ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಅನಾಹುತ ತಪ್ಪಿಸಿದ ಸಮಯಪ್ರಜ್ಞೆ

ಅಧಿಕಾರಿಗಳ ಯತ್ನ; ಕಲಬುರ್ಗಿ ಜಿಲ್ಲಾಡಳಿತದ ನೆರವು
Last Updated 11 ಮೇ 2021, 5:59 IST
ಅಕ್ಷರ ಗಾತ್ರ

ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಆಮ್ಲ ಜನಕ ಸಂಗ್ರಹ ಪ್ರಮಾಣ ಕಡಿಮೆಯಾದ ಕಾರಣ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಲ್ಲಿ ಸೋಮವಾರ ಆತಂಕ ಸೃಷ್ಟಿಯಾಗಿತ್ತು.

ನಸುಕಿನ ಜಾವ 5ಕ್ಕೆ ಬಳ್ಳಾರಿಯಿಂದ ಬ್ರಿಮ್ಸ್ ಆಸ್ಪತ್ರೆಗೆ 14 ಕೆ.ಎಲ್ ಆಮ್ಲಜನಕ ಹೊತ್ತ ಟ್ಯಾಂಕರ್ ಬರಬೇಕಿತ್ತು. ಆದರೆ, ಸರಿಯಾದ ಸಮಯಕ್ಕೆ ತಲುಪಲಿಲ್ಲ. ಆಸ್ಪತ್ರೆಯಲ್ಲೂ ಶೇ 10 ರಷ್ಟು ಆಮ್ಲಜನಕ ಸಂಗ್ರಹ ಮಾತ್ರ ಉಳಿದುಕೊಂಡಿತ್ತು. ಹೀಗಾಗಿ ಯಾವಾಗ ಏನಾಗುತ್ತದೆಯೋ ಎನ್ನುವ ಭಯ ಕಾಡಿತ್ತು.

ಕೂಡಲೇ ಎಚ್ಚೆತ್ತುಕೊಂಡ ಆಡಳಿತ ಬಸವಕಲ್ಯಾಣ, ಭಾಲ್ಕಿ, ಹುಮನಾ ಬಾದ್, ಔರಾದ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ತರಿಸಿಕೊಂಡಿತು. ಕರ್ನಾಟಕ ಗ್ಯಾಸ್‍ನಿಂದ ಹೈದರಾ ಬಾದ್‍ನಿಂದ ಬಂದ ಸಿಲಿಂಡರ್‌ಗಳನ್ನೂ ಪಡೆದುಕೊಂಡಿತು. 400 ಸಿಲಿಂಡರ್‌ಗಳನ್ನು ಒಟ್ಟುಗೂಡಿಸಿತು.

ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ದುರಂತದ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಬ್ರಿಮ್ಸ್ ಆಸ್ಪತ್ರೆಗೆ ದೌಡಾಯಿಸಿದರು. ಪೊಲೀ ಸರೂ ಜಮಾಯಿಸಿದರು. ಪರಿಸ್ಥಿತಿ ನಿಭಾಯಿಸಲು ತಯಾರಿ ನಡೆಸಿದರು.

ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಬೀದರ್‌ಗೆ ಆಮ್ಲಜನಕ ತರುವ ಟ್ಯಾಂಕರ್‌ ಮಾರ್ಗಮಧ್ಯೆ ಕೆಟ್ಟಿತ್ತು. ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಗಳು ಕಲಬುರ್ಗಿ ಜಿಲ್ಲಾ ಆಡಳಿತವನ್ನು ಸಂಪರ್ಕಿಸಿ, ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು. ತಕ್ಷಣ ಕಲಬುರ್ಗಿ ಜಿಲ್ಲಾ ಆಡಳಿತ ಅಲ್ಲಿಗೆ ಬಂದಿದ್ದ ಟ್ಯಾಂಕರ್‌ನ್ನು ಬೀದರ್‌ಗೆ ಕಳುಹಿಸಿತು. ನಂತರ ಬೀದರ್‌ಗೆ ಬರಬೇಕಿದ್ದ ಟ್ಯಾಂಕರ್‌ ಕಲಬುರ್ಗಿಗೆ ಕಳುಹಿಸಲಾಯಿತು.

ಕಲಬುರ್ಗಿಯಿಂದ ಮಧ್ಯಾಹ್ನ 1.15 ರ ಸುಮಾರಿಗೆ ಬಂದ ಆಮ್ಲಜನಕ ಟ್ಯಾಂಕರ್‌ ಪೊಲೀಸ್ ವಾಹನಗಳ ಬೆಂಗಾವಲಲ್ಲಿ ಬ್ರಿಮ್ಸ್‌ಗೆ ತರಲಾಯಿತು. ಟ್ಯಾಂಕರ್ ಬರುವವರೆಗೆ 400 ಆಮ್ಲಜನಕ ಸಿಲಿಂಡರ್‌ಗಳ ಪೈಕಿ 100 ಸಿಲಿಂಡರ್‌ಗಳು ಬಳಕೆಯಾಗಿದ್ದವು. ಟ್ಯಾಂಕರ್ ಬಂದ ನಂತರ ಎಲ್ಲರೂ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಟ್ಟು 438 ಕೋವಿಡ್ ಪೀಡಿತರಿದ್ದಾರೆ. ಆಮ್ಲಜನಕ ಹಾಸಿಗೆಗಳಲ್ಲಿ ಇರುವ ಸೋಂಕಿತರ ಸಂಖ್ಯೆ 380ರಿಂದ 400 ಆಗಿದೆ.

‘ಆಮ್ಲಜನಕ ಕೊರತೆಯಿಂದ ಕಾರಣ ಸೋಂಕಿತರು ಕೆಲ ಕಡೆ ಸಾವನ್ನಪ್ಪಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಯಲ್ಲಿ ಆಮ್ಲಜನಕ ಸಂಗ್ರಹ ಮಾಡಿಟ್ಟು ಕೊಳ್ಳಬೇಕು. ಇಲ್ಲದಿದ್ದರೆ, ಅಹಿತಕರ ಘಟನೆ ಸಂಭವಿಸುವತ್ತದೆ’ ಎಂದು ರೋಗಿಗಳ ಸಂಬಂಧಿಕರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT