ಸೋಮವಾರ, ಸೆಪ್ಟೆಂಬರ್ 27, 2021
24 °C
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿಕೆ

ಔರಾದ್‌ನಲ್ಲಿ ಶೀಘ್ರ ಜಾನುವಾರು ತಳಿ ಸಂವರ್ಧನ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಪಶು ಸಂಗೋಪನೆ ಇಲಾಖೆಯಿಂದ ಜಿಲ್ಲೆಯಲ್ಲಿ ₹ 50 ಕೋಟಿ ವೆಚ್ಚದಲ್ಲಿ ಔರಾದ್ ತಾಲ್ಲೂಕಿನಲ್ಲಿ ಜಾನುವಾರು ತಳಿ ಸಂವರ್ಧನ ಹಾಗೂ ತರಬೇತಿ ಕೇಂದ್ರ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಆದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಹೇಳಿದರು.

ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ತರಬೇತಿ ಕೇಂದ್ರದಲ್ಲಿ ವೀರ್ಯ ಸಂಗ್ರಹಣೆಗೆ ಬೇಕಾದ ಹೋರಿ, ಕೋಣಗಳ ವೈಜ್ಞಾನಿಕ ಸಾಕಾಣಿಕೆ ಮತ್ತು ಕ್ವಾರಂಟೈನ್, ರೈತರಿಗೆ ತರಬೇತಿ ಕಾರ್ಯಕ್ರಮ, ಹಸಿ ಮತ್ತು ಒಣ ಮೇವು ಉತ್ಪಾದನೆಯ ಮಾಹಿತಿ ನೀಡಲಾಗುವುದು’ ಎಂದರು.

‘ಇಲಾಖೆಯ ಸಿಬ್ಬಂದಿಗೆ ವ್ಯವಸ್ಥಿತವಾಗಿ ಅವರ ಜ್ಞಾನವನ್ನು ಹೆಚ್ಚಿಸುವುದು ಹಾಗೂ ಕೆಲಸವನ್ನು ಸುಸೂತ್ರವಾಗಿ ನಡೆಸುವುದು ಸಹ ತರಬೇತಿಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಜಿಲ್ಲಾ ಕೇಂದ್ರದಲ್ಲಿ ದೊಡ್ಡದಾದ ಗೋಶಾಲೆ ನಿರ್ಮಿಸುವ ಉದ್ದೇಶ ಇದೆ. ಅಲ್ಲಿ ಒಟ್ಟು 10 ಸಾವಿರ ಜಾನುವಾರು ಸಾಕಾಣಿಕೆ ಮಾಡಲಾಗುವುದು. ನಂತರ ಆದ್ಯತೆ ಮೇಲೆ ತಾಲ್ಲೂಕು ಕೇಂದ್ರಗಳಲ್ಲಿ ಗೋಶಾಲೆ ತೆರೆಯಲಾಗುವುದು’ ಎಂದು ಹೇಳಿದರು.

‘ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳ ಮೂಲಕ ವ್ಯಾಪಕ ಅರಿವು ಮೂಡಿಸಿದೆ. ಹೀಗಾಗಿ ಕೋವಿಡ್ ಕಡಿಮೆ ಪ್ರಕರಣಗಳು ಇರುವ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ’ ಎಂದರು.

‘ಮೇ ಹಾಗೂ ಜೂನ್‌ನಲ್ಲಿ ಜಿಲ್ಲೆಯಲ್ಲಿ ಒಂದಂಕಿ ಪ್ರಕರಣಗಳು ಮಾತ್ರ ವರದಿಯಾಗಿವೆ, ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಪಾಸಿಟಿವಿಟಿ ದರ ಹೊಂದಿದ ಜಿಲ್ಲೆಗಳಲ್ಲಿ ಬೀದರ್ ಪ್ರಥಮ ಸ್ಥಾನದಲ್ಲಿದೆ, ಜಿಲ್ಲೆಯಲ್ಲಿ ಈವರೆಗೆ 7 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ’ ಎಂದು ತಿಳಿಸಿದರು.

‘ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಜಿಲ್ಲಾಧಿಕಾರಿ ಆಡಳಿತ ಕಚೇರಿಗಳ ಸಂಕೀರ್ಣ, ಅನುಭವ ಮಂಟಪ ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಆರಂಭಿಸಲಾಗುವುದು’ ಎಂದು ಹೇಳಿದರು.

ಇದಕ್ಕೂ ಮೊದಲು ಸಚಿವರು ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪಡೆ, ಪೊಲೀಸ್‌ ಪಡೆ, ಗೃಹರಕ್ಷಕ ದಳ, ಮಹಿಳಾ ಪೊಲೀಸ್‌ ಸಿಬ್ಬಂದಿ ಪರೇಡ್‌ ವೀಕ್ಷಣೆ ಮಾಡಿದರು.

ಶಾಸಕರಾದ ರಹೀಂಖಾನ್‌,  ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ,  ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್, ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಇದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.