₹ 1.20 ಕೋಟಿ ವೆಚ್ಚದಲ್ಲಿ ಪತ್ರಿಕಾ ಭವನ ನಿರ್ಮಾಣ

7
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಭರವಸೆ

₹ 1.20 ಕೋಟಿ ವೆಚ್ಚದಲ್ಲಿ ಪತ್ರಿಕಾ ಭವನ ನಿರ್ಮಾಣ

Published:
Updated:
Deccan Herald

ಬೀದರ್‌: ‘ಎರಡು ವರ್ಷದೊಳಗೆ ನಗರದಲ್ಲಿ ₹ 1.20 ಕೋಟಿ ವೆಚ್ಚದಲ್ಲಿ ಪತ್ರಿಕಾ ಭವನ ನಿರ್ಮಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಭರವಸೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಎಸ್.ಆರ್.ಎಸ್ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪತ್ರಿಕಾ ಭವನಕ್ಕೆ ಈಗಾಗಲೇ ಜಾಗ ಇದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ₹ 25 ಲಕ್ಷ ರೂಪಾಯಿ ಸಹ ಇದೆ. ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಚರ್ಚೆ ನಡೆಸುವ ಮೂಲಕ ತಾಂತ್ರಿಕ ಸಮಸ್ಯೆ ನಿವಾರಿಸಲಾಗುವುದು. ಸಂಸದರ ನಿಧಿಯಿಂದ ₹ 20 ಲಕ್ಷ, ಆರು ಜನ ಶಾಸಕರ ನಿಧಿಯಿಂದ ತಲಾ ₹ 10 ಲಕ್ಷ, ಮೂವರು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ತಲಾ ₹ 5 ಲಕ್ಷ ಸೇರಿದರೆ ಒಟ್ಟು ₹ 1.20 ಕೋಟಿ ಸಂಗ್ರಹವಾಗಲಿದೆ’ ಎಂದು ತಿಳಿಸಿದರು.

‘ಭವನ ನಿರ್ಮಾಣ ಮಾಡಿದರೆ ಸಾಲದು ಪೀಠೋಪಕರಣ ಸೇರಿದಂತೆ ಮೂಲಸೌಕರ್ಯ ಒದಗಿಸಲು ಅಗತ್ಯ ನೆರವು ಕಲ್ಪಿಸಲಾಗುವುದು’ ಎಂದು ಹೇಳಿದರು.

‘ರಾಜ್ಯವು ಕೇಂದ್ರದ ಅನೇಕ ಯೋಜನೆಗಳ ಲಾಭ ಪಡೆದುಕೊಂಡಿಲ್ಲ. ಮಹಾರಾಷ್ಟ್ರಸರ್ಕಾರ ವಿಶ್ವಸಂಸ್ಥೆಯ ಕೃಷಿ ಅಭಿವೃದ್ಧಿ ಅಂತರರಾಷ್ಟ್ರೀಯ ನಿಧಿ(ಐಎಫ್‌ಎಡಿ)ಯಿಂದ ಪ್ರತಿ ವರ್ಷ ₹ 600 ಕೋಟಿ ಬಳಸಿಕೊಳ್ಳುತ್ತಿದೆ. ಕರ್ನಾಟಕ ಇವತ್ತಿಗೂ ಒಂದು ಪೈಸೆಯನ್ನೂ ಬಳಸಿಕೊಂಡಿಲ್ಲ. ಯೋಜನೆಗಳ ಲಾಭ ಪಡೆಯುವಲ್ಲಿ ಹಿಂದೆ ಉಳಿದಿದ್ದೇವೆ’ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಸ್ವಾಮಿರಾವ್ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ವಿಧಾನ ಪರಿಷತ್‌ ಸದಸ್ಯರಾದ ರಘುನಾಥ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಪತ್ರಕರ್ತರಾದ ಬಸವರಾಜ ಕಾಮಶೆಟ್ಟಿ, ನಾಗಶೆಟ್ಟಿ ಧರ್ಮಪುರ ಇದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ ಅಧ್ಯಕ್ಷತೆ ವಹಿಸಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಸ್ವಾಗತಿಸಿದರು. ಶ್ರೀದೇವಿ ಹೂಗಾರ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !