ಗುರುವಾರ , ಸೆಪ್ಟೆಂಬರ್ 16, 2021
29 °C

ಯಾದಗಿರಿಯಲ್ಲಿ ₹ 100 ಕೋಟಿ ವೆಚ್ಚದಲ್ಲಿ ಫಾರ್ಮಾ ಪಾರ್ಕ್: ಸಚಿವ ಭಗವಂತ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ ₹ 100 ಕೋಟಿ ವೆಚ್ಚದಲ್ಲಿ ಫಾರ್ಮಾ ಪಾರ್ಕ್‌ ನಿರ್ಮಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಜಮೀನು ಹಾಗೂ ಮೂಲಸೌಕರ್ಯ ಒದಗಿಸಬೇಕಾಗಲಿದೆ’ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

‘ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ರಾಜ್ಯದ ಮಂಗಳೂರು ಹಾಗೂ ಯಾದಗಿರಿ ಜಿಲ್ಲೆಯಿಂದ ಪ್ರಸ್ತಾವ ಬಂದಿದ್ದು, ಶೀಘ್ರ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು’ ಎಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರದಲ್ಲಿ ಅನಂತಕುಮಾರ ಸಚಿವರಾಗಿದ್ದ ಸಂದರ್ಭದಲ್ಲಿ ಬೀದರ್‌ನಲ್ಲಿ ಸಿಪೆಟ್‌ ಆರಂಭಿಸಲು ಉದ್ದೇಶಿಸಲಾಗಿತ್ತು. ಕಾಂಗ್ರೆಸ್‌ ಮುಖಂಡರ ಅಸಹಕಾರದಿಂದಾಗಿ ಅದು ಸಾಧ್ಯವಾಗಲಿಲ್ಲ. ಇನ್ನು ಬೀದರ್‌ನಲ್ಲಿ ಸಿಪೆಟ್‌ ಆರಂಭಿಸಲಾಗುವುದು’ ಎಂದು ಹೇಳಿದರು.

ಜಲಶಕ್ತಿಯ ಬಳಕೆ: ‘ಜಲಶಕ್ತಿಯ ಬಳಕೆಗೆ ಒತ್ತು ಕೊಡಲಾಗುವುದು. ಪ್ರಸ್ತುತ 2,3 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನ ದೇಶದಲ್ಲಿದೆ. ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಿ ವಿದ್ಯುತ್‌ ಉತ್ಪಾದನೆ ಮಾಡಿದರೆ ವಿದ್ಯುತ್ತಿನ ದರ ಕಡಿಮೆಯಾಗಲಿದೆ. ಈ ದಿಸೆಯಲ್ಲಿ ಪ್ರಯತ್ನ ಮುಂದುವರಿದಿದೆ’ ಎಂದು ತಿಳಿಸಿದರು.

ಬಯೊಮಾಸ್‌ಗೆ ಶೇ 30ರಷ್ಟು ಅನುದಾನ ಕೊಡಲಾಗುವುದು. ಎಥೆನಾಲ್ ಉತ್ಪಾದನೆಗೂ ಉತ್ತೇಜನ ನೀಡಲಾಗುವುದು. ಗೋಬರ್ ಗ್ಯಾಸ್‌ನಿಂದ ಅಡುಗೆ ಅನಿಲ ಹಾಗೂ ವಿದ್ಯುತ್ ಉತ್ಪಾದನೆಗೆ ವಿಪುಲ ಅವಕಾಶ ಇರುವುದರಿಂದ ತಂತ್ರಜ್ಞಾನ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಬಂದ್‌ ಆಗಿರುವ ನಾಲ್ಕು ರಸಗೊಬ್ಬರ ಕಾರ್ಖಾನೆಗಳನ್ನು ಆರಂಭಿಸಲು ಒತ್ತುಕೊಡಲಾಗಿದೆ. ಕಾರ್ಖಾನೆಗಳು 12.70 ಲಕ್ಷ ಗೊಬ್ಬರ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ. ನ್ಯಾನೊ ತಂತ್ರಜ್ಞಾನದ ಮೂಲಕ ಡಿಎಪಿ ಉತ್ಪಾದನೆಗೆ ಪ್ರಾಮುಖ್ಯ ನೀಡಲಾಗಿದೆ. ಇನ್ನು ಸಾವಯವ ಗೊಬ್ಬರ ಬಳಕೆಗೆ ಹೆಚ್ಚು ಒತ್ತು ಕೊಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಗೊಬ್ಬರ ಕೊರತೆ ಇಲ್ಲ. ವೈಬ್‌ಸೈಟ್‌ uvark.nic.in ನಲ್ಲಿ ಪ್ರತಿಯೊಬ್ಬರೂ ಗೊಬ್ಬರ ಹಂಚಿಕೆ ಮಾಹಿತಿ ವೀಕ್ಷಿಸಬಹುದಾಗಿದೆ. ಇದರಲ್ಲಿ ನಿತ್ಯ ಅಂಕಿಅಂಶ ಅಪ್‌ಡೇಟ್‌ ಮಾಡುತ್ತಿರುವ ಕಾರಣ ರೈತರಿಗೆ ಗೊಬ್ಬರ ಪೂರೈಕೆಯ ಸ್ಥಿತಿಗತಿ ತಿಳಿಯಲಿದೆ’ ಎಂದು ಹೇಳಿದರು.

‘ದೇಶದಲ್ಲಿ 8,001 ಜನೌಷಧಿ ಮಾರಾಟ ಕೇಂದ್ರ ಹಾಗೂ 1,400 ಔಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳು ಜನೌಷಧಿ ಕೇಂದ್ರಗಳನ್ನು ತೆರೆಯುತ್ತಿಲ್ಲ. ಹೀಗಾಗಿ ನಮ್ಮ ಇಲಾಖೆಯಿಂದಲೇ ನೇರವಾಗಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಅಭಿವೃದ್ಧಿಗೆ ಸಹಕಾರ: ‘ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆಗೆ ತರುವ ದಿಸೆಯಲ್ಲಿ ಬೀದರ್‌ ಜಿಲ್ಲೆಯ ಶಾಸಕರು ಸಮಾಲೋಚನೆ ನಡೆಸಿ ಪ್ರಸ್ತಾವಗಳನ್ನು ಸಲ್ಲಿಸಬೇಕು. ಕೇಂದ್ರದಲ್ಲಿ ಅವುಗಳಿಗೆ ಮಂಜೂರಾತಿ ಕೊಡಿಸುವ ಜವಾಬ್ದಾರಿ ನನ್ನದು’ ಎಂದು ಹೇಳಿದರು.

‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ರಾಜಕಾರಣಿಗಳು ಪರಸ್ಪರ ಅಸಹಕಾರ ತೋರಿದರೆ ಜನ ಸಾಮಾನ್ಯರು ಕಷ್ಟಕ್ಕೆ ಒಳಗಾಗುತ್ತಾರೆ’ ಎಂದರು.

ಮಾಧ್ಯಮ ಗೋಷ್ಠಿಯಲ್ಲಿ ಈಶ್ವರಸಿಂಗ್‌ ಠಾಕೂರ್, ಡಿ.ಕೆ.ಸಿದ್ರಾಮ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.