ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕೊಟ್ಟು ಮತ ಕೇಳಿ

ಮೂಲ ಸೌಕರ್ಯ ಕಲ್ಪಿಸದ ಜನಪ್ರತಿನಿಧಿ ವಿರುದ್ಧ ನಾಗರಿಕರ ಆಕ್ರೋಶ
Last Updated 7 ಮೇ 2018, 7:15 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಾರೆ. ನೀರು ಬಂದ ದಿನ ದಿನವಿಡೀ ಸರತಿಯಲ್ಲಿ ನಿಂತು ನೀರು ತುಂಬುವುದೇ ಕೆಲಸವಾಗುತ್ತದೆ’ ಎಂದು ತಾಲ್ಲೂಕಿನ ದೇವಗಾಂವ–ಶಿರಗಾಪುರ ಗ್ರಾಮದ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

‘ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಮನೆ, ಮನೆ ಪ್ರಚಾರಕ್ಕೆ ಭಾನುವಾರ ತೆರಳಿದ ವೇಳೆ ಬಿಜೆಪಿ ಕಾರ್ಯಕರ್ತರ ಎದುರು ತಮ್ಮ ಅಳಲು ತೋಡಿಕೊಂಡ ಮಹಿಳೆಯರು, ‘ಹಿಂದೆ ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡಿ, ವೋಟ್ ಹಾಕಿಸಿಕೊಂಡು ಹೋದ ಪುಣ್ಯಾತ್ಮ ಎಲ್ಲಿದ್ದಾನೋ ಗೊತ್ತಿಲ್ಲ. ಈ ಬಾರಿ ನಿಮಗೆ ವೋಟು ಬೇಕೆಂದರೆ, ಮೊದಲು ನೀರು ಕೊಡಿ, ಅನಂತರ ವೋಟ್ ಕೇಳಿ’ ಎಂದು ತಾಕೀತು ಮಾಡಿದರು.

ನೇಸರಗಿ ಕಂದಾಯ ವೃತ್ತದ ಬಾವಿಹಾಳ ಪಂಚಾಯ್ತಿ ವ್ಯಾಪ್ತಿಯ ಲಕ್ಕುಂಡಿ ಗ್ರಾಮದ ರಸ್ತೆ ದುಸ್ಥಿತಿ ಕುರಿತು ಅಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ‘ಯರಗುದ್ದಿಯಿಂದ ಲಕ್ಕುಂಡಿ ಮಾರ್ಗವಾಗಿ ನಾಗನೂರು ಸೇರಬೇಕೆಂದರೆ ಸಾಕು ಬೇಕಾಗುತ್ತದೆ. ಚುನಾವಣೆ ಸಮೀಪ ಬಂತೆಂದು ಶಾಸಕ ಡಿ.ಬಿ. ಇನಾಮದಾರ ಈಚೆಗೆ ರಸ್ತೆ ದುರಸ್ತಿ ಪೂಜೆ ನೆರವೇರಿಸಿ ಮತದಾರರ ಕಣ್ಣಲ್ಲಿ ಮಣ್ಣು ತೂರಿ ಹೋದರು. ಆದರೆ, ರಸ್ತೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ’ ಎಂದು ಗ್ರಾಮದ ಮುಕ್ತುಂಸಾಬ್, ಸಯ್ಯದ್ ಮತ್ತು ಮಹಾಂತೇಶ ಆರೋಪಿಸಿದರು.

‘ನಡುರಸ್ತೆಯಲ್ಲಿ ಹಾಕಿರುವ ಸಿಡಿ ಒಡೆದು ಹಾಳಾಗಿದೆ. ಗುಂಡಿಯಲ್ಲಿ ಬಿದ್ದು, ದ್ವಿಚಕ್ರ ವಾಹನ ಸವಾರರು, ಜಾನುವಾರುಗಳು ಗಾಯ ಮಾಡಿಕೊಂಡಿದ್ದಾರೆ. ಈಗ ಚುನಾವಣೆ ಬಂದಿದೆ. ಶಾಸಕ ಇನಾಮದಾರ ಮತ ಕೇಳಲು ಬರಲಿ ಬರಲಿ ಅವರನ್ನೇ ಕೈ ಹಿಡಿದು ಈ ಕುರಿತು ಕೇಳುತ್ತೇವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಸಂಪರ್ಕ ರಸ್ತೆಯೂ ಹದಗೆಟ್ಟಿದೆ. ಈ ಕುರಿತು ಶಾಸಕ ಇನಾಮದಾರ ಅವರಿಗೆ ಮೌಖಿಕವಾಗಿ ಮತ್ತು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ತಿಳಿಸಿದ್ದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ. ಜನರಿಗೆ ಸುರಕ್ಷಿತವಾಗಿ ಓಡಾಡಲು ರಸ್ತೆ ನಿರ್ಮಿಸದೇ ಇರುವ ಶಾಸಕರು ನಮಗೆ ಬೇಡ’ ಎಂದು ಗ್ರಾಮದ ಅಕ್ಬರ್ ಗೋಕಾಕ್ ದೂರಿದರು.

‘ಮನೆಯಿಂದ ಕಾಲಿಟ್ಟರೆ ಸಿಮೆಂಟ್ ರಸ್ತೆಯಲ್ಲೇ ನನ್ನ ಕ್ಷೇತ್ರದ ಜನರು ಕಾಲಿಡಬೇಕೆಂದು ಶಾಸಕರು ಹೇಳುತ್ತಾರೆ. ಆದರೆ, ಈ ರಸ್ತೆಯಲ್ಲಿ ಕಾಲಿಟ್ಟರೆ ಗುಂಡಿಯಲ್ಲಿ ಬಿದ್ದು ನಮ್ಮ ಕೈ– ಕಾಲು ಮುರಿಯುತ್ತವೆ’ ಎಂದು ಸಂತೋಷ ಸಂಗಟಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT