ಶನಿವಾರ, ಮೇ 21, 2022
23 °C

ಬೀದರ್: ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ; ಜಿಲ್ಲಾಧಿಕಾರಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ ಕಾರ್ಯಕ್ರಮಕ್ಕೆ ಇಲ್ಲಿಯ ಬ್ರಿಮ್ಸ್‍ನಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಚಾಲನೆ ನೀಡಿದರು.

ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಡಿ ಒಂದು ಹೊಸ ಲಸಿಕೆ ಪಿಸಿವಿಯನ್ನು ಪರಿಚಯಿಸಲಾಗುತ್ತಿದೆ. ಇದು, ನ್ಯೂಮೊಕಾಕಸ್ ಎಂಬ ಬ್ಯಾಕ್ಟೇರಿಯಾದಿಂದ ಐದು ವರ್ಷದ ಒಳಗಿನ ಮಕ್ಕಳಲ್ಲಿ ಉಂಟಾಗುವ ನ್ಯೂಮೊನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುತ್ತದೆ ಎಂದು ಹೇಳಿದರು.

ನ್ಯೂಮೊಕಾಕಲ್ ಕಾಯಿಲೆಯು ಗಂಭೀರ ಸ್ವರೂಪ ಪಡೆಯಬಹುದು. ಕುಟುಂಬದ ಮೇಲೆ ಆರ್ಥಿಕ ಹೊರೆ ಉಂಟು ಮಾಡಬಹುದು. ಹೀಗಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಕೊಡಲಾಗುವುದು ಎಂದು ತಿಳಿಸಿದರು.

ಡಬ್ಲ್ಯೂ.ಎಚ್.ಓದ ಎಸ್.ಎಂ.ಓ. ಡಾ.ಅನಿಲಕುಮಾರ ತಾಳಿಕೋಟೆ ಮಾತನಾಡಿ, ಪಿ.ಸಿ.ವಿ ಲಸಿಕೆ ನೀಡುವುದರಿಂದ ಮಕ್ಕಳನ್ನು ನ್ಯೂಮೊನಿಯಾದಿಂದ ರಕ್ಷಿಸಬಹುದು. ಹುಟ್ಟಿದ ಮೊದಲ ವರ್ಷದಲ್ಲಿ ಪಿ.ಸಿ.ವಿಯ ಎರಡು ಪ್ರಾಥಮಿಕ ಡೋಸ್ ಹಾಗೂ ಒಂದು ಬೂಸ್ಟರ್ ಡೋಸ್ ನೀಡಬಹುದು. ಒಂದು ವರ್ಷ ಮೀರಿದ್ದಲ್ಲಿ ಹುಟ್ಟಿದ ಮೊದಲ ವರ್ಷದೊಳಗೆ ಮಗು ಕನಿಷ್ಠ ಒಂದು ಡೋಸ್ ಪಿ.ಸಿ.ವಿಯನ್ನು ಪಡೆದಿದ್ದರೆ ಮುಂದಿನ ಡೋಸ್‍ಗಳನ್ನು ನೀಡಬಹುದು ಎಂದು ಹೇಳಿದರು.

ಕಾರ್ಯಕ್ರಮ ಅಧಿಕಾರಿ ಡಾ.ರಾಜಶೇಖರ ಪಾಟೀಲ ಮಾತನಾಡಿ, ಪಿ.ಸಿ.ವಿ ಲಸಿಕೆ ಸುರಕ್ಷಿತವಾಗಿದೆ. ಇತರೆ ಲಸಿಕೆಯಂತೆ ಮಗುವಿಗೆ ಪಿ.ಸಿ.ವಿ ಲಸಿಕೆ ನೀಡಿದ ನಂತರ ಸೌಮ್ಯವಾದ ಜ್ವರ ಬರಬಹುದು ಅಥವಾ ಚುಚ್ಚುಮದ್ದು ಕೊಟ್ಟ ಸ್ಥಳ ಕೆಂಪಾಗಬಹುದು. ಈ ಬಗ್ಗೆ ಆತಂಕ ಬೇಡ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗಿ, ಎಚ್.ಓ.ಡಿ ಮತ್ತು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಶಾಂತಲಾ ಕೌಜಲಗಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಬಿರಾದಾರ, ಲಸಿಕಾ ಮೇಲ್ವಿಚಾರಕ ಲೋಕೇಶ, ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೇಮಳಗಿ ಅಶೋಕ ಇದ್ದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ನಿರೂಪಿಸಿದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶ್ರಾವಣ ಜಾಧವ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.