ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕೆಗೆ ಬಸವಳಿದ ಕಾರ್ಯಕರ್ತರು; ಚುನಾವಣೆ ಪ್ರಚಾರದ ಮೇಲೆ ಸೂರ್ಯದೇವನ ಎಫೆಕ್ಟ್

Last Updated 17 ಏಪ್ರಿಲ್ 2019, 14:41 IST
ಅಕ್ಷರ ಗಾತ್ರ

ಬೀದರ್‌: ಲೋಕಸಭಾ ಚುನಾವಣೆಗೆ ಕೇವಲ ಐದು ದಿನಗಳು ಬಾಕಿ ಉಳಿದಿವೆ. ಬೀದರ್ ಕ್ಷೇತ್ರದಲ್ಲಿ ನೆತ್ತಿ ಸುಡುವ ಬಿಸಿಲಿನಲ್ಲಿ ಪ್ರಚಾರಕ್ಕೆ ಇಳಿದಿರುವ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಬಿಸಿಲಿಗೆ ಬಸವಳಿಯುತ್ತಿದ್ದಾರೆ.

ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಬಿಸಿಲಿನ ತಾಪ ಲೆಕ್ಕಿಸದೇ ಮತಬೇಟೆಗಾಗಿ ಮನೆ ಮನೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ನೂರಾರು ಹಳ್ಳಿಗಳನ್ನು ಸುತ್ತಾಡಿದ್ದಾರೆ. ಹಳ್ಳಿ, ಗಲ್ಲಿ, ಸಂದಿ-ಗೊಂದಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಹಳ್ಳಿಗಳಲ್ಲಿ ಮಣ್ಣಿನ ಮಡಿಕೆಗಳಲ್ಲಿ ಇಡಲಾದ ನೀರು ಕೇಳಿ ಪಡೆಯುತ್ತಿದ್ದಾರೆ. ಪಟ್ಟಣಗಳಲ್ಲಿ ವಿವಿಧ ಬ್ರಾಂಡೆಡ್‌ ಕಂಪನಿಗಳ ನೀರಿನ ಬಾಟ್ಲಿಗಳನ್ನು ಹಿಡಿದುಕೊಂಡು ಪ್ರಚಾರದಲ್ಲಿ ತೊಡಗಿದ್ದರೂ ನೀರು ದಣಿವಾರಿಸಿಕೊಳ್ಳಲು ಸಾಲುತ್ತಿಲ್ಲ.

ವಿಪರೀತ ತಾಪಮಾನದಿಂದ ಬೆಳಿಗ್ಗೆ 11ರ ವೇಳೆಗೆ ಸುಸ್ತು ಹೊಡೆಯುತ್ತಿದ್ದಾರೆ. ಬಿಸಿಲಿಗೆ ಬೆದರಿ ಮಧ್ಯಾಹ್ನದ ಸಮಯದಲ್ಲಿ ರಸ್ತೆಗಿಳಿಯಲು ಹಿಂಜರಿಯುತ್ತಿದ್ದಾರೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 1ರವರೆಗೆ ಮತಯಾಚಿಸಿ ಮಧ್ಯಾಹ್ನ 2 ತಾಸು ವಿಶ್ರಾಂತಿ ಪಡೆದು ಸಂಜೆ ಮತ್ತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ರಾಜಕೀಯ ಪಕ್ಷಗಳು ಮಧ್ಯಾಹ್ನದ ವೇಳೆ ಸಭೆ, ಸಮಾರಂಭಗಳನ್ನು ಆಯೋಜಿಸಿದರೂ ಜನ ನಿರೀಕ್ಷಿತ ಪ್ರಮಾಣದಲ್ಲಿ ಸೇರುತ್ತಿಲ್ಲ. ಬಹಿರಂಗ ಸಭೆಗಳತ್ತ ಜನರು ಬಂದರೂ ನೆರಳಲ್ಲಿ ಕುಳಿತುಕೊಳ್ಳಲು ಹಾತೊರೆಯುತ್ತಾರೆ. ಸಮಯದ ಅಭಾವ ಇರುವ ಕಾರಣ ಕಾರ್ಯಕರ್ತರು ಮತದಾರರ ಕೈಗೆ ಕರಪತ್ರ ನೀಡಿ ಕೈಮುಗಿದು ಮುಂದೆ ಸಾಗುತ್ತಿದ್ದಾರೆ. ಅಭ್ಯರ್ಥಿಗಳ ಪತ್ನಿಯರೂ ಸಹ ಮಹಿಳೆಯರ ಗುಂಪು ಕಟ್ಟಿಕೊಂಡು ಮನೆ ಮನೆಗೆ ಹೋಗಿ ಮತಯಾಚಿಸುತ್ತಿದ್ದಾರೆ.

ಬಿಸಿಲೇರುತ್ತಿದ್ದಂತೆಯೇ ಬಿಸಿ ಗಾಳಿ ಬೀಸುತ್ತಿದೆ. ಬಿಸಿಲಿನಿಂದ ಭೂಮಿ ಕಾದು ಹೆಂಚಿನಂತಾಗುತ್ತಿದೆ. ಸೆಕೆಯಿಂದಾಗಿ ಬೆವರು ಸುರಿದು ಬಟ್ಟೆಗಳು ತೊಯ್ದು ತೊಪ್ಪೆಯಾಗುತ್ತಿವೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಕೆಲವರು ಟೊಪ್ಪಿಗೆಗಳನ್ನು ಹಾಕಿಕೊಂಡರೆ, ಇನ್ನು ಕೆಲವರು ತಲೆಗೆ ಟವೆಲ್‌ಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮಹಿಳೆಯರು ಮುಖ ಮುಚ್ಚುವಂತೆ ಸೆರಗು ಎಳೆದುಕೊಂಡು ಪ್ರಚಾರ ಮಾಡುತ್ತಿದ್ದಾರೆ.

ಬಿಸಿಲು ಹಾಗೂ ಸೆಕೆಯ ಬೇಗೆಯಿಂದ ಕೊಂಚ ನೆಮ್ಮದಿ ಪಡೆಯಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳೆನೀರು, ಶರಬತ್, ಮಜ್ಜಿಗೆ ಹಾಗೂ ಕಲ್ಲಂಗಡಿ ಹಣ್ಣು ಮಾರಾಟ ಮಾಡುವವರ ಪಾಲಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಐಸ್‌ಕ್ರೀಮ್‌ ಮಾರಾಟ ಮಾಡುವವರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಊರಿನಿಂದ ಹೊರಗೆ ಹೋಗುವವರೆಗೂ ಕೈಗಾಡಿ ಹಿಡಿದುಕೊಂಡು ಅವರ ಹಿಂದೆಯೇ ಅಲೆಯುತ್ತಿದ್ದಾರೆ.

ಜಿಲ್ಲೆಯ ಬಹುತೇಕ ಕಡೆ ಬಯಲು ಪ್ರದೇಶಗಳಲ್ಲೇ ಊರುಗಳು ಇವೆ. ಗಿಡ ಮರಗಳ ಸಂಖ್ಯೆ ಕಡಿಮೆ ಇರುವ ಕಾರಣ ಪ್ರಚಾರಕ್ಕೆ ಬರುವ ಅಭ್ಯರ್ಥಿಗಳು, ಮುಖಂಡರು ತಂಪಾದ ಸ್ಥಳವನ್ನು ಹುಡುಕಿ ಅಲ್ಲಲ್ಲಿ ವಿಶ್ರಮಿಸುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ನೀರು ಕೇಳಿ ಬಾಯಾರಿಸಿಕೊಳ್ಳುವುದು ಕಂಡು ಬರುತ್ತಿದೆ. ಹಣ ಪಡೆದು ಪ್ರಚಾರದಲ್ಲಿ ತೊಡಗಿರುವ ಬಾಡಿಗೆ ಕಾರ್ಯಕರ್ತರು ಸಹ ಬಿಸಿಲಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ.

‘ಹಿಂದಿನ ವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಇತ್ತು. ಎರಡು ಮೂರು ದಿನಗಳಿಂದ 38 ಡಿಗ್ರಿ ಸೆಲ್ಸಿಯಸ್‌ ಇದ್ದರೂ ಬಿಸಿಲಿನ ಝಳವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಹೇಗೋ ಸಹಿಸಿಕೊಂಡು ಕೊನೆಯ ಗಳಿಗೆಯ ಪ್ರಚಾರದಲ್ಲಿ ತೊಡಗಿದ್ದೇವೆ’ ಎನ್ನುತ್ತಾರೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತೆ ಜಗದೇವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT