ಮುರ್ಕಿ ಘಟನೆ ಸಮರ್ಥವಾಗಿ ನಿಭಾಯಿಸಿದ ಪೊಲೀಸರು

7
ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಹೇಳಿಕೆ

ಮುರ್ಕಿ ಘಟನೆ ಸಮರ್ಥವಾಗಿ ನಿಭಾಯಿಸಿದ ಪೊಲೀಸರು

Published:
Updated:
Deccan Herald

ಬೀದರ್: ‘ಮುರ್ಕಿ ಘಟನೆಯನ್ನು ಜಿಲ್ಲೆಯ ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ. ಪೊಲೀಸರು ಸಕಾಲಕ್ಕೆ ಸ್ಥಳಕ್ಕೆ ತೆರಳದಿದ್ದರೆ ಇನ್ನೂ ಹೆಚ್ಚಿನ  ಅನಾಹುತ ನಡೆದು ಹೋಗುತ್ತಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಹೇಳಿದರು.

ಬೆಂಗಳೂರಿಗೆ ಡಿಸಿಪಿಯಾಗಿ ವರ್ಗವಾದ ಪ್ರಯುಕ್ತ ಇಲ್ಲಿಯ ಜಿಲ್ಲಾ ಪೊಲೀಸ್ ಮುಖ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗುಂಪು ಹಲ್ಲೆಯ ಸಂದರ್ಭದಲ್ಲಿ ಪೊಲೀಸರು ಇಬ್ಬರ ಜೀವ ರಕ್ಷಣೆ ಮಾಡಿದ್ದಾರೆ. ಪೊಲೀಸ್ ಕಾರ್ಯನಿರ್ವಹಣೆಯ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳೂ ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದು ತಿಳಿಸಿದರು.

‘ಅಹಿತಕರ ಘಟನೆಗಳು ನಡೆದಾಗ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟರೆ ಶೇ 80 ರಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಸದಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ನನ್ನ ವೃತ್ತಿ ಜೀವನದಲ್ಲಿ ಬಹಳಷ್ಟು ಸಂತೋಷ ತಂದ ಸ್ಥಳಗಳಲ್ಲಿ ಬೀದರ್ ಕೂಡ ಒಂದಾಗಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲಾರೆ. ಇಲಾಖೆಯ ಸಿಬ್ಬಂದಿಯನ್ನು ಸಮಾನವಾಗಿ ನೋಡಿದ್ದೇನೆ. ಠಾಣೆಗಳ ಶುಚಿತ್ವಕ್ಕೆ ಒತ್ತು ಕೊಟ್ಟಿದ್ದೇನೆ. ಎಲ್ಲ ಠಾಣೆಗಳಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಂಡಿದ್ದೇನೆ’ ಎಂದು ಅವರು ಸೇವಾ ಅವಧಿಯ ದಿನಗಳನ್ನು ಸ್ಮರಿಸಿದರು.

‘ಪೊಲೀಸ್‌ ಇಲಾಖೆಯಲ್ಲಿ ಅನುದಾನ ಕಡಿಮೆ ಇರುತ್ತದೆ. ಜನ ಪ್ರತಿನಿಧಿಗಳು ಹಾಗೂ ಬೇರೆ ಬೇರೆ ಇಲಾಖೆಗಳ ಮೂಲಕ ಅನುದಾನ ತಂದು ಕೆಲಸ ಮಾಡಿಸಿದ್ದೇನೆ. ಕೆಲಸ ಮಾಡುವ ಮನಸ್ಸಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ನಾನೇ ಉತ್ತಮ ಉದಾಹರಣೆ’ ಎಂದರು.

‘ಇಲ್ಲಿ ಅನೇಕ ಐತಿಹಾಸಿಕ ತಾಣಗಳಿರುವ ಕಾರಣ ಬೀದರ್‌ ಜಿಲ್ಲೆ ಇನ್ನುಳಿದ ಜಿಲ್ಲೆಗಳಿಗಿಂತ ಭಿನ್ನವಾಗಿದೆ. ಇಂತಹ ವಿಷಯವನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇಂತಹ ಐತಿಹಾಸಿಕ ಊರಿನಲ್ಲಿ ಸೇವೆ ಮಾಡಿದ್ದು ಖುಷಿ ತಂದಿದೆ’ ಎಂದು ಹೇಳಿದರು.

‘ಪೊಲೀಸ್ ಇಲಾಖೆಯಲ್ಲಿ ಜನತೆಗೆ ನಂಬಿಕೆ ಬರುವ ಹಾಗೂ ಪೊಲೀಸ್ ಸಿಬ್ಬಂದಿಯಲ್ಲಿ ಮನೋಸ್ಥೈರ್ಯ ತುಂಬುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಅಂದುಕೊಂಡ ಕೆಲಸಗಳನ್ನು ಬಹುತೇಕ ಮಾಡಿದ ತೃಪ್ತಿ ನನಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಆರ್.ಸೆಲ್ವಮಣಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಶಿಕಾಂತ ಮಳ್ಳಿ, ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಇದ್ದರು.

ಡಿ.ದೇವರಾಜ್‌ ಅವರಿಗೆ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಲು ಹೊದಿಸಿ ವಿಘ್ನೇಶ್ವರನ ಪ್ರತಿಮೆ ನೀಡಿ ಸನ್ಮಾನಿಸಿದರು.
ರೈತ ಸಂಘ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳ ಮುಖ್ಯಸ್ಥರು ಡಿ.ದೇವರಾಜ್‌ ಅವರಿಗೆ ಪುಷ್ಪಗುಚ್ಛ ನೀಡಿ ಬೀಳ್ಕೊಟ್ಟರು.

ನವಲಿಂಗ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !