ಭಾನುವಾರ, ಜನವರಿ 19, 2020
25 °C
‘ಪ್ರಜಾವಾಣಿ’, ಡೆಕ್ಕನ್‌ ಹೆರಾಲ್ಡ್‌’ನಿಂದ ಚಾಣಕ್ಯ ಕರಿಯರ್‌ ಅಕಾಡೆಮಿ ಸಹಯೋಗದಲ್ಲಿ ಉಚಿತ ಮಾರ್ಗದರ್ಶನ ಕಾರ್ಯಾಗಾರ

ಉತ್ಸಾಹದಿಂದ ಬಂದರು, ಭರಪೂರ ಮಾಹಿತಿಯೊಂದಿಗೆ ತೆರಳಿದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೀದರ್: ಸ್ಪರ್ಧಾತ್ಮಕ ಪರೀಕ್ಷೆಗಳಲಿ ಯಶ ಸಾಧಿಸಬೇಕು ಎನ್ನುವ ಹೆಬ್ಬಯಕೆಯಿಂದ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಬೆಳಿಗ್ಗೆಯೇ ಇಲ್ಲಿಯ ಜಿಲ್ಲಾ ರಂಗಮಂದಿರದ ಆವರಣದಲ್ಲಿ ಹೆಸರು ನೋಂದಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಯುವಕ, ಯುವತಿಯರ ಕಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಮಾಹಿತಿಯ ಹಸಿವು ಎದ್ದು ಕಾಣುತ್ತಿತ್ತು. ಗುರಿಯತ್ತ ಮುನ್ನುಗ್ಗಲು ಅವರಿಗೆ ಮಾರ್ಗದರ್ಶನ ಹಾಗೂ ಪ್ರೇರಣೆ ಅಗತ್ಯ ಕಂಡು ಬಂದಿತು.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ನಿಂದ ವಿಜಯಪುರದ ‘ಚಾಣಕ್ಯ ಕರಿಯರ್‌ ಅಕಾಡೆಮಿ’ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಸ್ಪರ್ಧಾ ಮಾರ್ಗ’ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಮಾರ್ಗದರ್ಶನ ಕಾರ್ಯಾಗಾರಕ್ಕೆ ಕಾಲೇಜು ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿಷಯಯಲ್ಲಿ ಇದ್ದ ಅನೇಕ ಬಗೆಯ ಪ್ರಶ್ನೆ ಹಾಗೂ ಗೊಂದಲಗಳನ್ನು ನಿವಾರಿಸಿಕೊಳ್ಳಲು ವಿದ್ಯಾರ್ಥಿಗಳು ಒಂದು ತಾಸು ಮುಂಚಿತವಾಗಿಯೇ ಬಂದಿದ್ದರು. ಜಿಲ್ಲಾ ರಂಗ ಮಂದಿರ ಬೆಳಿಗ್ಗೆಯಿಂದ ಸಂಜೆವರೆಗೂ ಸ್ಪರ್ಧಾ ಆಕಾಂಕ್ಷಿಗಳಿಂದ ತುಂಬಿಕೊಂಡಿತ್ತು. ಸ್ವಲ್ಪವೂ ಆಯಾಸ ಪಟ್ಟುಕೊಳ್ಳದೇ ಬಿಡುವಿಲ್ಲದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಭರಪೂರ ಮಾಹಿತಿ ಪಡೆದರು.

ಅಧಿಕಾರಿಗಳಾಗಲು ಅಧ್ಯಯನವೇ ಮಹಾ ಮಾರ್ಗ ಎನ್ನುವುದನ್ನು ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಎನ್‌.ಎಂ.ಬಿರಾದಾರ, ಪ್ರೇರಕ ಭಾಷಣಕಾರ ಕ್ಯಾಪ್ಟನ್‌ ಸಿ.ಎಸ್‌.ಆನಂದ ಹಾಗೂ ಯಪಿಎಸ್‌ಸಿ ಕಂಬೈನ್ಡ್‌ ಮೆಡಿಕಲ್‌ ಸರ್ವಿಸಸ್ ಪರೀಕ್ಷೆಯಲ್ಲಿ 106ನೇ ರ್‍ಯಾಂಕ್‌ ಪಡೆದ ಬಸವರಾಜೇಶ್ವರಿ ಶಿವಣಕರ್ ವಿದ್ಯಾರ್ಥಿಗಳಿಗೆ ಮನನ ಮಾಡಿಸಿದರು.

ದಿನವಿಡೀ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸವನ್ನು ಕುತೂಹಲದಿಂದ ಆಲಿಸಿದ ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಅಧಿಕಾರಿಗಳು ಹಂಚಿಕೊಂಡ ಅನುಭವ ಹೆಚ್ಚು ಹೆಚ್ಚು ಓದುವುದಕ್ಕೆ ಪ್ರೇರಣೆ ನೀಡಿತು.

ಪ್ರೇರಕ ಭಾಷಣಕಾರ ಕ್ಯಾಪ್ಟನ್‌ ಸಿ.ಎಸ್‌.ಆನಂದ ಅವರು ವಿದ್ಯಾರ್ಥಿಗಳು ಮೊದಲು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಕೀಳರಿಮೆಯ ಭಾವ ಬೇಡ. ಸಮಾಜದಲ್ಲಿನ ಸಾಧಕರನ್ನೂ ಮೀರಿಸುವ ಪಣದೊಂದಿಗೆ ಮುನ್ನುಗ್ಗಿದರೆ ಯಶಸ್ಸಿನ ಪಥವನ್ನು ತಲುಪಬಹುದು’ ಎಂದು ಕೆಲ ಉದಾಹರಣೆಗಳೊಂದಿಗೆ ವಿವರಿಸಿದರು.

ಸಾಮಾನ್ಯವಾಗಿ ನಮ್ಮೊಂದಿಗೆ ಬೆಳೆದ ಸಹಪಾಠಿಗಳು ಉನ್ನತ ಹುದ್ದೆಗೆ ಆಯ್ಕೆಯಾದಾಗಲೇ, ಇನ್ನುಳಿದವರು ಸಹ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಾರೆ. ಇಂತಹ ಸಾಧನೆ ನನ್ನಿಂದಲೇ ಶುರುವಾಗಬೇಕು ಎನ್ನುವ ಛಲ ವಿದ್ಯಾರ್ಥಿಗಳಲ್ಲಿ ಬರಬೇಕು. ಸಾಧನೆಯ ಛಲ ಹಾಗೂ ಆಸಕ್ತಿಯಿಂದ ಓದಿದವರು ಮಾತ್ರ ಸುಲಭವಾಗಿ ಗುರಿ ಸಾಧಿಸುತ್ತಾರೆ’ ಎಂದು ತಿಳಿಸಿದರು.

ಬಸವಕಲ್ಯಾಣ ತಹಶೀಲ್ದಾರ್‌ ಸಾವಿತ್ರಿ ಸಲಗರ, ಭಾಲ್ಕಿ ತಹಶೀಲ್ದಾರ್ ಅಣ್ಣಾರಾವ್‌ ಪಾಟೀಲ ಹಾಗೂ ಕಂದಾಯ ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾದ ಸಾಯಿಪ್ರಸಾದ ರಮೇಶ ಬೆಜಗಂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಬಗೆಯನ್ನು ವಿವರಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳು ಶಾಲಾ ಕಾಲೇಜುಗಳ ಪರೀಕ್ಷೆಯಂತಲ್ಲ. ದಿನಾಂಕ ನಿಗದಿಯಾದ ಮೇಲೆ ಓದುಲು ಶುರು ಮಾಡುವ ಪರೀಕ್ಷೆಗಳೂ ಅಲ್ಲ. ಪ್ರೌಢ ಶಾಲೆಯಲ್ಲಿ ಓದಿದ ವಿಷಯಗಳ ವಿಸ್ತೃತವಾದ ವಿಷಯಗಳು ಇರುತ್ತವೆ. ಇಲ್ಲಿ ಓದು ನಿರಂತರವಾಗಿರುತ್ತದೆ. ಸಮರ್ಥ ಅಧಿಕಾರಿಯನ್ನು ಸಿದ್ಧಪಡಿಸುವುದಕ್ಕಾಗಿಯೇ ಇರುವ ಕೆಪಿಎಸ್‌ಸಿ ನಡೆಸುವ ಪರೀಕ್ಷೆ ಸಿದ್ಧತೆಗೆ ನಿತ್ಯ ಪತ್ರಿಕೆಗಳನ್ನು ಓದಬೇಕು. ಪತ್ರಿಕೆಗಳಲ್ಲಿ ಹೊಸ ಹೊಸ ವಿಷಯಗಳು ಬಂದಾಗ ಅವುಗಳ ತುಣಕುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿರುವ ಶೇಕಡ 80 ರಷ್ಟು ಅಂಕಗಳ ಪ್ರಶ್ನೆಗಳಿಗೆ ದಿನಪತ್ರಿಕೆಗಳಲ್ಲೇ ಉತ್ತರ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ‘ಪ್ರಜಾವಾಣಿ’ ಎಲ್ಲ ಬಗೆಯ ಮಾಹಿತಿಯನ್ನೂ ಪೂರೈಸುತ್ತಿದೆ ಎಂದು ಸಾಧಕರು ಆಕಾಂಕ್ಷಿಗಳಿಗೆ ಮನವರಿಕೆ ಮಾಡಿಸಿದರು.

ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್‌ ಕಾಲೇಜುಗಳು, ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಚಾಣಕ್ಯ ಕರಿಯರ್‌ ಅಕಾಡೆಮಿಯಿಂದ ಐಎಎಸ್‌, ಕೆಎಎಸ್‌ ಮಾರ್ಗದರ್ಶನ ಉಚಿತ ಕೈಪಿಡಿ ವಿತರಿಸಲಾಯಿತು.

ಜಿಲ್ಲಾ ರಂಗ ಮಂದಿರದ ಆವರಣದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪೂರಕವಾಗುವ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಮಳಿಗೆಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಕಾರ್ಯಾಗಾರ ಉದ್ಘಾಟಿಸಿದರು. ಟಿಪಿಎಂಎಲ್‌ ಹುಬ್ಬಳ್ಳಿ ವಲಯದ ಪ್ರಸರಣ ವಿಭಾಗದ ಎಜಿಎಂ ಶಿವರಾಜ ನರೋಣಾ, ಕಲಬುರ್ಗಿ ಬ್ಯುರೊ ಮುಖ್ಯಸ್ಥ ಗಣೇಶ ಚಂದನಶಿವ, ಪ್ರಸರಣ ವಿಭಾಗದ ಸಿನಿಯರ್‌ ಮ್ಯಾನೇಜರ್‌ ಅಶೋಕ ಪಾಟೀಲ ಇದ್ದರು.

ಡಾ.ಬಸವರಾಜ ಬಲ್ಲೂರು ನಿರೂಪಿಸಿದರು. ಜೀಜಾ ಮಾತಾ ಕನ್ಯಾ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು