ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ತಜ್ಞರ ಟಿಪ್ಸ್

ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್‌.ಸಿ.ಚಂದ್ರಶೇಖರ ಮಾರ್ಗದರ್ಶನ
Last Updated 29 ಜನವರಿ 2020, 9:28 IST
ಅಕ್ಷರ ಗಾತ್ರ

ಬೀದರ್‌: ಪ್ರಜಾವಾಣಿಯ ‘ಫೋನ್‌–ಇನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲೆಯ ವಿವಿಧೆಡೆಯಿಂದ ಕರೆಗಳ ಸುರಿಮಳೆಯೇ ಆಯಿತು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕರೆ ಮಾಡಿ, ಪರೀಕ್ಷಾ ಭಯ ಹಾಗೂ ಗೊಂದಲ ನಿವಾರಿಸಿಕೊಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್‌.ಸಿ.ಚಂದ್ರಶೇಖರ ಅವರು ಎರಡು ತಾಸು ಜಿಲ್ಲೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರ ನಿರಂತರ ಫೋನ್‌ ಕರೆಗಳಿಗೆ ಕಿವಿಗೊಟ್ಟರು. ಇವರ ಜತೆಗೆ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ಗಣಿತ ವಿಷಯ ಪರಿವೀಕ್ಷಕ ಶಶಿಕಾಂತ ಜೋಶಿ, ವಿಜ್ಞಾನ ವಿಷಯ ಪರಿವೀಕ್ಷಕ ಸೂರ್ಯಕಾಂತ ಬೇಲೂರೆ, ಇಂಗ್ಲಿಷ್ ವಿಷಯ ಪರಿವೀಕ್ಷಕ ಶಂಕರಯ್ಯ ಹಿರೇಮಠ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು.

ಬಹುತೇಕ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್‌ ವ್ಯಾಕರಣಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನೇ ಕೇಳಿದರು.

ವಿದ್ಯಾರ್ಥಿಗಳು ಶುದ್ಧ ಹಾಗೂ ಅಂದವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಒಂದೇ ವಿಷಯವನ್ನು ನಿರಂತರವಾಗಿ ಓದುವ ಬದಲು ಕಠಿಣ ವಿಷಯಗಳನ್ನು ಆದ್ಯತೆ ಮೇಲೆ ಬೆಳಗಿನ ವೇಳೆಯಲ್ಲಿ ಓದಬೇಕು. ಓದು ಮುಗಿಸಿದ ಮೇಲೆ ಮತ್ತೆ ಬರೆಯಬೇಕು. ಇದರಿಂದ ವಿಷಯ ಹೆಚ್ಚು ಸ್ಮರಣೆಯಲ್ಲಿರುತ್ತದೆ. ಅಷ್ಟೇ ಅಲ್ಲ ಬರಹವೂ ಶುದ್ಧವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನನ ಮಾಡಿದರು.

ನಿತ್ಯ ಒಂದೇ ವಿಷಯವನ್ನು ಓದುವುದು ಬೇಡ. ಕ್ಲಿಷ್ಟಕರ್‌ ವಿಷಯವನ್ನು ಬೆಳಗಿನ ಜಾವ ಓದುವುದು ಒಳ್ಳೆಯದು. ನಿದ್ದೆಗೆಟ್ಟು ಓದುವುದರಿಂದ ಯಾವ ವಿಷಯವೂ ಸ್ಮರಣೆಯಲ್ಲಿ ಉಳಿಯದು. ನಿತ್ಯ ಕನಿಷ್ಠ 7 ತಾಸು ನಿದ್ದೆ ಮಾಡಬೇಕು. ವಿಷಯಗಳ ಕುರಿತು ಗೊಂದಲಗಳಿದ್ದರೆ ಶಿಕ್ಷಕರೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬೇಕು. ಎಷ್ಟು ಅಂಕಗಳಿಗೆ ಎಷ್ಟು ವಾಕ್ಯಗಳಲ್ಲಿ ಉತ್ತರಿಸಬೇಕು ಎನ್ನುವುದನ್ನು ಮೊದಲೇ ಅರಿತುಕೊಂಡರೆ ಸಮಯ ಪರಿಪಾಲನೆ ಮಾಡಿ ನಿಗದಿತ ಸಮಯದೊಳಗೆ ಪ್ರಶ್ನೆಪತ್ರಿಕೆ ಬಿಡಿಸಲು ಸುಲಭವಾಗುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಪ್ರಶ್ನೆ ಪತ್ರಿಕೆಯಲ್ಲಿ ಈ ಬಾರಿಯ ಬದಲಾವಣೆ, ಹೆಚ್ಚು ಅಂಕ ಗಳಿಸಲು ಯಾವ ವಿಧಾನದಲ್ಲಿ ಅಭ್ಯಾಸ ಮಾಡಬೇಕು. ಸರಣಿ ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭ ಮೊದಲಾದ ಪ್ರಶ್ನೆಗಳಿಗೆ ವಿಷಯ ತಜ್ಞರು ಮಾರ್ಗದರ್ಶನ ಮಾಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡುವೆ ನಡೆದ ಆಯ್ದ ಪ್ರಶ್ನೋತ್ತರಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಶಿಕ್ಷಕರ ಕೊರತೆ ನೀಗಿಸಿ: ಜಿಲ್ಲೆಯ ಅನೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್ ಸೇರಿ ವಿವಿಧ ವಿಷಯಗಳ ಶಿಕ್ಷಕರ ಕೊರತೆ ಇದೆ. ಒಬ್ಬರು ಶಿಕ್ಷಕರು ಎರಡೆರಡು ವಿಷಯಗಳನ್ನು ಬೋಧಿಸುವ ಪರಿಸ್ಥಿತಿ ಇದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಕೊನೆಯ ಸ್ಥಾನ ಪಡೆಯುತ್ತಿರುವುದಕ್ಕೆ ಶಿಕ್ಷಕರ ಕೊರತೆ ಕೂಡ ಪ್ರಮುಖ ಕಾರಣವಾಗಿದೆ....

ಭಾಲ್ಕಿಯ ಗಣೇಶ ಪಾಟೀಲ, ಔರಾದ್‌ನ ಅನಿಲ ಜಿರೋಬೆ, ಭೋಸ್ಗಾದ ಗಣೇಶ, ಬೀದರ್‌ನ ಅರವಿಂದಕುಲಕರ್ಣಿ ಹಾಗೂ ಸಂಗಮೇಶ್ವರ ಜ್ಯಾಂತೆ ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆ ಹಾಗೂ ಅದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದ ಮೇಲೆ ಉಂಟಾಗುತ್ತಿರುವ ಪರಿಣಾಮದ ಮೇಲೆ ಬೆಳಕು ಚೆಲ್ಲಿದರು. ಕೆಲ ಕಡೆ ನಾಲ್ಕು ಮಕ್ಕಳಿಗೆ ಇಬ್ಬರು-ಮೂವರು ಶಿಕ್ಷಕರಿದ್ದರೆ, ಇನ್ನು ಕೆಲಕಡೆ ನೂರು ಮಕ್ಕಳಿದ್ದರೂ ಇಬ್ಬರೇ ಶಿಕ್ಷಕರು ಇದ್ದಾರೆ ಎಂದು ಗಮನ ಸೆಳೆದರು.

‘ಈಗಾಗಲೇ ಪ್ರಾಥಮಿಕ ಶಾಲೆಗಳಲ್ಲಿ 330 ಹಾಗೂ ಪ್ರೌಢಶಾಲೆಗಳಲ್ಲಿ 134 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಕಾಯಂ ಶಿಕ್ಷಕರ ನೇಮಕ ಆಗಲಿದೆ. ಶಿಕ್ಷಕರ ಕೊರತೆ ಇರುವ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ವೃದ್ಧಿಸಲು ವಿಶೇಷ ತರಗತಿ, ತೀವ್ರ ನಿಗಾ ಕಲಿಕಾ ಘಟಕ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ’ ಎಂದು ಡಿಡಿಪಿಐ ಚಂದ್ರಶೇಖರ ತಿಳಿಸಿದರು.

* ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದು ಹೇಗೆ?
ಕಠಿಣವಾದ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳನ್ನು ಸರಳವಾಗಿಸಿಕೊಳ್ಳುವುದು ಹೇಗೆ, ಓದಿದ್ದನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಪರೀಕ್ಷೆಯಲ್ಲಿ ಪ್ರಶ್ನೆ ಸಂಖ್ಯೆ 1ರಿಂದಲೇ ಉತ್ತರ ಬರೆಯುವುದು ಶುರು ಮಾಡಬೇಕೇ, ಅಧಿಕ ಅಂಕ ಗಳಿಸಲು ಏನು ಮಾಡಬೇಕು...

ಔರಾದ್‌ನ ಅಮರೇಶ್ವರ ಶಾಲೆಯ ಪ್ರಿಯಾ ಸಂಜುಕುಮಾರ, ಹಿರೇನಾಗಾವದ ಶ್ವೇತಾ, ಕಾವೇರಿ, ಕಲ್ಲೂರಿನ ಕುತ್ಬುದ್ದಿನ್, ಜೋಳದಾಪಕಾದ ವೈಷ್ಣವಿ, ಕೃಷ್ಣ, ಬೀದರ್‌ನ ಜೀಜಾಮಾತಾ ಪ್ರೌಢಶಾಲೆಯ ವೈಷ್ಣವಿ ಹಾಗೂ ಲಕ್ಷ್ಮಿ ವೆಂಕಟೇಶ್ವರ ಸ್ಕೂಲ್‌ನ ನಾಗೇಶ ಅವರಿಂದ ಕೇಳಿ ಬಂದ ಪ್ರಶ್ನೆಗಳು ಇವು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಸಿ.ಚಂದ್ರಶೇಖರ ಪ್ರತಿಕ್ರಿಯಿಸಿ, ‘ವಿದ್ಯಾರ್ಥಿಗಳು ಇಷ್ಟಪಟ್ಟು ಓದಿದರೆ ವಿಷಯ ತಾನಾಗಿಯೇ ಸರಳವಾಗುತ್ತದೆ. ಕಠಿಣವೆನಿಸುವ ವಿಷಯದಲ್ಲಿನ ಅಧ್ಯಾಯಗಳಿಗೆ ಹೆಚ್ಚು ಒತ್ತು ಕೊಡಬೇಕು. ಓದಿದ್ದನ್ನು ಅಕ್ಷರ ರೂಪಕ್ಕೆ ಇಳಿಸುವುದರಿಂದ ವಿಷಯ ಬಹುಕಾಲ ನೆನಪಿನಲ್ಲಿ ಇಡಬಹುದು’ ಎಂದರು.

‘ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದರೆ ಆಯಾ ಪ್ರಶ್ನೆಗೆ ಎಷ್ಟು ವಾಕ್ಯಗಳಲ್ಲಿ ಉತ್ತರಿಸಬೇಕೋ ಅಷ್ಟೇ ವಾಕ್ಯಗಳಲ್ಲಿ ಉತ್ತರಿಸಬೇಕು. ಅದಕ್ಕೂ ಹೆಚ್ಚು ವಾಕ್ಯಗಳಲ್ಲಿ ಉತ್ತರಿಸಿದರೆ ಹೆಚ್ಚು ಅಂಕಗಳೇನೂ ಸಿಗುವುದಿಲ್ಲ. ಪರೀಕ್ಷೆಯಲ್ಲಿ ಪ್ರಶ್ನೆ ಸಂಖ್ಯೆ 1ರಿಂದಲೇ ಉತ್ತರಿಸುವುದನ್ನು ಶುರು ಮಾಡಬೇಕಿಲ್ಲ. ಖಚಿತ ಉತ್ತರ ಬರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಬೇಕು. ಹೀಗೆ ಮಾಡುವುದರಿಂದ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಲು ಸಾಧ್ಯವಾಗುತ್ತದೆ’ ಎಂದರು.

* ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಳ ಪ್ರಯತ್ನ ಎಂಟನೇ ತರಗತಿಯಿಂದಲೇ ಆರಂಭವಾಗಬೇಕು ಎಂದು ಆಣದೂರಿನ ಗ್ರಾಮ ವಿಕಾಸ ಟ್ರಸ್ಟ್ ಅಧ್ಯಕ್ಷ ಬಸವರಾಜ ಬಶೆಟ್ಟಿ ಸಲಹೆ ನೀಡಿದರು.

ಇದಕ್ಕೆ ಸ್ಪಂದಿಸಿದ ಡಿಡಿಪಿಐ ಚಂದ್ರಶೇಖರ ಅವರು, ‘ಈ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಸರ್ವ ಪ್ರಯತ್ನ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

* ‘ಜಿಲ್ಲೆಯಲ್ಲಿ ಇರುವ ಎಲ್ಲ ಸರ್ಕಾರಿ ಶಾಲೆಗಳಿಗೂ ಸುತ್ತುಗೋಡೆ ನಿರ್ಮಿಸಬೇಕು ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಉಪ ಹಣಕಾಸು ನಿಯಂತ್ರಣಾಧಿಕಾರಿ ವೀರಭದ್ರಪ್ಪ ಉಪ್ಪಿನ್ ಬೇಡಿಕೆ ಮಂಡಿಸಿದರು.

‘ಶಾಲೆ ಹೆಸರಲ್ಲಿ ಜಮೀನು ಇರುವ ಕಡೆಗಳಲ್ಲಿ ಸುತ್ತುಗೋಡೆ ನಿರ್ಮಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಡಿಡಿಪಿಐ ತಿಳಿಸಿದರು.

* ‘ಬೀದರ್ ತಾಲ್ಲೂಕು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದೆ. ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಹೀಗಾಗಿ ಬೀದರ್ ಹಾಗೂ ಬೀದರ್ ದಕ್ಷಿಣಕ್ಕೆ ಪ್ರತ್ಯೇಕ ಬಿಇಒ ಕಚೇರಿ ಮಾಡಬೇಕು’ ಎಂದು ಬೀದರ್‌ನ ರವಿರಾಜ ಶಾಸ್ತ್ರಿ ಮನವಿ ಮಾಡಿದರು.

‘ಇದು, ಸರ್ಕಾರದ ನಿಯಮಕ್ಕೆ ಸಂಬಂಧಿಸಿದ ವಿಷಯ. ಈ ಕುರಿತು ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಚಂದ್ರಶೇಖರ ಪ್ರತಿಕ್ರಿಯಿಸಿದರು.

* ದಿಲೀಪ ಹೊಸಮನಿ ಅವರು ‘ಜಿಲ್ಲೆಯಲ್ಲಿ ಅನೇಕ ಅನಧಿಕೃತ ಶಾಲೆಗಳು ನಡೆಯುತ್ತಿವೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಯಾವುದೇ ಶಾಲೆ ಅನಧಿಕೃತವಾಗಿ ನಡೆದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಡಿಪಿಐ ಹೇಳಿದರು.

ಕನ್ನಡ ಪ್ರಥಮ ಭಾಷಾ ವಿಷಯ ಪರಿವೀಕ್ಷಕ ಶಿವಲಿಂಗ ಹೇಡೆ, ಇಂಗ್ಲಿಷ್ ವಿಷಯ ಪರಿವೀಕ್ಷಕ ಧನಂಜಯ ಕುಲಕರ್ಣಿ, ದ್ವಿತೀಯ ಭಾಷೆ ಕನ್ನಡ ವಿಷಯ ಪರಿವೀಕ್ಷಕ ಶಂಕರಯ್ಯ ಹಿರೇಮಠ, ಹಿಂದಿ ವಿಷಯ ಪರಿವೀಕ್ಷಕ ಕಿಶೋರ ರೂಪನೂರೆ ಹಾಗೂ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಬಲಭೀಮ ಕುಲಕರ್ಣಿ ಅವರೂ ಸಹ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT