ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕಲಾ ತಂಡಗಳ ಮೆರುಗು

ಉಕ್ಕಿ ಹರಿದ ಕನ್ನಡಾಭಿಮಾನ, ಮುಗಿಲು ಮುಟ್ಟಿದ ಜಯಘೋಷ
Last Updated 8 ಫೆಬ್ರುವರಿ 2023, 13:00 IST
ಅಕ್ಷರ ಗಾತ್ರ

ಜನವಾಡ: ಎಲ್ಲೆಡೆ ರಾರಾಜಿಸಿದ ನಾಡ ಧ್ವಜಗಳು, ಧ್ವನಿ ವರ್ಧಕದಲ್ಲಿ ಮೊಳಗಿದ ಕನ್ನಡ ಗೀತೆಗಳು, ಉಕ್ಕಿ ಹರಿದ ಕನ್ನಡಾಭಿಮಾನ, ಮುಗಿಲು ಮುಟ್ಟಿದ ಜಯಘೋಷ...

ಬೀದರ್ ತಾಲ್ಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದ ಸಮ್ಮೇಳನಾಧ್ಯಕ್ಷ ಓಂಪ್ರಕಾಶ ದಡ್ಡೆ ಹಾಗೂ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳು ಇವು.
ಮೆರವಣಿಗೆಯಲ್ಲಿ ಸಾಂಸ್ಕೃತಿಕ ಲೋಕವೇ ತೆರೆದುಕೊಂಡಿತು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೋಲಾಟ, ಲೇಜಿಮ್ ನೋಡುಗರನ್ನು ಪುಳಕಿತಗೊಳಿಸಿದವು. ಕನ್ನಡ ತಾಯಿ ಭುವನೇಶ್ವರಿ ಹಾಗೂ ಮಹಾ ಪುರುಷರ ವೇಷ ಧರಿಸಿದ್ದ ಚಿಣ್ಣರು ಎಲ್ಲರ ಚಿತ್ತ ತಮ್ಮತ್ತ ಸೆಳೆದರು.
ಧ್ವನಿ ವರ್ಧಕದಲ್ಲಿ ಮೊಳಗಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ‘ಅವ್ವ ಕಣೋ ಕನ್ನಡ, ಅಪ್ಪ ಕಣೋ ಕನ್ನಡ’ ಮೊದಲಾದ ಕನ್ನಡ ಗೀತೆಗಳ ತಾಳಕ್ಕೆ ತಕ್ಕಂತೆ ಯುವಕರು ಕುಣಿದು ಕುಪ್ಪಳಿಸಿದರು. ಕನ್ನಡಾಭಿಮಾನಿಗಳ ಒತ್ತಾಸೆಗೆ ಮಣಿದು ಸಮ್ಮೇಳನಾಧ್ಯಕ್ಷರೂ ಹೆಜ್ಜೆ ಹಾಕಿದರು.

ಕೊರಳಲ್ಲಿ ಶಲ್ಯ ಧರಿಸಿದ್ದ ಕನ್ನಡಾಭಿಮಾನಿಗಳು ಕೈಯಲ್ಲಿ ನಾಡಧ್ವಜ ಹಿಡಿದುಕೊಂಡಿದ್ದರು. ಮೆರವಣಿಗೆ ಉದ್ದಕ್ಕೂ ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಹಾಕಿದರು.
ಮುಂಭಾಗದಲ್ಲಿ ಕನ್ನಡಾಂಬೆ ಭಾವಚಿತ್ರ ಕಟ್ಟಲಾಗಿದ್ದ ಒಂದು ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಓಂಪ್ರಕಾಶ ದಡ್ಡೆ ದಂಪತಿ, ಇನ್ನೊಂದು ಸಾರೋಟಿನಲ್ಲಿ ಬಾಬುರಾವ್ ಗುರೂಜಿ ಇದ್ದರು. ಅಲಂಕೃತ ಎಂಟು ಚಕ್ಕಡಿಗಳಲ್ಲಿ ಹಿಂದಿನ ಆರು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾದ ಎಸ್.ಎಂ. ಜನವಾಡಕರ್, ಎಂ.ಜಿ. ದೇಶಪಾಂಡೆ, ರಮೇಶ ಬಿರಾದಾರ, ಸಾಧನಾ ರಂಜೋಳಕರ್, ಹಣಮಂತರಾಯ ವಲ್ಲೇಪುರೆ, ರಮೇಶ ಮೂಲಗೆ, ಎರಡು ಯುವ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾದ ಡಾ. ಬಸವರಾಜ ಬಲ್ಲೂರ ಹಾಗೂ ನಿಜಲಿಂಗ ರಗಟೆ ಇದ್ದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಹಾಯ್ದು ಶರಣ ವೀರಭದ್ರಪ್ಪ ಅಪ್ಪ ಕಲ್ಯಾಣ ಮಂಟಪಕ್ಕೆ ತಲುಪಿ ಸಮಾರೋಪಗೊಂಡಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ ಅರಳಿ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಗೌರವ ಕಾರ್ಯದರ್ಶಿಗಳಾದ ಟಿ.ಎಂ. ಮಚ್ಚೆ, ಶಿವಕುಮಾರ ಕಟ್ಟೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಕ.ಸಾ.ಪ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ. ಬೀದರ್ ಉತ್ತರ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ, ಗೌರವ ಕಾರ್ಯದರ್ಶಿ ಸಂತೋಷಕುಮಾರ ಮಂಗಳೂರೆ, ಸಿದ್ಧಾರೂಢ ಭಾಲ್ಕೆ, ಅಶೋಕ ದಿಡಗೆ, ರಾಘವೇಂದ್ರ ಮುತ್ತಂಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT