ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿ

ಪೊಲೀಸರ ಧಿಡೀರ್‌ ಕಾರ್ಯಾಚರಣೆಗೆ ಗಾಬರಿಗೊಂಡ ಜನ
Last Updated 23 ಏಪ್ರಿಲ್ 2021, 5:04 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಲೇ ಇರುವ ಕಾರಣ ಜಿಲ್ಲೆಯಲ್ಲಿ ಮೇ 4ರ ವರೆಗೆ ಭಾಗಶಃ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

ಗುರುವಾರ ಪೊಲೀಸರು ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಧಿಡೀರ್‌ ಮಾರುಕಟ್ಟೆ ಪ್ರದೇಶಕ್ಕೆ ಬಂದು ಅಂಗಡಿಗಳನ್ನು ಬಂದ್‌ ಮಾಡಿಸಲು ಶುರು ಮಾಡಿದ್ದರಿಂದ ವ್ಯಾಪಾರಿಗಳು, ಸಾರ್ವಜನಿಕರು ಆತಂಕಕ್ಕೆ ಒಳಗಾದರು. ಅನೇಕರು ಅಲ್ಲಲ್ಲಿ ತೆರೆದಿದ್ದ ಕಿರಾಣಿ ಅಂಗಡಿಗಳಲ್ಲಿ ತರಾತುರಿಯ ಅಗತ್ಯ ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋದರು.

ಜಿಲ್ಲೆಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6ರ ವರೆಗೆ ರಾತ್ರಿ ಕರ್ಫ್ಯೂ, ಶನಿವಾರ ಹಾಗೂ ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದರೆ, ಸರ್ಕಾರದ ತುರ್ತು ಆದೇಶ ಬಂದ ನಂತರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪೊಲೀಸರು ವಾಹನಗಳಲ್ಲಿ ಬಂದು ಅಂಗಡಿಗಳನ್ನು ಬಂದ್‌ ಮಾಡಿಸಿದರು.

ನಗರದ ಅಂಬೇಡ್ಕರ್ ವೃತ್ತ, ಗವಾನ್ ಚೌಕ್‌, ಮೋಹನ್‌ ಮಾರ್ಕೆಟ್, ಉದಗಿರ ರಸ್ತೆ, ಗುಂಪಾ ರಸ್ತೆ, ಮೈಲೂರ್‌ ಕ್ರಾಸ್‌ನಲ್ಲಿರುವ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಕೆಲವು ಕಡೆ ಪೊಲೀಸರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದವೂ ನಡೆಯಿತು. ಆದರೆ, ಪೊಲೀಸರು ವ್ಯಾಪಾರಸ್ಥರಿಗೆ ಮನವರಿಕೆ ಮಾಡಿ ಅಂಗಡಿಗಳನ್ನು ಮುಚ್ಚಿಸಿದರು.

ವಾಹನ ಸಂಚಾರಕ್ಕೆ ನಿರ್ಬಂಧ ಹೇರಿಲ್ಲ. ರಸ್ತೆ ಸಾರಿಗೆ ಸಂಸ್ಥೆ, ಖಾಸಗಿ ಬಸ್ ಹಾಗೂ ಸರಕು ಸಾಗಣೆ ವಾಹನಗಳು ಸಂಚರಿಸುತ್ತಿವೆ. ಜಿಲ್ಲೆಯ ಗಡಿಗಳಲ್ಲಿ ಸ್ಥಾಪಿಸಲಾಗಿರುವ ಏಳು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿದ ನಂತರವೇ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುತ್ತಿದೆ. ಅಂತರರಾಜ್ಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿಲ್ಲ.

‘ಸರ್ಕಾರ ಎರಡು ವಾರ ಭಾಗಶಃ ಲಾಕ್‌ಡೌನ್‌ಗೆ ಆದೇಶ ನೀಡಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಆಸ್ಪತ್ರೆಗಳು, ಮೆಡಿಕಲ್, ಕಿರಾಣಿ ಅಂಗಡಿಗಳು, ಬೇಕರಿ, ಉತ್ಪಾದನಾ ಕ್ಷೇತ್ರದ ಕಂಪನಿಗಳು ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

‘ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ ಮಳಿಗೆಗಳು, ಮಾಲ್‌, ಚಿತ್ರಮಂದಿರ ಬಂದ್‌ ಮಾಡಲು ಸೂಚಿಸಲಾಗಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಪಡೆಯಬಹುದು. ಆದರೆ, ಒಳಗೆ ಕುಳಿತು ಆಹಾರ, ಉಪಾಹಾರ ಸೇವಿಸಲು ನಿರ್ಬಂಧ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ.

ಮದ್ಯ ಪಾರ್ಸೆಲ್‌ಗೆ ಅವಕಾಶ
ಬೀದರ್‌:
ಜಿಲ್ಲೆಯಲ್ಲಿ ರೆಸ್ಟೋರೆಂಟ್ ಹಾಗೂ ಬಾರ್‌ಗಳು ಎಂಆರ್‌ಪಿ ದರದಲ್ಲಿ ಪಾರ್ಸಲ್‍ಗೆ ಅವಕಾಶ ನೀಡಲಾಗಿದೆ. ಲಾಡ್ಜ್‌ಗಳಲ್ಲಿರುವ ಅತಿಥಿಗಳಿಗೆ ಊಟ, ಉಪಾಹಾರ ಪೂರೈಸಬಹುದು. ದೇಗುಲಗಳ ದೈನಂದಿನ ಪೂಜಾ ಕೈಂಕರ್ಯ ಮಾಡಿಕೊಳ್ಳಬಹುದಾಗಿದೆ. ಶಾಲಾ, ಕಾಲೇಜು ಆನ್‍ಲೈನ್ ತರಗತಿಗಳಿಗೆ ಅವಕಾಶವಿದೆ. ಆದರೆ, ಟ್ಯೂಷನ್‍ಗಳಿಗೆ ಅವಕಾಶ ಇಲ್ಲ.

ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ
ಅನುಮತಿ ನೀಡಲಾಗಿದೆ.

ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಭೆ ಸಮಾರಂಭ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಪ್ರೋತ್ಸಾಹ ನೀಡಬೇಕು. ಫುಟ್‍ಬಾತ್ ಹಾಗೂ ಪಾನೀಪುರಿಯಂತಹ ಅಂಗಡಿಮುಂಗಟ್ಟುಗಳಿಗೆ ಅವಕಾಶ ನೀಡಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಂತೆ, ಜನುವಾರುಗಳ ಸಂತೆ ಹಾಗೂ ಜಾತ್ರೆಗಳನ್ನು ರದ್ದು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದ್ದಾರೆ.

ಲಾಕ್‌ಡೌನ್‌ಗೆ ಅಸಮಾಧಾನ
ಬೀದರ್‌:
‘ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೊಂದು, ಖಾಸಗಿಯವರಿಗೆ ಇನ್ನೊಂದು ನೀತಿ ಅನುಸರಿಸಿದೆ. ಜವಳಿ ಉದ್ಯಮ ಸೇರಿದಂತೆ ಇನ್ನಿತರ ಉದ್ಯಮಗಳಲ್ಲಿ ಲಕ್ಷಾಂತರ ಹಣ ತೊಡಗಿಸಿದವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಂಗಡಿಗಳನ್ನು ಬಂದ್‌ ಮಾಡಿದ ನಂತರ ಬಾಡಿಗೆ ಹೊರೆ, ನೌಕರರ ವೇತನ ಹೊರೆಯಿಂದ ಮಾಲೀಕರು ಆರ್ಥಿಕವಾಗಿ ದಿವಾಳಿಯಾಗಲಿದ್ದಾರೆ’ ಎಂದು ಬಿಜೆಪಿ ಹಿರಿಯ ಮುಖಂಡ ಸಂಗಮೇಶ ನಾಸಿಗಾರ ತಿಳಿಸಿದ್ದಾರೆ.

‘ನೌಕರರ ಕುಟುಂಬಗಳು ಬೀದಿಗೆ ಬರಲಿವೆ. ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸುವ ಬದಲು ಪರ್ಯಾಯ ಉಪಾಯ ಕಂಡುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT