ಶನಿವಾರ, ಆಗಸ್ಟ್ 13, 2022
25 °C
ಮಳೆ ನೀರಿಗೆ ಕೊಚ್ಚಿಹೋದ ರಸ್ತೆ ದುರಸ್ತಿಪಡಿಸಿಕೊಂಡ ಗಾದಗಿ ಗ್ರಾಮಸ್ಥರು

ಬೀದರ್‌ ಜಿಲ್ಲೆಯಲ್ಲಿ ಉಕ್ಕಿ ಹರಿದ ಹಳ್ಳಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಬೆಳಗಿನ ಜಾವ ಮಳೆ ಅಬ್ಬರಿಸಿ ಬೀದರ್‌ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ಚಿಕ್ಕ ಹಳ್ಳಗಳು ಉಕ್ಕಿ ಹರಿದು ಕೆಲ ಹೊತ್ತು ಸಂಚಾರಕ್ಕೆ ತೊಂದರೆಯಾಗಿತ್ತು.

ಬೀದರ್‌–ಗಾದಗಿ ರಸ್ತೆಯಲ್ಲಿ ಮಳೆಯ ಅಬ್ಬರಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ಬೆಳಿಗ್ಗೆ ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡು ಮುಂದೆ ಹೋಗುವುದು ಕಷ್ಟವಾಯಿತು. ಗ್ರಾಮದ ಜನರು ಸೇರಿಕೊಂಡು ಜೆಸಿಬಿಯಿಂದ ರಸ್ತೆಯನ್ನು ದುರಸ್ತಿ ಪಡಿಸಿದರು.

2013ರಲ್ಲಿ ರಸ್ತೆ ಮಂಜೂರು ಆಗಿದೆ. ಆದರೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇನ್ನೂ ರಸ್ತೆ ನಿರ್ಮಾಣ ಆರಂಭಿಸಿಲ್ಲ. ಆಟೊರಿಕ್ಷಾಗಳು ಹಾಗೂ ದ್ವಿಚಕ್ರ ವಾಹನಗಳು ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತವೆ. ಸುಮಾರು ಆರು ಗ್ರಾಮಗಳ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಸಂಬಂಧಪಟ್ಟವರು ತಕ್ಷಣ ರಸ್ತೆ ದುರಸ್ತಿ ಮಾಡಬೇಕು ಎಂದು ಗಾದಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬೀದರ್ ತಾಲ್ಲೂಕಿನ ಸಿರ್ಸಿ(ಎ) ಹಾಗೂ ಸಂಗೋಳಗಿ ನಡುವಿನ ಹಳ್ಳದ ಸೇತುವೆ ಬದಿಯ ಮಣ್ಣು ಕೊಚ್ಚಿಕೊಂಡು ಹೋಗಿದೆ. ಗಿಡಗಂಟಿಗಳು ಸೇತುವೆ ಕೆಳಗಿನ ಪೈಪ್‌ನಲ್ಲಿ ಸಿಲುಕಿಕೊಂಡ ಕಾರಣ ನೀರು ಸೇತುವೆ ಮೇಲಿಂದ ಹರಿಯಿತು.
ಅಪಾಯ ಲೆಕ್ಕಿಸದೆ ಕಾರು ಚಾಲಕರು ಸೇತುವೆ ಮೇಲಿಂದ ವಾಹನ ಚಲಾಯಿಸಿಕೊಂಡು ಹೋದರು. ಮಧ್ಯಾಹ್ನದ ವೇಳೆ ನೀರು ಕಡಿಮೆಯಾದರೂ ಸೇತುವೆ ಪಕ್ಕದಲ್ಲಿ ದೊಡ್ಡದಾದ ಕಂದಕ ನಿರ್ಮಾಣವಾಗಿದೆ.

ಬೀದರ್‌ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಅತಿವೃಷ್ಟಿಗೆ ಸೋಯಾ ಬೆಳೆ ನೀರು ಪಾಲಾಗಿದೆ. ಕೆಲವು ಕಡೆ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ.

ಬಾವಗಿ ಸಮೀಪದ ಸೇತುವೆ ಪಕ್ಕದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಮಣ್ಣು ತಂದು ಸುರಿದ ನಂತರ ವಾಹನಗಳು ಕೆಸರಲ್ಲಿ ಸಿಕ್ಕಿಕೊಳ್ಳುತ್ತಿವೆ. ಸರಕು ಸಾಗಣೆ ಲಾರಿಗಳು ಬಹಳ ಹೊತ್ತಿನ ವರೆಗೆ ಕೆಸರಲ್ಲಿ ಸಿಲುಕಿದ್ದರಿಂದ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಟ್ರ್ಯಾಕ್ಟರ್‌ ಸಹಾಯದಿಂದ ಎಳೆದು ತಂದು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು