ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಅಳಲಿಗೆ ಮಿಡಿದ ದಾನಿಗಳ ಕರಳು

ಹುಮನಾಬಾದ್ ಸಿಬ್ಬಂದಿಗೆ ಕೊಟ್ಟಿಲ್ಲ ಮಾಸ್ಕ್‌
Last Updated 30 ಮಾರ್ಚ್ 2020, 15:36 IST
ಅಕ್ಷರ ಗಾತ್ರ

ಬೀದರ್‌: ಒಂದು ವಾರ ಕಳೆದರೂ ಜಿಲ್ಲಾ ಆಡಳಿತ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಅನ್ನ, ನೀರಿನ ವ್ಯವಸ್ಥೆ ಮಾಡದ ಕಾರಣ ‘ಪ್ರಜಾವಾಣಿ’ ‘ಸಚಿವರೇ ಕೈಮುಗಿತೇವೆ ಊಟದ ವ್ಯವಸ್ಥೆ ಮಾಡಿ’ ಶೀರ್ಷಿಕೆ ಅಡಿ ಪ್ರಕಟಿಸಿದ ಮಾನವೀಯ ವರದಿಗೆ ದಾನಿಗಳಿಂದ ಉತ್ತಮ ಸ್ಪಂದನೆ ದೊರೆಯಿತು.

ಬೆಳಿಗ್ಗೆ ಬೀದರ್‌ ತಾಲ್ಲೂಕಿನ ಶಹಾಪುರ್‌ ಗೇಟ್‌ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಕೆಲ ಅಂಗಡಿ ಮಾಲೀಕರು ಸಿಬ್ಬಂದಿಗೆ ಬಿಸ್ಕತ್‌ ಪಾಕೆಟ್‌ ಕೊಟ್ಟರೆ, ದಾನಿಯೊಬ್ಬರು ಮನೆಯಿಂದ ಉಪ್ಪಿಟ್ಟು ಮಾಡಿಕೊಂಡು ಬಂದು ಎಲ್ಲರಿಗೂ ವಿತರಿಸಿ ಮಾನವೀಯತೆ ಮೆರೆದರು.

ಯಾಮಾಹಾ ಶೋರೂಂ ಸಿಬ್ಬಂದಿ ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಿದರು. ತಮ್ಮ ಸಹದ್ಯೋಗಿಗಳ ಗೋಳಾಟ ಕೇಳಲಾಗದೆ ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರು ತಮ್ಮ ಮನೆಯಲ್ಲಿ ಪುಲಾವ್‌ ಮಾಡಿಕೊಂಡು ಕಾರಿನಲ್ಲಿ ತಂದು ಎಲ್ಲರಿಗೂ ಉಣಬಡಿಸಿ ಅವರ ಹಸಿವನ್ನು ತಣಿಸಿದರು.

ಚೆಕ್‌ಪೋಸ್ಟ್‌ನ ಸಿಬ್ಬಂದಿ ‘ಪ್ರಜಾವಾಣಿ’ ಕಾರ್ಯಕ್ಕೆ ಧನ್ಯತಾಭಾವ ವ್ಯಕ್ತಪಡಿಸಿದರು. ಮೂರು ದಿನ ಕತ್ತಲಲ್ಲೇ ಕಾಲ ಕಳೆದಿದ್ದ ನಮಗೆ ಟೆಂಟ್ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವಲ್ಲಿ ನೆರವಾಗಿದ್ದೀರಿ ನಿಮಗೆ ಧನ್ಯವಾದಗಳು. ದಾನಿಗಳಿಗೂ ನಮ್ಮ ಕೃತಜ್ಞತೆಗಳು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಲ್ಲೂರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಸಾಹಿತಿ ರಜಿಯಾ ಬಳಬಟ್ಟಿ. ಚನ್ನಬಸವ ಹೇಡೆ, ಜಗನ್ನಾಥ ಶಿವಯೋಗಿ ಬಸವಕೇಂದ್ರದ ಪ್ರಮುಖರಾದ ಗಣೇಶ ಶಿಲವಂತ ಮೊದಲಾದವರು ಬೆಳಿಗ್ಗೆಯಿಂದ ರಾತ್ರಿಯ ವರೆಗೂ ಚೆಕಪೋಸ್ಟ್‌ ಬಳಿಯಲ್ಲಿ ಉಳಿದು ದೂರದ ಊರಿಂದ ನಡೆದುಕೊಂಡು ಬರುತ್ತಿದ್ದವರಿಗೆ ಆಲೂಭಾತ್, ಮಜ್ಜಿಗೆ, ಗಜ್ಜರಿ, ಸೌತೆಕಾಯಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು. ಪೊಲೀಸರಿಗೂ ಊಟದ ವ್ಯವಸ್ಥೆ ಮಾಡಿದರು.

ಹುಮನಾಬಾದ್‌ನ ಆರ್‌ಟಿಒ ಕಚೇರಿ ಸಮೀಪ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಸಿಬ್ಬಂದಿಗೆ ಸೋಮವಾರವೂ ನೀರು ಹಾಗೂ ಆಹಾರ ಪೊಟ್ಟಣ ವ್ಯವಸ್ಥೆ ಮಾಡಲಿಲ್ಲ. ಕುಳಿತುಕೊಳ್ಳಲು ಕುರ್ಚಿ, ಮಾಸ್ಕ್ ಹಾಗೂ ಸ್ಯಾನಿಟೈಜರ್‌ ಇಲ್ಲದೆ ತೊಂದರೆ ಅನುಭವಿಸಬೇಕಾಯಿತು.

ಭಾಲ್ಕಿ ತಾಲ್ಲೂಕಿನಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಲ್ಲಿನ ತಾಲ್ಲೂಕು ಆರೋಗ್ಯ ಅಧಿಕಾರಿಯೇ ಊಟದ ವ್ಯವಸ್ಥೆ ಮಾಡಿದರು. ಔರಾದ್, ಕಮಲನಗರ ಹಾಗೂ ಬಸವಕಲ್ಯಾಣದಲ್ಲಿ ಸೋಮವಾರ ಮಧ್ಯಾಹ್ನ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಯಿತು. ನಾಲ್ಕು ದಿನಗಳ ಹಿಂದೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ಕೆಳ ಹಂತದ ಅಧಿಕಾರಿಗಳು ಕ್ಯಾರೆ ಅಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT