ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಭರವಸೆಯ ಡಿಪ್ಲೊಮಾ

ಜ್ಯೂನಿಯರ್‌ ಎಂಜಿನಿಯರ್‌ಗಳಿಗೆ ಇದೆ ಆಕರ್ಷಕ ವೇತನ
Last Updated 10 ಮೇ 2019, 19:45 IST
ಅಕ್ಷರ ಗಾತ್ರ

ಬೀದರ್‌: ಡಿಪ್ಲೊಮಾ ಪ್ರಸ್ತುತ ಬಹು ಬೇಡಿಕೆಯ ತಾಂತ್ರಿಕ ಶಿಕ್ಷಣವಾಗಿದೆ. ತಾಂತ್ರಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಹಂಬಲ ಹೊಂದಿದ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶ ಪಡೆಯಲು ಇದು ಸಕಾಲ.

ಜಿಲ್ಲೆಯ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ನಲ್ಲಿ ಆಟೊಮೊಬೈಲ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್‌ ಆ್ಯಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್‌ ಹಾಗೂ ಕಮರ್ಷಿಯಲ್‌ ಪ್ರಾಕ್ಟಿಸ್ ವಿಷಯದಲ್ಲಿ ಮೂರು ವರ್ಷದ ಡಿಪ್ಲೊಮಾ ಮಾಡಬಹುದು.

ಜಿಲ್ಲೆಯಲ್ಲಿ ಆರು ಪಾಲಿಟೆಕ್ನಿಕ್‌ ಸಂಸ್ಥೆಗಳಿವೆ. ಬೀದರ್‌ ಮತ್ತು ಔರಾದ್‌ನಲ್ಲಿ ಮಾತ್ರ ಸರ್ಕಾರಿ ಪಾಲಿಟೆಕ್ನಿಕ್‌ ಇದೆ. ಔರಾದ್‌ ತಾಲ್ಲೂಕಿನ ಠಾಣಾಕುಶನೂರದಲ್ಲಿ ಜೆ.ಎನ್‌. ಪಾಲಿಟೆಕ್ನಿಕ್‌ (ಅನುದಾನಿತ), ಬೀದರ್‌ನಲ್ಲಿ ನಿಟ್ಟೂರ ಪಾಲಿಟೆಕ್ನಿಕ್ , ಭಾಲ್ಕಿಯಲ್ಲಿ ಹರಳಯ್ಯ ಪಾಲಿಟೆಕ್ನಿಕ್ ಹಾಗೂ ಹುಮನಾಬಾದ್‌ನಲ್ಲಿ ಎಚ್‌ಕೆಡಿಬಿ ಪಾಲಿಟೆಕ್ನಿಕ್ ಸಂಸ್ಥೆ ಇದೆ.

‘ಡಿಪ್ಲೊಮಾ ಶಿಕ್ಷಣ ಪಡೆದವರಿಗೆ ಕೈಗಾರಿಕೆ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ನಗರ, ಪಟ್ಟಣಗಳಲ್ಲಿರುವ ಕೈಗಾರಿಕೆಗಳು ಸಾಮರ್ಥ್ಯಕ್ಕೆ ಅನುಗುಣವಾಗಿ ಜ್ಯೂನಿಯರ್ ಎಂಜಿನಿಯರ್‌ ಹುದ್ದೆಗಳಿಗೆ ನೇಮಕ ಮಾಡಿ ಕೈತುಂಬ ಸಂಬಳ ಕೊಡುತ್ತಿವೆ. ಅಭ್ಯರ್ಥಿಗಳಿಗೆ ಆರಂಭಿಕ ವೇತನ ₹ 15 ಸಾವಿರದಿಂದ ₹ 50 ಸಾವಿರ ವರೆಗೂ ಇದೆ’ ಎಂದು ಉಪನ್ಯಾಸಕ ಶಿವಕುಮಾರ ಕಟ್ಟೆ ಹೇಳುತ್ತಾರೆ.

ಪಾಲಿಟೆಕ್ನಿಕ್‌ ಶಿಕ್ಷಣ ಪಡೆದವರು ಹೆಚ್ಚಿನ ವಿದ್ಯಾಭ್ಯಾಸ ಬಯಸಿದರೆ ನೇರವಾಗಿ ಎಂಜಿನಿಯರಿಂಗ್‌ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಅವಕಾಶ ಇದೆ.

ಈಗಾಗಲೇ ಪ್ರಸಕ್ತ ಸಾಲಿನ ಸರ್ಕಾರಿ ಪಾಲಿಟೆಕ್ನಿಕ್ ಪ್ರಥಮ ಸೆಮಿಸ್ಟರ್‌ ಡಿಪ್ಲೊಮಾ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್‌ ಇಂಟ್ರಾಕ್ಟಿವ್‌ ಕೌನ್ಸೆಲಿಂಗ್ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ.

ಪ್ರವೇಶ ಅರ್ಜಿಗಳನ್ನು ವೆಬ್‌ಸೈಟ್: www.dte.kar.nic.in ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅರ್ಜಿ ಪಡೆಯುವುದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಮೇ 18ರ ಬೆಳಿಗ್ಗೆ 10ರಿಂದ ಸಂಜೆ 5.30ರ ವರೆಗೆ ಸಲ್ಲಿಸಬಹುದು.

ಭರ್ತಿ ಮಾಡಿದ ಅರ್ಜಿ, ನೋಂದಣಿ ಶುಲ್ಕ ಹಾಗೂ ಎಲ್ಲ ಮೂಲ ದಾಖಲಾತಿಗಳೊಂದಿಗೆ ಆನ್‌ಲೈನ್‌ನಲ್ಲಿ ಮೇ 18ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಮೇ.19ರಂದು ಹಾಗೂ ಅಂತಿಮ ಮೆರಿಟ್ ಪಟ್ಟಿಯನ್ನು ಮೇ 22ರಂದು ಪ್ರಕಟಿಸಲಾಗುತ್ತದೆ.

ಅರ್ಜಿ ಶುಲ್ಕವು ಸಾಮಾನ್ಯ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹ 100, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ₹ 50 ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಸಂಸ್ಥೆಯ ಕಚೇರಿಯಲ್ಲಿ ನಗದಾಗಿ ಪಾವತಿಸಿ ರಶೀದಿ ಪಡೆದುಕೊಳ್ಳಬೇಕು.

2019-20ನೇ ಶೈಕ್ಷಣಿಕ ವರ್ಷದಲ್ಲಿ ಸೀಟು ಹಂಚಿಕೆ ಸಂಬಂಧ ವಿದ್ಯಾರ್ಥಿಗಳು ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್ ನೋಡೆಲ್ ಸೆಂಟರ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ಔರಾದ್‌ನ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಚಿಕ್ಲೆ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT