ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೆ.3ರಿಂದ ಬಸವಕಲ್ಯಾಣದಿಂದ ಪ್ರಜಾಧ್ವನಿ ಯಾತ್ರೆ’

ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ
Last Updated 25 ಜನವರಿ 2023, 6:20 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಫೆಬ್ರುವರಿ 3ರಂದು ಬಸವಾದಿ ಶರಣರ ನಾಡು ಬಸವಕಲ್ಯಾಣದಿಂದ ಚಾಲುಕ್ಯರ ನಾಡು ಬಾದಾಮಿವರೆಗೆ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಕೆಪಿಸಿಸಿ ಅಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ನಗರದ ಸಾಹಿಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಯಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಬಸವಕಲ್ಯಾಣದ ನಂತರ ಸಂಜೆ ಭಾಲ್ಕಿಯಲ್ಲಿಯೂ ಸಾರ್ವಜನಿಕ ಸಭೆ ನಡೆಯಲಿದೆ. ಮರುದಿನ ಔರಾದ್, ಬೀದರ್‌ನಲ್ಲಿಯೂ ಬೃಹತ್ ಸಭೆಗಳನ್ನು ಆಯೋಜಿಸಲಾಗುತ್ತದೆ. ಅದಾದ ಮೇಲೆ ಕಲಬುರಗಿ ಜಿಲ್ಲೆ ಒಳಗೊಂಡು ಕಲ್ಯಾಣ ಕರ್ನಾಟಕ ಭಾಗದ 112 ವಿಧಾನಸಭಾ ಕ್ಷೆತ್ರಗಳಲ್ಲಿ ಯಾತ್ರೆ ನಡೆಯಲಿದೆ. ಸಿದ್ದರಾಮಯ್ಯನವರು ಬಸವತತ್ವದಲ್ಲಿ ನಂಬಿಕೆ ಇಟ್ಟಿರುವ ಕಾರಣ ಇಲ್ಲಿಂದ ಯಾತ್ರೆ ಆರಂಭಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಭೇದಭಾವ, ಗುಂಪುಗಾರಿಕೆ ಮಾಡದೆ ಒಗ್ಗಟ್ಟಿನಿಂದ ಯಾತ್ರೆ ಯಶಸ್ವಿಗೊಳಿಸಬೇಕು’ ಎಂದರು.

ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ, ಭೀಮರಾವ್ ಪಾಟೀಲ, ಪ್ರಕಾಶ ರಾಠೋಡ, ಮಾಜಿ ಶಾಸಕ ಅಶೋಕ ಖೇಣಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವಿಜಯಸಿಂಗ್, ಶರಣಪ್ಪ ಮಟ್ಟೂರ್, ಮಾಜಿ ಸಂಸದ ಐ.ಜಿ.ಸನದಿ, ಮಾಲಾ ನಾರಾಯಣರಾವ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ ಇದ್ದರು.

ಪ್ರತ್ಯೇಕ ಯಾತ್ರೆ: ರಾಯರಡ್ಡಿ

‘ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ರಾಜ್ಯದ 112 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದ 112 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ’ ಎಂದು ಕಾರ್ಯಕ್ರಮದ ಸಮನ್ವಯ ಸಮಿತಿ ಅಧ್ಯಕ್ಷ ಬಸವರಾಜ ರಾಯರಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಏಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ರಾಜ್ಯದಾದ್ಯಂತ ಚುನಾವಣಾ ಸಿದ್ಧತೆ ಕೈಗೊಳ್ಳಲಾಗಿದೆ. ಬೂತ್ ಮಟ್ಟದಲ್ಲಿಯೂ ಪಕ್ಷದ ಕಾರ್ಯಕರ್ತರ ಸಂಘಟನೆ ಬಲಗೊಳಿಸಲಾಗುತ್ತಿದೆ. ಭ್ರಷ್ಟಾಚಾರ ತಡೆಯುವುದಕ್ಕಾಗಿ ಬಿಜೆಪಿ ಸರ್ಕಾರ ಕಿತ್ತೊಗೆಯುವುದು ಅತ್ಯಗತ್ಯವಾಗಿದೆ’ ಎಂದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮಾಜಿ ಸಂಸದ ಐ.ಜಿ.ಸನದಿ ಸಹ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT