ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ: ಬೀದರ್‌ನಲ್ಲಿ 58,183 ಹೆಕ್ಟೇರ್ ಬೆಳೆ ಹಾನಿ

Last Updated 26 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಕಳೆದ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ 58,183 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾಳಾಗಿವೆ.

ಜಿಲ್ಲೆಯಲ್ಲಿ ಒಟ್ಟಾರೆ 3,222 ಹೆಕ್ಟೇರ್ ಹೆಸರು, 5,931 ಹೆಕ್ಟೇರ್ ಉದ್ದು, 22,845 ಹೆಕ್ಟೇರ್ ತೊಗರಿ, 25,791 ಹೆಕ್ಟೇರ್ ಸೋಯಾಬೀನ್, 241 ಹೆಕ್ಟೇರ್ ಕಬ್ಬು ಹಾಗೂ 151 ಹೆಕ್ಟೇರ್ ಇತರೆ ಬೆಳೆ ಸೇರಿ ಒಟ್ಟು 58,183 ಹೆಕ್ಟೇರ್ ಬೆಳೆ ಹಾಳಾಗಿದೆ.
ಮೂರು ತಿಂಗಳ ಅವಧಿಯಲ್ಲಿ ಬೀದರ್‌ ತಾಲ್ಲೂಕಿನಲ್ಲಿ ಅತಿ ಹೆಚ್ಚು 15,414 ಹಾಗೂ ಕಮಲನಗರ ತಾಲ್ಲೂಕಿನಲ್ಲಿ 13,802
ಹೆಕ್ಟೇರ್‌ ಪ್ರದೇಶನಲ್ಲಿ ಬೆಳೆ ಹಾನಿಯಾಗಿದೆ. ನಂತರದ ಸ್ಥಾನದಲ್ಲಿ ಉಳಿದ ತಾಲ್ಲೂಕುಗಳಿವೆ.

ಬೀದರ್‌ ತಾಲ್ಲೂಕಿನಲ್ಲಿ ಜುಲೈ ಹಾಗೂ ಆಗಸ್ಟ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಸೆಪ್ಟೆಂಬರ್‌ ಮೊದಲ ಹಾಗೂ ಎರಡನೇ ವಾರದಲ್ಲಿ ಸುರಿದ ಮಳೆಗೆ ರೈತರು ನಷ್ಟ ಅನುಭವಿಸಿದ್ದಾರೆ. ಒಟ್ಟು 7,092 ಹೆಕ್ಟೇರ್ ಸೋಯಾಬೀನ್, 1,944 ಹೆಕ್ಟೇರ್ ಹೆಸರು, 1,978 ಹೆಕ್ಟೇರ್‌ ಉದ್ದು, 43.00 ಹೆಕ್ಟೇರ್ ತೊಗರಿ ಹಾಗೂ 100 ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು ಬೆಳೆ ಹಾನಿಯಾಗಿದೆ.

ಹೊಲಗಳ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹ

ಬಸವಕಲ್ಯಾಣ: ಅತಿವೃಷ್ಟಿಯಿಂದಾಗಿ ಹೊಲಗಳಲ್ಲಿನ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹಗೊಂಡು ತಾಲ್ಲೂಕಿನ ವಿವಿಧೆಡೆ ಬೆಳೆ ನಾಶವಾಗಿದೆ.

ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದು ಬೆಳೆಗಳಿಗೆ ಹಾನಿಯಾಗಿದೆ. ಮುಡಬಿ ಹೋಬಳಿಯ ಕೆಲ ಗ್ರಾಮಗಳಲ್ಲಿ ಹಾಗೂ ಕೊಹಿನೂರ ಹೋಬಳಿಯ ಸರಜವಳಗಾ, ಶಿರಗಾಪುರ, ಹತ್ತರ್ಗಾ, ಬಟಗೇರಾ, ರಾಮತೀರ್ಥ, ಲಾಡವಂತಿ, ಶಿರೂರಿ, ಆಲಗೂಡದಲ್ಲಿ ತೆರೆದ ಬಾವಿಗಳು ತುಂಬಿವೆ. ಹೀಗಾಗಿ ಹೊಲಗಳಲ್ಲಿನ ತಗ್ಗು ಪ್ರದೇಶದಲ್ಲಿ ನೀರು ಒಸರುತ್ತಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಬೆಟಬಾಲಕುಂದ ವ್ಯಾಪ್ತಿಯಲ್ಲಾದ ಬೆಳೆ ಹಾನಿ ಪರಿಶೀಲಿಸಿದ್ದಾರೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5,133 ಹೆಕ್ಟೇರ್ ಸೋಯಾಬೀನ್, 8,144 ಹೆಕ್ಟೇರ್ ತೊಗರಿ, 301 ಹೆಕ್ಟೇರ್ ಹೆಸರು ಹಾಗೂ 679 ಹೆಕ್ಟೇರ್ ಪ್ರದೇಶದಲ್ಲಿನ ಉದ್ದಿನ ಬೆಳೆಗೆ ಹಾನಿಯಾಗಿದೆ.

‘ಕಳೆದ ಸಾಲಿನಲ್ಲಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಸರ್ಕಾರದಿಂದ ₹ 18 ಕೋಟಿ ಪರಿಹಾರ ಧನ ವಿತರಣೆಯಾಗಿದೆ. ₹ 4.5 ಕೋಟಿ ಬೆಳೆ ವಿಮೆ ದೊರೆತಿದೆ' ಎಂದು ಬಸವಕಲ್ಯಾಣದ ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಹೇಳುತ್ತಾರೆ.

ಔರಾದ್: 11,655 ಹೆಕ್ಟೇರ್ ಬೆಳೆ ಹಾನಿ

ಔರಾದ್: ತಾಲ್ಲೂಕಿನಾದ್ಯಂತ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ 11,655 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಸಂತಪುರ ಹೋಬಳಿಯಲ್ಲಿ ಅತಿ ಹೆಚ್ಚು 4,835 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಉಳಿದಂತೆ ಔರಾದ್ ಹೋಬಳಿಯಲ್ಲಿ 3585, ಚಿಂತಾಕಿ ಹೋಬಳಿಯಲ್ಲಿ 3,235 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ತೊಗರಿ ಬೆಳೆ 5,475 ಹೆಕ್ಟೇರ್, ಸೋಯಾ 5,195, ಉದ್ದು 730, ಹೆಸರು 200, ಹತ್ತಿ 35, ಜೋಳ 20 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ.

‘ಬೆಳೆ ಹಾನಿಯಾದ ಮಾಹಿತಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. 10 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ನೋಂದಣಿ ಮಾಡಿಸಲಾಗಿದೆ. ಸಂಬಂಧಿತ ವಿಮಾ ಕಂಪನಿಗೆ ಮಾಹಿತಿ ನೀಡಲಾಗಿದ್ದು, ಪರಿಹಾರ ಬರಬೇಕಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎ.ಅನ್ಸಾರಿ ತಿಳಿಸಿದ್ದಾರೆ.

ಕಮಲನಗರ ತಾಲ್ಲೂಕಿನಲ್ಲಿ 11,250 ಹೆಕ್ಟೇರ್ ಬೆಳೆ ಹಾನಿ

ಕಮಲನಗರ ತಾಲ್ಲೂಕಿನಲ್ಲಿ ಸೆ. 22ರ ವರೆಗೆ 644.5 ಮಿ.ಮೀ ಮಳೆಯಾಗಿದೆ. ನದಿಪಾತ್ರ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಕಮಲನಗರ ತಾಲ್ಲೂಕಿನಲ್ಲಿ 11,250 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್ ರಮೇಶ ಪೆದ್ದೆ ಮಾಹಿತಿ ನೀಡಿದರು.

ಕಮಲನಗರ ಹೋಬಳಿ ವ್ಯಾಪ್ತಿಯಲ್ಲಿ 40 ಹೆಕ್ಟೇರ್‌ದಲ್ಲಿನ ಹೆಸರು, 70 ಹೆಕ್ಟೇರ್‌ ಉದ್ದು, 2,925 ಹೆಕ್ಟೇರ್‌ ಸೋಯಾ ಹಾಗೂ 1,880 ಹೆಕ್ಟೇರ್‌ ತೊಗರಿ ಹಾಳಾಗಿದೆ ಎಂದು ಔರಾದ್ ಕೃಷಿ ನಿರ್ದೇಶಕ ಅನ್ಸಾರಿ ತಿಳಿಸಿದರು.

ತಾಲ್ಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದು ಶೀಘ್ರ ಪರಿಹಾರ ಕೊಡಿಸುವ ದಿಸೆಯಲ್ಲಿ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಡಿಗ್ಗಿ ಗ್ರಾಮ ಘಟಕ ಅಧ್ಯಕ್ಷ ಮಡಿವಾಳಪ್ಪ ಮುರ್ಕೆ ಮನವಿ ಮಾಡಿದರು.

ಎಳ್ಳು, ಸೋಯಾ ನೀರು ಪಾಲು

ಚಿಟಗುಪ್ಪ ತಾಲ್ಲೂಕಿನಾದ್ಯಂತ ಅತಿವೃಷ್ಟಿಯಿಂದ ಎಳ್ಳು, ಸೋಯಾ ಬೆಳೆ ಹಾಳಾಗಿವೆ.

ನಿರ್ಣಾ, ಮಂಗಲಗಿ, ಮುತ್ತಂಗಿ, ಮುಸ್ತರಿ, ಚಾಂಗಲೇರಾ ಮತ್ತು ಉಡಬಾಳ ಗ್ರಾಮಗಳಲ್ಲಿ ಸೋಯಾ ಬೆಳೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮೂರು ನಾಲ್ಕು ದಿನಗಳಲ್ಲಿ ರಾಶಿ ಮಾಡುವ ಹಂತದಲ್ಲಿದ್ದ ಸೋಯಾ ಕಾಯಿ ಮಳೆಯಿಂದ ಹಾಳಾಗಿವೆ ಒಣಗಿದ ಕಾಯಿ ಬಾಯಿ ಬಿಚ್ಚಿ ಬೀಜ ಹೊಲದಲ್ಲಿಯೇ ಉದುರಿವೆ.

‘ಹುಮನಾಬಾದ್ ತಾಲ್ಲೂಕಿನಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ 1,998 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಹಳ್ಳಿಖೇಡ(ಬಿ) ಹೋಬಳಿಯಲ್ಲಿ ಅತಿ ಹೆಚ್ಚು 1,328 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ’ ಎಂದು ಕೃಷಿ ಅಧಿಕಾರಿ ಗೌತಮ ಹೇಳಿದರು.

ಸೋಯಾಬೀನ್‌ ಅತಿವೃಷ್ಟಿಗೆ ಹೆಚ್ಚು ಹಾನಿ

ಭಾಲ್ಕಿ: ತಾಲ್ಲೂಕಿನಲ್ಲಿ ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ಒಟ್ಟು 5,536 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಸೋಯಾಬಿನ್ ಅತಿ ಹೆಚ್ಚು ಹಾನಿಗೆ ಒಳಗಾಗಿದೆ. ಒಟ್ಟು 2,291 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಸೋಯಾಬೀನ್‌ ಮಳೆಗೆ ಆಹುತಿಯಾಗಿದೆ.

446 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಹೆಸರು, 1,049 ಹೆಕ್ಟೇರ್ ಉದ್ದು, 1,675 ಹೆಕ್ಟೇರ್ ತೊಗರಿ, 73 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಕಬ್ಬು ಹಾನಿಯಾಗಿದೆ.

ಜುಲೈ ತಿಂಗಳಿನಲ್ಲಿ ಸುರಿದ ಬೆಳೆಗೆ 620, ಆಗಸ್ಟ್‌ನಲ್ಲಿನ ಮಳೆಗೆ 1,298, ಸೆಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ 3,616 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ.

ಭಾಲ್ಕಿ ತಾಲ್ಲೂಕು ಈಗಾಗಲೇ ಅತಿವೃಷ್ಟಿ ಪೀಡಿತ ಎಂದು ಘೋಷಣೆ ಆಗಿದೆ. ಇನ್ನು ಎರಡ್ಮೂರು ದಿನದಲ್ಲಿ ಬೆಳೆ ಹಾನಿಯ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಲಾಗುವುದು. ಸರ್ಕಾರದ ಮಾರ್ಗಸೂಚಿ ಅನ್ವಯ ಬೆಳೆ ಹಾನಿಯಾದ ರೈತರ ಖಾತೆಗೆ ಪರಿಹಾರದ ಹಣ ನೇರವಾಗಿ ಜಮೆ ಆಗಲಿದೆ. ಮನೆಗೆ ಮಳೆ ನೀರು ನುಗ್ಗಿ ಹಾನಿಯಾದ 29 ಮನೆಗಳ ಮಾಲೀಕರಿಗೆ ಎನ್‌ಡಿಆರ್‌ಎಫ್‌ ನಿಯಮದ ಅನ್ವಯ ಜಿಲ್ಲಾಧಿಕಾರಿ ಕಚೇರಿಯಿಂದ ಹಣ ಬಿಡುಗಡೆ ಆಗಿದೆ ಎಂದು ತಹಶೀಲ್ದಾರ್‌ ಕೀರ್ತಿ ಚಾಲಕ್‌ ತಿಳಿಸಿದರು.

ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಕೆ

ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹ 6,800, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹ 13,500 ಮತ್ತು ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್‌ಗೆ ₹ 18,000 ಪರಿಹಾರ ಸಿಗಲಿದೆ. ಪ್ರವಾಹ ಪರಿಹಾರಕ್ಕಾಗಿ ಆರ್ಥಿಕ ನೆರವು ಕೋರಿ ಜಿಲ್ಲಾಡಳಿತ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ತಿಳಿಸಿದ್ದಾರೆ.

‘2019ರಲ್ಲಿ 21 ಅರ್ಜಿಗಳು ತಿರಸ್ಕೃತಗೊಂಡಿವೆ. 2019–2020ರಲ್ಲಿ 53,300 ರೈತರಿಗೆ ₹ 50 ಕೋಟಿ ಪರಿಹಾರ ಕೊಡಲಾಗಿದೆ. ಪ್ರಸಕ್ತ ವರ್ಷ 8,076 ರೈತರಿಗೆ ಬೆಳೆ ವಿಮೆ ಪರಿಹಾರ ದೊರಕಿಲ್ಲ. ಬೀದರ್ ಜಿಲ್ಲೆಗೆ ಈವರೆಗೆ ₹ 70 ಕೋಟಿ ಬೆಳೆ ವಿಮೆ ಪರಿಹಾರ ಬರಬೇಕಿತ್ತು. ₹ 59 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇನ್ನೂ 11 ಕೋಟಿ ಬರಬೇಕಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ತಿಳಿಸಿದ್ದಾರೆ.

ಪೂರಕ ಮಾಹಿತಿ: ಮಾಣಿಕ ಭುರೆ, ವೀರೇಶ ಮಠಪತಿ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಗುಂಡು ಅತಿವಾಳ, ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT