ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ವಿವಿಧ ಸಂಘಟನೆಗಳ ಶಾಂತಿಯುತ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಘೋಷಣೆ
Last Updated 27 ಸೆಪ್ಟೆಂಬರ್ 2021, 13:29 IST
ಅಕ್ಷರ ಗಾತ್ರ

ಬೀದರ್: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ವಿವಿಧ ಸಂಘಟನೆಗಳು ನಗರದ ಜಿಲ್ಲಾಧಿಕಾರಿ ಕಚೇರಿ, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದವು.

ಜಿಲ್ಲೆಯಲ್ಲಿ ರೈಲು, ಬಸ್‌, ಆಟೊ ಸಂಚಾರ ಸಹಜವಾಗಿತ್ತು. ಎಲ್ಲಡೆ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು. ಭಾಲ್ಕಿ, ಔರಾದ್, ಚಿಟಗುಪ್ಪ ಹಾಗೂ ಕಮಲನಗರದಲ್ಲಿ ಪ್ರತಿಭಟನೆಯೂ ನಡೆಯಲಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ), ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಕೃಷಿ ಕಾರ್ಮಿಕರ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ರಾಜ್ಯ ಆರ್.ಟಿ.ಐ. ಕಾರ್ಯಕರ್ತರ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸಿದರು.

ಕೃಷಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕು. ಆಸ್ತಿ ನಗದೀಕರಣ ಹೆಸರಿನಲ್ಲಿ ದೇಶದ ಆಸ್ತಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಜಿಎಸ್‌ಟಿ, ಕೃಷಿ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದ ಆಸ್ತಿ ಮಾರುವುದು ರಾಷ್ಟ್ರ ವಿರೋಧಿ ಕ್ರಮವಾಗಿದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿಗೆ 11ನೇ ತಿಂಗಳಾಗಿವೆ. ಕೃಷಿ ವಲಯವನ್ನು ಕಾರ್ಪೋರೇಟ್ ಕಂಪನಿಗಳಿಗೆ ಕೊಟ್ಟು ಕೃಷಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಹುನ್ನಾರ ನಡೆದಿವೆ. ಸ್ವಾಮಿನಾಥನ್ ಆಯೋಗದಂತೆ ಎಂ.ಎಸ್.ಪಿ. ನಿಗದಿಪಡಿಸಿಲ್ಲ. ರೈತರ ಹಿತ ಕಾಪಾಡುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಆರೋಪಿಸಿದರು.

ಮೂಲಸೌಕರ್ಯ ಹೆಸರಿನಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ವಿತರಣೆ, ಉತ್ಪಾದನೆ, ನೈಸರ್ಗಿಕ ಅನಿಲ ಸಾಗಣೆ ಮಾರ್ಗ, ದೂರಸಂಪರ್ಕ, ಗೋದಾಮು, ಗಣಿಗಾರಿಕೆ, ವಿಮಾನಯಾನ, ಬಂದರು, ಕ್ರಿಡಾಂಗಣ ಇತ್ಯಾದಿಗಳ ಆಸ್ತಿಯನ್ನು ಖಾಸಗಿಯವರ ಬಳಿ ಅಡವು ಇಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ. ಈಗಾಗಲೇ ದುಡಿಯುತ್ತಿರುವ ಅಂಗನವಾಡಿ ನೌಕರರು, ಬಿಸಿಯೂಟ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆ ಇಲ್ಲ. ಎಲ್ಲರಿಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡರಾದ ಬಾಬುರಾವ್ ಹೊನ್ನಾ, ನಜೀರ್ ಅಹ್ಮದ್, ಖಮರ್ ಪಟೇಲ್, ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣಯ್ಯ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವ ವಹಿಸಿದ್ದರು.

ವಿವಿಧ ಸಂಘಟನೆಗಳ ಪ್ರಮುಖರಾದ ವಿಠಲ ರೆಡ್ಡಿ, ಅಲಿ ಅಹಮ್ಮದ್ ಖಾನ್, ವಿನೋದ ರತ್ನಾಕರ್, ರಾಜಕುಮಾರ ಮೂಲಭಾರತಿ, ಉಮೇಶಕುಮಾರ ಸ್ವಾರಳ್ಳಿಕರ್, ಪಪ್ಪುರಾಜ ಮೇತ್ರೆ, ಅರುಣ ಪಟೇಲ್, ವಿಠ್ಠಲ ಮೇತ್ರೆ, ಗುರುಪಾದಯ್ಯ, ಶಾಂತಮ್ಮ ಹಜನಾಳ, ನಾಗಶೆಟ್ಟಿ ಲಂಜವಾಡ, ಬಸವರಾಜ ಅಷ್ಟೂರ್, ಶಫಾಯತ್, ಬಸವರಾಜ ಪಾಟೀಲ, ಬಾಬುರಾವ್ ವಾಡೇಕರ್, ಹೋಚಕನಳ್ಳಿ. ಪ್ರಭು ತಗಣಿಕರ್, ಘಾಳೆಪ್ಪ ಕಲಶೆಟ್ಟಿ, ಸುಬ್ಬಣ್ಣ ಕರಕನಳ್ಳಿ, ಪ್ರೇಮಕುಮಾರ ಕಾಂಬಳೆ, ಗೌತಮ ಭೋಸ್ಲೆ, ಮಲ್ಲಿಕಾರ್ಜುನ ಮೊಳಕೆರೆ, ಸಾಯಿ ಸಿಂಧೆ, ರಮೇಶ ಪಾಸ್ವಾನ, ಸಿರಾಜ್ ಪಟೇಲ್, ಧನರಾಜ ಕೊಳಾರ್, ರಾಹುಲ್ ಡಾಂಗೆ, ಭಗತ ಎಸ್. ಶಿಂಧೆ, ಸ್ವರೂಪಕುಮಾರ ಶಿಂಧೆ, ಸುನೀಲ ವರ್ಮಾ, ಅಂಬರೀಷ ಕುದುರೆ, ಇಮಾನುವೆಲ್ ಗಾದಗಿ ಪಾಲ್ಗೊಂಡಿದ್ದರು.

ಜನವಾಡ ರಸ್ತೆಯಲ್ಲಿ ಪ್ರತಿಭಟನೆ

ಜನವಾಡ: ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಹಾಗೂ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ನೇತೃತ್ವದಲ್ಲಿ ರೈತರು ಜನವಾಡ ಸಮೀಪ ಬೀದರ್ –ಔರಾದ್‌ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತರು ನವದೆಹಲಿಯಲ್ಲಿ 11 ತಿಂಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಸಭೆ ನಡೆಸಿ ಕಾರ್ಖಾನೆಗಳ ಅಧ್ಯಕ್ಷರಿಗೆ ಸೂಚನೆ ನೀಡಿದ್ದರೂ ಕಾರ್ಖಾನೆಗಳು ಬಾಕಿ ಹಣ ಪಾವತಿಸಲು ಸಿದ್ಧರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT