ಶುಕ್ರವಾರ, ಮೇ 14, 2021
32 °C
ನಗರ, ಪಟ್ಟಣಗಳ ಮಾರುಕಟ್ಟೆ ಪ್ರದೇಶ ಸ್ತಬ್ಧ

ಭಾಗಶಃ ಲಾಕ್‌ಡೌನ್‌: ಸಹಕಾರ ನೀಡಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಮೊದಲ ದಿನ ದಿಢೀರ್‌ ಭಾಗಶಃ ಲಾಕ್‌ಡೌನ್‌ನಿಂದ ವ್ಯಾಪಾರಸ್ಥರು ಕಕ್ಕಾಬಿಕ್ಕಿಯಾದರೂ ಶುಕ್ರವಾರ ತಮ್ಮ ಮಳಿಗೆಗಳನ್ನು ಬಂದ್‌ ಮಾಡಿ ಸಹಕಾರ ನೀಡಿದರು. ಸಾರ್ವಜನಿಕರು ಸಹ ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಮನೆಗಳಲ್ಲೇ ಉಳಿದದ್ದರಿಂದ ನಗರ, ಪಟ್ಟಣ ಪ್ರದೇಶಗಳ ಮಾರುಕಟ್ಟೆ ಪ್ರದೇಶ ಸ್ತಬ್ಧಗೊಂಡಿತ್ತು. ಜನನಿಬಿಡ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.

ಅಗತ್ಯ ವಸ್ತಗಳ ಖರೀದಿ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರ ಕೊಡಲು ಹೊರಟಿದ್ದವರು, ಸರ್ಕಾರಿ ನೌಕರರು ಹಾಗೂ ಬ್ಯಾಂಕ್‌ ಸಿಬ್ಬಂದಿ ಮಾತ್ರ ಬೆಳಿಗ್ಗೆ ಹಾಗೂ ಸಂಜೆ ರಸ್ತೆ ಮೇಲೆ ಕಂಡು ಬಂದರು. ಮಧ್ಯಾಹ್ನ ನಗರದಲ್ಲಿ ಸ್ಮಶಾನ ಮೌನ ಆವರಿಸಿತ್ತು.

ಬೀದಿ ವ್ಯಾಪಾರಿಗಳಿಗೆ ಪೊಲೀಸರು ಅವಕಾಶ ಕೊಡಲಿಲ್ಲ. ವಾರ್ಡ್‌ಗಳಲ್ಲಿ ಕೈಗಾಡಿಗಳ ಮೇಲೆ ತರಕಾರಿ ಮಾರಾಟ ಮಾಡುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗಾಂಧಿ ಗಂಜ್‌ ಸಂಪೂರ್ಣ ಬಂದ್‌ ಆಗಿತ್ತು. ಕೃಷಿ ಉಪಕರಣ ಹಾಗೂ ಗೊಬ್ಬರ ಮಾರಾಟ ಮಳಿಗೆಗಳನ್ನು ಸಹ ಪೊಲೀಸರು ಬಂದ್‌ ಮಾಡಿಸಿದರು.

ಪಾನಬೀಡಾ ಅಂಗಡಿಗೆ ಅನುಮತಿ
ನಗರದ ಪ್ರಮುಖ ಸ್ಥಳಗಳಲ್ಲಿರುವ ಪಾನಬೀಡಾ ಅಂಗಡಿಗಳು ತೆರೆದುಕೊಂಡಿದ್ದವು. ಕೆಲವರು ಎಲೆ ಅಡಿಕೆ, ಗುಟ್ಕಾ ಜಗಿದು ಅಂಗಡಿಗಳ ಮುಂದೆಯೇ ಉಗಿಯುತ್ತಿದ್ದರು. ತಂಪು ಪಾನೀಯ ಮಾರಾಟ ಮಳಿಗೆಗಳು ಹಾಗೂ ಬೇಕರಿಗಳಿಗೂ ಅವಕಾಶ ನೀಡಲಾಗಿತ್ತು.

‘ಪಾನಬೀಡಾ ಅಂಗಡಿಗಳಿಗೆ ಅವಕಾಶ ನೀಡಿರುವುದು ಹಾಗೂ ಸುಪರ್‌ ಮಾರ್ಕೆಟ್ ಮಳಿಗೆ ಬಂದ್ ಮಾಡಿಸಿರುವುದು ಸರಿಯಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ತಿಂದು ಉಗಿಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವ ವ್ಯಕ್ತಿಗಳಿಗೂ ದಂಡ ವಿಧಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸಂಗಮೇಶ ನಾಸಿಗಾರ ಆಗ್ರಹಿಸಿದ್ದಾರೆ.

ಮನೆಯಲ್ಲೇ ಪ್ರಾರ್ಥನೆ
ರಮ್ಜಾನ್‌ ಇದ್ದರೂ ಕೋವಿಡ್ ಕಾರಣ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿದೆ. ಐವರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಮುಸ್ಲಿಮರು ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು.

ಬಿಸಿಲು ಹೆಚ್ಚಿರುವ ಕಾರಣ ಉಪವಾಸವಿರುವಿದ್ದವರು ಮಧ್ಯಾಹ್ನ ಮನೆಗಳಿಂದ ಹೊರಗೆ ಬರಲಿಲ್ಲ. ಸಂಜೆ ಹಣ್ಣು ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಿದರು. ಭಾಗಶಃ ಲಾಕ್‌ಡೌನ್‌ ಸಂದರ್ಭದಲ್ಲಿ ದಿನಪತ್ರಿಕೆಗಳು ಹಾಗೂ ಹಾಲು ಪೂರೈಕೆಗೆ ತಡೆ ಉಂಟು ಮಾಡಿಲ್ಲ. ಪಾಕೆಟ್‌ ಹಾಲು ಹಾಗೂ ಗೌಳಿ ಸಮುದಾಯಕ್ಕೂ ಮನೆ ಮನೆಗೆ ಹಾಲು ಪೂರೈಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಚಾರಕ್ಕೆ ತೊಡಕು
ಕೋವಿಡ್‌ ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ ನಿರ್ಬಂಧದಿಂದಾಗಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪ್ರಚಾರಕ್ಕೆ ತೊಡಕು ಉಂಟಾಯಿತು. ಅಭ್ಯರ್ಥಿಗಳು ಕರಪತ್ರಗಳನ್ನು ಹಿಡಿದು ಮನೆ ಮನೆಗೆ ತೆರಳಿ ಮನವಿ ಮಾಡಿದರು.

ಅಭ್ಯರ್ಥಿಗಳ ಬೆಂಬಲಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜಕೀಯ ಪಕ್ಷಗಳ ಟಿಕೆಟ್‌ ಪಡೆದು ಸ್ಪರ್ದಿಸಿರುವ ಅಭ್ಯರ್ಥಿಗಳು ತಮ್ಮ ನಾಯಕರ ಮೊರೆ ಹೋಗಿ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿ ಕೊಳ್ಳುತ್ತಿದ್ದಾರೆ ಎಂದು ರಾಜಕೀಯ ಪಕ್ಷವೊಂದರ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು