ಸೋಮವಾರ, ಸೆಪ್ಟೆಂಬರ್ 21, 2020
21 °C
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಪ್ರತಿಭಟನೆ

ಬೀದರ್‌: ಸಾರ್ವಜನಿಕ ಸೇವೆಗಳ ಖಾಸಗೀಕರಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಆರೋಗ್ಯ, ಪೋಷಕಾಂಶ (ಐಸಿಡಿಎಸ್, ಮಧ್ಯಾಹ್ನದ ಬಿಸಿಯೂಟ), ಶಿಕ್ಷಣ, ಸಾರ್ವಜನಿಕ ವಲಯದ ಉದ್ದಿಮೆ ಹಾಗೂ ಸೇವೆಗಳ ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಟನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಆರೋಗ್ಯ ಮಿಷನ್ ಸೇರಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸಿ ಕಾಯಂಗೊಳಿಸಬೇಕು. ಯೋಜನಾ ಕಾರ್ಮಿಕರನ್ನು ಕಾಯಂಗೊಳಿಸಿ, ಮಾಸಿಕ ಕನಿಷ್ಠ ₹21 ಸಾವಿರ ವೇತನ, ₹10 ಸಾವಿರ ಪಿಂಚಣಿ, ಇಎಸ್‍ಐ, ಪಿಎಫ್ ಸೌಲಭ್ಯ ಕಲ್ಪಿಸಬೇಕು. ಸಾರ್ವತ್ರಿಕ ಆರೋಗ್ಯ ರಕ್ಷಣೆ ಶಾಸನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಆದಾಯ ತೆರಿಗೆ ಪಾವತಿಸಲಾಗದ ಬಡ ಕುಟುಂಬಗಳಿಗೆ ಆರು ತಿಂಗಳ ಕಾಲ ಮಾಸಿಕ ₹ 7,500 ಸಹಾಯ ಧನ ಕಲ್ಪಿಸಬೇಕು. ಉಚಿತ ಪಡಿತರ ಕೊಡಬೇಕು. ಕಂಟೇನ್ಮೆಂಟ್ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ಪಿಪಿಇ ಕಿಟ್ ಒದಗಿಸಬೇಕು. ಆರೋಗ್ಯ ಸಮಸ್ಯೆ ಇರುವವರಿಗೆ ಕೋವಿಡ್ ಕೆಲಸದಿಂದ ವಿನಾಯಿತಿ ನೀಡಬೇಕು ಎನ್ನುವುದು ಸೇರಿದಂತೆ 17 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ ದಂಡಿ, ಸಂಚಾಲಕ ಬಾಬುರಾವ್ ಹೊನ್ನಾ, ಉಪಾಧ್ಯಕ್ಷೆ ಸುಲೋಚನಾ ಪೂಜಾರಿ, ಕಾರ್ಯದರ್ಶಿಗಳಾದ ನಾಜೀರ್ ಅಹಮ್ಮದ್, ಚಂದ್ರಕಲಾ ಕಮಠಾಣಕರ್, ಸಹ ಕಾರ್ಯದರ್ಶಿಗಳಾದ ಶಿವರಾಜ ಕಟಗಿ, ಇಂದುಮತಿ ಆಣದೂರು, ಮನೋರಂಜನಿ ಮೈಲೂರ, ಸರೋಜನಿ ಘೋಡಂಪಳ್ಳಿ ಹಾಗೂ ಖಜಾಂಚಿ ಬಸಮ್ಮ ಹಾರೂರಗೇರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.