ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ

ಕೇಸರಿ, ಬಿಳಿ, ಹಸಿರು ಟೀಶರ್ಟ್‌ ಧರಿಸಿದ್ದ ಅಧಿಕಾರಿಗಳು
Last Updated 11 ಆಗಸ್ಟ್ 2022, 13:25 IST
ಅಕ್ಷರ ಗಾತ್ರ

ಬೀದರ್: ಸೂರ್ಯ ಬಾನಿಗೆ ಏರುವ ಹೊತ್ತಿನಲ್ಲೇ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಗುಂಪಾದ ಸಿದ್ಧಾರೂಢ ಮಠದ ಆವರಣಕ್ಕೆ ಬಂದು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ರಾಷ್ಟ್ರಪ್ರೇಮ ಮೆರೆದರು.

ಒಂದು ಕಿ.ಮೀ. ಉದ್ದದ ತ್ರಿವರ್ಣ ಧ್ವಜದ ಎರಡೂ ಬದಿಯನ್ನು ಹಿಡಿದ ವಿದ್ಯಾರ್ಥಿಗಳು ಭಾರತ ಮಾತಾಕಿ ಜೈ, ವಂದೇ ಮಾತರಂ ಎನ್ನುವ ಘೋಷಣೆಗಳನ್ನು ಕೂಗುತ್ತ ಸಂಭ್ರಮದಿಂದ ಮೆರವಣಿಗೆಯಲ್ಲಿ ಸಾಗಿದರು. ಅನೇಕ ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ಧ್ವಜಗಳನ್ನು ಹಿಡಿದುಕೊಂಡಿದ್ದರು.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾಮಾಜಿಕ ಕಾರ್ಯಕರ್ತರು ತ್ರಿವರ್ಣದ ಟೀಶರ್ಟ್‌ಗಳಲ್ಲಿ ಕಾಣಿಸಿಕೊಂಡರು. ಅಧಿಕಾರಿಗಳು ಕೇಸರಿ ಬಣ್ಣದ ಟೀಶರ್ಟ್ ಧರಿಸಿದ್ದರೆ, ಸರ್ಕಾರಿ ನೌಕರರು ಹಸಿರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಶ್ವೇತ ವರ್ಣದ ಟೀಶರ್ಟ್‌ ಹಾಕಿಕೊಂಡಿದ್ದರು.

ಕಾರ್ಯಕ್ರಮ ಯಶಸ್ವಿಗೊಳಿಸಿ:

ನೆಹರೂ ಕ್ರೀಡಾಂಗಣದಲ್ಲಿ ಆಗಸ್ಟ್‌ 15ರಂದು ನೂರು ಅಡಿ ಎತ್ತರದ ಸ್ತಂಬದ ಮೇಲೆ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ನಗರದ ಸಿದ್ಧಾರೂಢ ಮಠದ ಆವರಣದಲ್ಲಿ ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಈಗಾಗಲೇ ಸೈಕಲ್‌ ಜಾಥಾ, ಶಾಲಾ ವಿದ್ಯಾರ್ಥಿಗಳಿಂದ ಪ್ರಭಾತ ಫೇರಿ ಯಶಸ್ವಿಯಾಗಿ ನಡೆದಿದೆ. ಮನೆ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮವನ್ನು ಸಾರ್ವಜನಿಕರು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಎಲ್ಲ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಸಂಘ ಸಂಸ್ಥೆಗಳು ತಮ್ಮ ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡಬೇಕು ಎಂದರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರಬಾಬು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ಸಿದ್ಧಾರೂಢ ಮಠದ ಆವರಣದಿಂದ ಆರಂಭವಾದ ಮೆರವಣಿಗೆ ಚೆನ್ನಮ್ಮ ವೃತ್ತ, ಹಾರೂರಗೇರಿ ಕಮಾನ್, ಬೊಮ್ಮಗೊಂಡೇಶ್ವರ ವೃತ್ತ, ಭಗತಸಿಂಗ್‌ ವೃತ್ತ, ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ನೆಹರೂ ಕ್ರೀಡಾಂಗಣ ತಲುಪಿ ಸಮಾರೋಪಗೊಂಡಿತು.

ತಿಪ್ಪೆಗುಂಡಿಯಾದ ಕ್ರೀಡಾಂಗಣ

ಮೂರು ಕಿ.ಮೀ ನಡೆದು ಬಂದ ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ವರೆಗೆ ನಡೆದು ಸುಸ್ತಾಗಿದ್ದ ಮಕ್ಕಳಿಗೆ ಉಪ್ಪಿಟ್ಟು ಹಾಗೂ ಬಾಳೆ ಹಣ್ಣು ವಿತರಿಸಲಾಯಿತು.

ನಗರಸಭೆ ಸಿಬ್ಬಂದಿ ಕಸದ ತೊಟ್ಟಿಗಳನ್ನು ಇಟ್ಟಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಾಳೆ ಹಣ್ಣು ತಿಂದು ಕ್ರೀಡಾಂಗಣದ ತುಂಬ ಬೇಕಾಬಿಟ್ಟಿ ಎಸೆದು ಹೋದರು. ಉಪ್ಪಿಟ್ಟು ತಿಂದ ಹಾಳೆ ಕ್ರೀಡಾಂಗಣದ ತುಂಬ ಹಾರಾಡಿದವು.

ನಗರಸಭೆಯ ವಾಹನಗಳು ಕ್ರೀಡಾಂಗಣದಲ್ಲಿ ಬೇಕಾಬಿಟ್ಟಿ ಸಂಚರಿಸಿದ ಕಾರಣ ರನ್ನಿಂಗ್‌ ಟ್ರ್ಯಾಕ್ ಸಂಪೂರ್ಣ ಹಾಳಾಗಿದೆ. ಟ್ರ್ಯಾಕ್‌ನಲ್ಲಿ ತಗ್ಗು ಗುಂಡಿಗಳು ಬಿದ್ದು ಅಸ್ತಿತ್ವ ಕಳೆದುಕೊಂಡಿದೆ.

ಛಾಯಾಚಿತ್ರ ಪ್ರದರ್ಶನ ಇಂದಿನಿಂದ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದ ವಿವಿಧೆಡೆ ಆಗಸ್ಟ್ 12 ರಿಂದ ಆಗಸ್ಟ್ 15 ರವರೆಗೆ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.

ರೈಲು ನಿಲ್ದಾಣ, ಬಸ್‌ ನಿಲ್ದಾಣ, ಜಿಲ್ಲಾ ರಂಗ ಮಂದಿರದಲ್ಲಿ ಸ್ವಾತಂತ್ರ್ಯ ಸಂಗಾಮದ ದಿನಗಳನ್ನು ಮೆಲುಕು ಹಾಕುವ ದಿಸೆಯಲ್ಲಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಜಿ.ಸುರೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT