದರೂ ಮನೆಗಳಿಂದ ಹೊರಗೆ ಬಂದಿರುವುದು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್ ತಿಳಿಸಿದ್ದಾರೆ.

ಮನೆ ಬಾಗಿಲಿಗೆ ತರಕಾರಿ:ಓಲ್ಡ್‌ಸಿಟಿಗೆ ಪೊಲೀಸ್ ಸರ್ಪಗಾವಲು ಹಾಕಿರುವ ಕಾರಣ ಜನ ಅಗತ್ಯ ಸಾಮಗ್ರಿ ಹಾಗೂ ತರಕಾರಿ ಖರೀದಿಸಲು ಹೊರಗಡೆ ಬರುವುದು ಕಷ್ಟವಾಗುತ್ತಿದೆ. ತೋಟಗಾರಿಕೆ ಇಲಾಖೆ ಹಾಗೂ ಹಾಪ್‌ಕಾಮ್ಸ್‌ ಸಹಯೋಗದಲ್ಲಿ ಬುಧವಾರ ಪ್ರತಿಯೊಂದು ಓಣಿಯಲ್ಲಿ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಯಿತು.

ಅನೇಕ ಜನರು ಅಂತರ ಕಾಯ್ದುಕೊಂಡು ಹಾಪ್‌ಕಾಮ್ಸ್‌ನಿಂದ ತಾಜಾ ತರಕಾರಿ ಖರೀದಿಸಿದರು. ವ್ಯಾಪಾರಸ್ಥರು ಯಾರಿಗೂ ತರಕಾರಿ ಮುಟ್ಟಲು ಅವಕಾಶ ಕೊಡದೆ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ತಕ್ಕಡಿಯಲ್ಲಿ ತೂಗಿ ಕೊಟ್ಟರು.

ಮನೆ ಬಾಗಿಲಲ್ಲೇ ತರಕಾರಿ ಪೂರೈಕೆ ಮಾಡಿದ್ದಕ್ಕೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಕೃತಜ್ಞತೆ
ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT