ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಕಾರ್ಯವೈಖರಿಗೆ ಶಾಸಕರ ಆಕ್ರೋಶ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧ್ಯಕ್ಷತೆಯಲ್ಲಿ ಸಭೆ
Last Updated 18 ಮೇ 2020, 15:12 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್ 19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ದಿಸೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಎರಡು ತಿಂಗಳು ಕಳೆದರೂ ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಿಗೆ ಸರಿಯಾಗಿ ಸೌಲಭ್ಯಗಳೇ ದೊರಕಿಲ್ಲ. ಜಿಲ್ಲಾಡಳಿತಕ್ಕೆ ಸೌಲಭ್ಯ ಕಲ್ಪಿಸಲಾಗದಿದ್ದರೆ ನಾವೇ ಪರ್ಯಾಯ ವ್ಯವಸ್ಥೆ ಮಾಡಲು ಸಿದ್ಧ ಎಂದು ಶಾಸಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜಿಲ್ಲಾ ಸಲಹಾ ಸಮಿತಿ ಹಾಗೂ ಕೋವಿಡ್ 19 ಸೋಂಕು ಹರಡುವಿಕೆ ತಡೆಗಟ್ಟುವ ಕುರಿತ ಸಭೆಯಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ‘ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಕಳೆದ ಸಭೆಯಲ್ಲಿ ತಿಳಿಸಿದ್ದೆ. ನಿಮ್ಮಿಂದ ಸಾಧ್ಯವಾಗದಿದ್ದರೆ ಚುನಾಯಿತ ಪ್ರತಿನಿಧಿಗಳ ಮೂಲಕ ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಿದ್ದೆ. ಆದರೆ, ಜಿಲ್ಲಾಡಳಿತ ಚೆಕ್‌ಪೋಸ್ಟ್‌ಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಜಿಲ್ಲಾಧಿಕಾರಿಗೆ ಹೇಳಿದರೆ, ಅವರು ತಹಶೀಲ್ದಾರರಿಗೆ ಸೂಚಿಸುತ್ತಿದ್ದಾರೆ. ತಹಶೀಲ್ದಾರರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. ಪಿಡಿಒಗಳು ಮನೆಯಲ್ಲಿ ಮಲಗುತ್ತಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ವಲಸೆ ಕಾರ್ಮಿಕರು ತೊಂದರೆ ಅನುಭವಿಸುವುದು ತಪ್ಪಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ‘ಬ್ರಿಮ್ಸ್‌ನಲ್ಲಿ ಎರಡು ದಿನಗಳಲ್ಲಿ ಲ್ಯಾಬ್‌ ಆರಂಭಿಸುವುದಾಗಿ ಹೇಳಿ 20 ದಿನಗಳು ಕಳೆದರೂ ಶುರುವಾಗಿಲ್ಲ. ಲ್ಯಾಬ್‌ ಆರಂಭಿಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ’ ಎಂದರು.

ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ನನ್ನ ಹೊಲದಲ್ಲಿ ಮಧ್ಯರಾತ್ರಿ ಅಬಕಾರಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಿ ಆದರೆ, ಅನಗತ್ಯವಾಗಿ ನನ್ನ ಮಾನ ಹರಾಜು ಹಾಕಲು ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದರು.

‘ಅಬಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲಧಿಕಾರಿಗಳು ದಾಳಿ ನಡೆಸಲು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳೇ ದಾಳಿ ನಡೆಸಲು ಸೂಚನೆ ನೀಡಿರುವುದು ಬೇಸರ ತಂದಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ದೂರು ನೀಡಲಾಗುವುದು’ ಎಂದು ಹೇಳಿದರು.

‘ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರು ಹುಮನಾಬಾದ್ ತಾಲ್ಲೂಕಿಗೆ ಭೇಟಿ ಕೊಟ್ಟರೂ ನನಗೆ ಮಾಹಿತಿ ಕೊಡುತ್ತಿಲ್ಲ. ಹಿಂದಿನ ಸಭೆಯಲ್ಲೂ ನಾನು ಈ ವಿಷಯ ಪ್ರಸ್ತಾಪಿಸಿದ್ದೆ. ಆದರೆ ಜಿಲ್ಲಾಧಿಕಾರಿ ಒಂದೇ ಒಂದು ಕರೆ ಮಾಡಿ ಮಾಹಿತಿ ಕೊಟ್ಟಿಲ್ಲ. ನಾನು ಒಂದು ಬಾರಿ ಸಚಿವ ಹಾಗೂ ನಾಲ್ಕು ಬಾರಿ ಶಾಸಕನಾಗಿದ್ದೇನೆ. ನನಗೂ ಘನತೆ, ಗೌರವ ಇದೆ’ ಎಂದು ಸಚಿವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ಬೀದರ್‌ ಶಾಸಕ ರಹೀಂ ಖಾನ್‌ ಮಾತನಾಡಿ, ‘ಲಾಕ್‌ಡೌನ್‌ನಿಂದಾಗಿ ಜನ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅಗತ್ಯ ಸೌಕರ್ಯಗಳಿಗಾಗಿ ಪರಿತಪಿಸಬೇಕಾಗಿದೆ. ಓಲ್ಡ್‌ಸಿಟಿಯಲ್ಲಿ ಸೋಂಕಿತರು ಇರುವ ವಾರ್ಡ್‌ಗಳನ್ನು ಹೊರತು ಪಡಿಸಿ ಬೇರೆ ವಾರ್ಡ್‌ಗಳಲ್ಲಿ ಸಡಿಲಿಕೆ ಕೊಡಬೇಕು’ ಎಂದು ಮನವಿ ಮಾಡಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಆಸ್ಪತ್ರೆ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಿ ಸಹಕರಿಸಿ ಎಂದು ಮನವಿ ಮಾಡಿ, ನೊಟೀಸ್ ನೀಡಿದರೂ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ಸ್ಪಂದಿಸಿಲ್ಲ. ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದುವರೆಗೆ ಬಾಗಿಲು ತೆರೆಯದ ಖಾಸಗಿ ಆಸ್ಪತ್ರೆಗಳ ನೋಂದಣಿ ರದ್ದು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಒತ್ತಾಯಿಸಿದರು.

‘ಬಸವಕಲ್ಯಾಣ, ಹುಮನಾಬಾದ್ ಹಾಗೂ ಇನ್ನಿ ತರ ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ಗಡಿಗಳಲ್ಲಿರುವ ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ‘ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜಿಲ್ಲಾಧಿಕಾರಿ ಕೊಳವೆಬಾವಿ ತೋಡಲು ಅವಕಾಶ ಕೊಟ್ಟರೂ ಪೊಲೀಸರು ಕೊಳವೆಬಾವಿ ಕೊರೆಯುವ ವಾಹನಗಳನ್ನು ತಡೆಯುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಮಧ್ಯೆ ಸಮನ್ವಯತೆ ಕೊರತೆ ಇದೆ. ಇದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಸಂಸದ ಭಗವಂತ ಖೂಬಾ, ಬಸವಕಲ್ಯಾಣ ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ. ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ್ ಇದ್ದರು. ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT