ರೈತ ಸಂತೆಗೆ ₹ 1 ಕೋಟಿ ಮಂಜೂರು

ಮಂಗಳವಾರ, ಜೂಲೈ 16, 2019
25 °C
ಮೊದಲ ದಿನವೇ ಸಚಿವರಿಂದ ಬಂಪರ್‌ ಕೊಡುಗೆ

ರೈತ ಸಂತೆಗೆ ₹ 1 ಕೋಟಿ ಮಂಜೂರು

Published:
Updated:
Prajavani

ಬೀದರ್‌: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂನ್‌ 27 ರಂದು ಬಸವಕಲ್ಯಾಣ ತಾಲ್ಲೂಕಿನ ಉಜಳಂಬಕ್ಕೆ ಭೇಟಿ ನೀಡಲಿರುವ ಪ್ರಯುಕ್ತ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಮೊದಲ ದಿನವೇ ರೈತ ಸಂತೆಗೆ ₹ 1 ಕೋಟಿ ಮಂಜೂರು ಮಾಡಿದರು.

ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ನಂತರ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಸುತ್ತಮುತ್ತಲಿನ ಗ್ರಾಮಗಳಿಗೆ ಉಜಳಂಬ ಹೋಬಳಿ ಕೇಂದ್ರದಂತೆ ಇರುವ ಕಾರಣ ಗ್ರಾಮದಲ್ಲಿ ಗ್ರಾಮೀಣ ಸಂತೆ ಆರಂಭಿಸಲಾಗುವುದು. ಗ್ರಾಮದಲ್ಲಿ ಅಗತ್ಯ ಜಾಗವೂ ಇರುವುದರಿಂದ ಮಾರುಕಟ್ಟೆ ನಿರ್ಮಾಣ ಕಾರ್ಯವನ್ನು ಆರಂಭಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಗ್ರಾಮದ ಮಕ್ಕಳು ಮಹಾರಾಷ್ಟ್ರದ ಉಮರ್ಗಾ ಹಾಗೂ ಬಸವಕಲ್ಯಾಣಕ್ಕೆ ಶಿಕ್ಷಣ ಪಡೆಯಲು ಹೋಗುತ್ತಾರೆ. ಗ್ರಾಮದಲ್ಲಿಯೇ ಗುಣಮಟ್ಟದ ಶಿಕ್ಷಣ ದೊರಕುವಂತಾಗಲು ಗ್ರಾಮದಲ್ಲಿ ಲಭ್ಯವಿರುವ 8 ಎಕರೆ ಜಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ವಿದ್ಯುತ್‌ ಉಪ ವಿತರಣಾ ಕೇಂದ್ರ ಆರಂಭಿಸಬೇಕು ಎನ್ನುವ ಬೇಡಿಕೆಯನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ. ಇಂಧನ ಖಾತೆ ಮುಖ್ಯಮಂತ್ರಿ ಬಳಿ ಇರುವ ಕಾರಣ ಮಂಜೂರಾತಿ ಪಡೆಯಲು ಕಷ್ಟವಾಗಲಾರದು. ಗುರುವಾರ ಮುಖ್ಯಮಂತ್ರಿಗೆ ಮನವರಿಕೆ ಮಾಡಿ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಗ್ರಾಮದ 15, 20 ಜನ ನಿರ್ದೇಶಕರಾಗಲು ಮುಂದೆ ಬಂದರೆ ಶೀಘ್ರದಲ್ಲೇ ಅನುಮತಿ ನೀಡಲಾಗುವುದು. ಸಹಕಾರ ಖಾತೆ ನನ್ನ ಬಳಿಯೇ ಇರುವ ಕಾರಣ ಪಿಕೆಪಿಎಸ್‌ ಆರಂಭಿಸಲು ಯಾವುದೇ ಸಮಸ್ಯೆ ಉದ್ಭವಿಸಲಾರದು’ ಎಂದು ಅಭಯ ನೀಡಿದರು.

‘ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಎಲ್ಲ ವ್ಯವಸ್ಥೆಯೂ ಇದೆ. ಇಲ್ಲಿಯೇ ಸಂತಾನ ಶಕ್ತಿನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಲು ಅನುಕೂಲವಾಗುವಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಭರವಸೆ ನೀಡಿದರು.

‘ಗ್ರಾಮಕ್ಕೆ ಈಗಾಗಲೇ ಬಸ್‌ ಸೇವೆ ಆರಂಭವಾಗಿದೆ. ಬಸ್‌ ತಂಗುದಾಣ ನಿರ್ಮಾಣ ಮಾಡಲಾಗುವುದು. ಗ್ರಾಮದ ಪರಿಸರದಲ್ಲಿ ಅಂತರ್ಜಲಮಟ್ಟ ಆಳಕ್ಕೆ ಕುಸಿದಿದೆ. ಗ್ರಾಮದ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗುವುದು. ಸಣ್ಣ ನೀರಾವರಿ ಇಲಾಖೆಯ ಮೂಲಕ ಗ್ರಾಮದ ಪರಿಸರದಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗುವುದು. ಕೃಷಿ ಹೊಂಡಗಳ ನಿರ್ಮಾಣಕ್ಕೂ ಒತ್ತು ಕೊಡಲಾಗುವುದು. ಇದರಿಂದ ಜನರಿಗೆ ಗ್ರಾಮದಲ್ಲಿ ಕುಡಿಯುವ ನೀರು ದೊರೆಯಲು ಅನುಕೂಲವಾಗಲಿದೆ’ ಎಂದು ಹೇಳಿದರು.

‘ಗ್ರಾಮದಲ್ಲಿ ಅನೇಕ ಜನ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿತ್ಯ 600 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಗ್ರಾಮದಲ್ಲಿ ಕೆಎಂಎಫ್‌ ಘಟಕ ಸ್ಥಾಪಿಸುವ ದಿಸೆಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಮನೋಹರಗೌಡ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾರಾಯಣರಾವ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ನೀಲಕಂಠ ರಾಠೋಡ, ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಕರ್ಣ ಪಂಢರಿನಾಥ, ಜಿಲ್ಲಾ ನೋಡೆಲ್ ಅಧಿಕಾರಿ ಅತೀಕ್‌, ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ತಹಶೀಲ್ದಾರ್‌ ಸಾವಿತ್ರಿ ಸಲಗರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !