ಉ.ಕ. ಪ್ರತ್ಯೇಕ ರಾಜ್ಯ ಹೋರಾಟಕ್ಕೆ ವಿರೋಧ

7
ಜಿಲ್ಲೆಯಲ್ಲಿ ಸಂಘಟನೆಗಳಿಂದ ದೊರೆಯದ ಬೆಂಬಲ

ಉ.ಕ. ಪ್ರತ್ಯೇಕ ರಾಜ್ಯ ಹೋರಾಟಕ್ಕೆ ವಿರೋಧ

Published:
Updated:
Deccan Herald

ಬೀದರ್‌: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಗುರುವಾರ ಕರೆ ನೀಡಿದ್ದ ಬಂದ್‌ಗೆ ಬೀದರ್‌ ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಂಬಲ ದೊರೆಯಲಿಲ್ಲ. ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತ್ಯೇಕವಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿದರು.

ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿಯೇ ಜಾರಿಗೆ ತರಲಾದ ಸಂವಿಧಾನದ 371(ಜೆ) ವಿಧಿಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಪ್ರತ್ಯೇಕ ರಾಜ್ಯ ನಿರ್ಮಾಣ ಎಲ್ಲ ಸಮಸ್ಯೆಗಳಿಗೆ ಪರಿಹಾರ ಅಲ್ಲ ಎಂದು ಹೇಳಿದರು.

ಉತ್ತರ ಕರ್ನಾಟಕದ ನೆಪದಲ್ಲಿ ಮುಂಬೈ ಕರ್ನಾಟಕದ ಜಿಲ್ಲೆಗಳು ಅನೇಕ ಯೋಜನೆಗಳನ್ನು ಕಬಳಿಸಿವೆ. ಹೋರಾಟದ ವಿಷಯದಲ್ಲೂ ಬೆಳಗಾವಿ ಹಾಗೂ ಧಾರವಾಡದ ಮುಖಂಡರು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಮುಖಂಡರ ಸಭೆ ಕರೆಯದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಮಂಗಳವಾರ ಮುಂಬೈ ಕರ್ನಾಟಕದ ಕೆಲವು ಮುಖಂಡರ ಸಭೆಯಲ್ಲಿ ಬೆಳಗಾವಿಯನ್ನು ಎರಡನೆಯ ರಾಜಧಾನಿ ಮಾಡುವ ಭರವಸೆ ನೀಡಿದ್ದಾರೆ. ಬೆಳಗಾವಿಯನ್ನು ಎರಡನೆಯ ರಾಜಧಾನಿಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿ ರಾಜ್ಯದ ಒಂದು ಮೂಲೆಯಲ್ಲಿದೆ. ಹೈದರಾಬಾದ್‌ ಕರ್ನಾಟಕದ ಜನರಿಗೆ ಎಳ್ಳಷ್ಟೂ ಅನುಕೂಲ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಮಧ್ಯದಲ್ಲಿರುವ ಪ್ರದೇಶವನ್ನು ಉಪ ರಾಜಧಾನಿಯನ್ನಾಗಿ ಮಾಡಬೇಕು. ರಾಜ್ಯ ಮಟ್ಟದ ಕಚೇರಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬಾರದು. ಅನಿವಾರ್ಯವಾದರೆ ಬೆಳಗಾವಿಗೆ ಸ್ಥಳಾಂತರಿಸುವ ಕಚೇರಿಗಳನ್ನು ಹೈದರಾಬಾದ್‌ ಕರ್ನಾಟಕಕ್ಕೂ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಪ್ರೊ.ದೇವೇಂದ್ರ ಕಮಲ್‌, ಅನಿಲಕುಮಾರ ಬೆಲ್ದಾರ್, ಗುಣವಂತರಾವ್‌ ಮಂಗಳೂರೆ, ಶಂಕರರಾವ್‌ ಹೊನ್ನಾ, ಶಿವರಾಜ್‌ ಪಾಟೀಲ, ಸುಭಾಷ ಗಾದಗೆ, ಬಸವರಾಜ ಪಾಟೀಲ, ಸುಧಾಕರ ಗಾದಗೆ, ಪ್ರಭುರಾವ್‌ ಪಾಟೀಲ ಪಾಲ್ಗೊಂಡಿದ್ದರು.

ಪ್ರತ್ಯೇಕತೆ ಕೂಗು ಸಲ್ಲ:
ರಾಜಕೀಯ ಪ್ರೇರಿತ ಮುಖಂಡರು ಮತ ಬ್ಯಾಂಕ್‌ ಸೃಷ್ಟಿಸಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ವಿಭಜನೆ ಮಾಡುವುದನ್ನು ಎಂದಿಗೂ ಸಹಿಸುವುದಿಲ್ಲ. ಅಭಿವೃದ್ಧಿ ಮೂಲಕ ಪ್ರತ್ಯೇಕತೆ ಕೂಗನ್ನು ದಮನಗೊಳಿಸಬೇಕು ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ತುಂಗಾ ಹೇಳಿದರು.

ವಿನೋದ ಗುಪ್ತಾ, ಮುಕೇಶ ಗಾಗೆನೋರ್, ರಾಜು ಕೊಳಾರ, ಸಂಜು ಯಾದವ, ಪಿಂಟು ಡೋಣೆ, ಶೋಭಾ, ರೇಖಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !