ಭಾನುವಾರ, ಜೂನ್ 26, 2022
29 °C
ಯಂತ್ರದ ಮೌಲ್ಯ ₹4.92 ಕೋಟಿ: ಸಚಿವ ಪ್ರಭು ಚವಾಣ್

ಸ್ಕ್ಯಾನಿಂಗ್‌ ಯಂತ್ರ ಖರೀದಿಗೆ ಅನುಮತಿ: ಪ್ರಭು ಚವಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಹೈ ರೆಸ್ಯೂಲೇಷನ್‌ ಸ್ಕ್ಯಾನಿಂಗ್‌ ಮಷಿನ್‌ ಒಂದೇ ಇದೆ. ₹4.92 ಕೋಟಿ ಬೆಲೆಯ ಇನ್ನೊಂದು ಎಚ್‌ಆರ್‌ಟಿಸಿ (ಹೈ-ರೆಸ್ಯೂಲೇಷನ್‌ ಕಂಪ್ಯೂಟೆಡ್ ಟೊಮೊಗ್ರಫಿ) ಖರೀದಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದರು.

ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಂದು ಎಚ್‌ಆರ್‌ಟಿಸಿ ಯಂತ್ರವಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಒಂದೇ ಯಂತ್ರದಿಂದ ಸ್ಕ್ಯಾನಿಂಗ್‌ ಮಾಡಲು ಕಾಯಬೇಕಾದ ಸ್ಥಿತಿ ಇದೆ. ಹೀಗಾಗಿ ಇನ್ನೊಂದು ಎಚ್‌ಆರ್‌ಟಿಸಿ ಸ್ಕ್ಯಾನಿಂಗ್‌ ಮಷಿನ್‌ ಒದಗಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಈ ಮೊದಲು ಶಂಕಿತ, ಸೋಂಕಿತರಿಂದ ಪಡೆದ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರು ಅಥವಾ ಕಲಬುರ್ಗಿಗೆ ಕಳುಹಿಸಲಾಗುತ್ತಿತ್ತು. ಇದರಿಂದ ಫಲಿತಾಂಶ ವಿಳಂಬವಾಗಿ ಬರುತ್ತಿತ್ತು. ಇದರಿಂದ ಸೋಂಕು ಹರಡುವಿಕೆ ನಿಯಂತ್ರಣವೂ ಕಷ್ಟವಾಗುತ್ತಿತ್ತು. ಬ್ರಿಮ್ಸ್‌ನಲ್ಲಿ ವೈರಾಲಾಜಿ ಲ್ಯಾಬ್ ಸ್ಥಾಪಿಸಿ ಪರೀಕ್ಷೆ ಆರಂಭಿಸಿದ್ದೆವು. ಈ ಲ್ಯಾಬ್ ಆರಂಭಗೊಂಡು ಒಂದು ವರ್ಷವಾಗಿದೆ. ಒಂದು ವರ್ಷದಲ್ಲಿ ಒಟ್ಟು 4,36,395 ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಕೊಡಲಿದೆ. ರಾಜ್ಯ ಸರ್ಕಾರ ಕೋವಿಡ್ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಿ ಲಸಿಕೆ ಕೊಡುತ್ತಿದೆ. ಇದೀಗ ಅವರ ಅವಲಂಬಿತರಿಗೂ ಲಸಿಕಾಕರಣ ನಡೆಸಲು ಅನುಮತಿಸಲಾಗಿದೆ ಎಂದು ಸಚಿವರು ತಿಳಿಸಿದರು.

9 ಜನರಿಗೆ ಕೋವಿಡ್ ಸೋಂಕು:

ಜೂನ್ 9ರಂದು 3,000 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 9 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. 20 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

26 ಜನರಿಗೆ ಕಪ್ಪು ಶಿಲೀಂಧ್ರ:

ಜಿಲ್ಲೆಯಲ್ಲಿ ಈವರೆಗೆ 26 ಜನರಿಗೆ ಕಪ್ಪು ಶಿಲೀಂದ್ರ ಸೋಂಕು ತಗುಲಿದೆ. 15 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.