ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣತ್ವ ಸಂಪಾದನೆಗೆ ಶ್ರಾವಣ ಸಕಾಲ

ಶರಣ ಉದ್ಯಾನದಲ್ಲಿ ಬಸವ ಭಾಷೆ ಪ್ರವಚನ: ಅಕ್ಕ ಅನ್ನಪೂರ್ಣ ಅಭಿಮತ
Last Updated 3 ಆಗಸ್ಟ್ 2019, 15:05 IST
ಅಕ್ಷರ ಗಾತ್ರ

ಬೀದರ್: ‘ಶರಣ ಎಂದರೆ ಬಯಕೆಯ ಬಾಣ ಇಲ್ಲದವ ಅಥವಾ ಆಸೆ ಅಳಿದವ ಎಂದರ್ಥ. ಬಯಕೆಯೇ ಭವದ ಬೀಜವಾದ್ದರಿಂದ ಬಯಕೆಯನ್ನು ಕಳೆದುಕೊಂಡವ ಶರಣನಾಗುತ್ತಾನೆ. ಶರಣತ್ವ ಸಂಪಾದಿಸಲು ಶ್ರಾವಣ ಸಕಾಲ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ನುಡಿದರು.

ನಗರದ ಶರಣ ಉದ್ಯಾನದಲ್ಲಿ ಶ್ರಾವಣ ಪ್ರಯುಕ್ತ ಆಯೋಜಿಸಿರುವ ಬಸವ ಭಾಷೆ ಪ್ರವಚನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಶ್ರಾವಣ ಶ್ರವಣ ಮಾಡಲು ಪ್ರಶಸ್ತವಾದ ತಿಂಗಳು. ಕೇಳುವಿಕೆಯು ಜೀವನದಲ್ಲಿ ಏನನ್ನಾದರೂ ಸಾಧಿಸಲು ಹಚ್ಚುತ್ತದೆ. ಒಂದು ತಿಂಗಳಾದರೂ ಶರಣರಂತೆ ಬದುಕುವ ಪ್ರಯತ್ನಕ್ಕೆ ಪ್ರೇರೇಪಿಸುತ್ತದೆ’ ಎಂದು ತಿಳಿಸಿದರು.

‘ಶರಣರ ಸೂಳ್ನುಡಿಗಳನ್ನು ಕೇಳುವುದರಿಂದ ವ್ಯಕ್ತಿತ್ವ ಎತ್ತರಿಸಿಕೊಳ್ಳಬಹುದಾಗಿದೆ. ಜ್ಞಾನ ವಿಸ್ತಾರಗೊಳ್ಳುತ್ತದೆ. ಭಕ್ತಿ ಕಳೆಗಟ್ಟುತ್ತದೆ. ಬದುಕಿನಲ್ಲಿ ಭಕ್ತಿ ಅಳವಡಿಸಿಕೊಳ್ಳುವುದರಿಂದ ದುಃಖ ದೂರಾಗಿ ನೆಮ್ಮದಿ ನೆಲೆಗೊಳ್ಳುತ್ತದೆ. ಶರಣತ್ವ ಸಂಪಾದಿಸಬೇಕೆನ್ನುವವರು ಬಸವಣ್ಣನವರಂತೆ ಬದುಕಲು ಕಲಿಯಬೇಕು. ಅವರ ಬದುಕು ಮಾನವ ಕುಲಕ್ಕೆ ದಿವ್ಯ ಪಥದರ್ಶಿಯಾಗಿದೆ’ ಎಂದು ಹೇಳಿದರು.

‘ಈ ಸಲ ಬಸವಣ್ಣನವರ ಭಾಷೆಗಳ ಕುರಿತು ಪ್ರಭುದೇವರು ಪ್ರವಚನ ನೀಡಲಿದ್ದಾರೆ. ಬಸವ ಭಾಷೆಗಳನ್ನು ಅರಿತು ಅವರಂತೆ ನಾವು ಕಟ್ಟಳೆಗಳನ್ನು ವಿಧಿಸಿಕೊಂಡು ಆಚರಣೆಯಲ್ಲಿ ತರಬೇಕು. ತನ್ಮೂಲಕ ವ್ಯಕ್ತಿತ್ವ ಸುಧಾರಿಸಿಕೊಳ್ಳಬೇಕು. ವ್ಯಕ್ತಿ ವ್ಯಕ್ತಿಗಳ ಸುಧಾರಣೆಯಿಂದ ಮನುಕುಲದ ಸುಧಾರಣೆಯಾಗುತ್ತದೆ. ಮೌಲಿಕ ಜನಾಂಗ ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ಇಂದೇ ಸತ್ಯ ಸಾಧನೆಯ ಸಂಕಲ್ಪ ಮಾಡಬೇಕು ’ಎಂದು ತಿಳಿಸಿದರು.

ಪ್ರವಚನಕಾರ ಪ್ರಭುದೇವರು ಮಾತನಾಡಿ, ‘ಸ್ವಾನುಭಾವದ ನೆಲೆ ತಿಳಿಯುವುದು ಬಲು ಕಷ್ಟ. ಅದಕ್ಕೆ ಸದ್ಗುರುವಿನ ಕೃಪೆ ಬೇಕು. ಗುರುಪುತ್ರರಾದವರಿಗೆ ಮಾತ್ರ ಪರಮಾತ್ಮನ ಕಾರುಣ್ಯ ಲಭಿಸುತ್ತದೆ. ತಪ್ಪುಗಳನ್ನು ತಿದ್ದಿ ತೀಡಿ ಇಂಬಿಟ್ಟುಕೊಳ್ಳುವವನೇ ಸದ್ಗುರು’ ಎಂದು ಹೇಳಿದರು.

‘ದೇವರು ನರಮಾನವನನ್ನು ಸೃಷ್ಟಿಸಿದರೆ, ಸದ್ಗುರು ನರಮಾನವನನ್ನು ಶರಣನನ್ನಾಗಿ ರೂಪಿಸುತ್ತಾನೆ. ಗುರುವಿನ ವಾಣಿ ಕೇಳುವುದೇ ಒಂದು ಆನಂದ. ಗುರುವಾಣಿಯಂತೆ ನಡೆದರೆ ಲಿಂಗವೇ ಕಾಣಬಹುದು. ಗುರುವಾಜ್ಞೆ ಮೀರಿ ನಡೆಯುವವರು ದುರಾಚಾರಿಗಳು. ಗುರುವಾಜ್ಞೆಯಲ್ಲಿ ಚರಿಸುವವನು ಭಕ್ತನೆನಿಸುತ್ತಾನೆ’ ಎಂದು ತಿಳಿಸಿದರು.

ಡಾ. ವಿಜಯಶ್ರೀ ಬಶೆಟ್ಟಿ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು. ನೀಲಮ್ಮನ ಬಳಗದ ಸದಸ್ಯೆಯರಾದ ಶಾಂತಾ ಖಂಡ್ರೆ, ಮೀರಾ ಖೇಣಿ, ಮಹಾನಂದಾ ಪಾಟೀಲ, ಸುಮಾ ಭೂಶೆಟ್ಟಿ, ನೀಲಮ್ಮ ರೂಗನ್, ಸುಮತಿ ರುದ್ರಾ ಮತ್ತು ಸಾವಿತ್ರಿ ಮಹಾಜನ್‌ ಬಸವ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಬಸವೇಶ್ವರ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ, ಪ್ರವಚನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಂಚಾಕ್ಷರಿ ಮುಖ್ಯ ಅತಿಥಿಗಳಾಗಿದ್ದರು.

ಅಭಿಯಾನಕ್ಕೆ ಚಾಲನೆ: ಇದೇ ಸಂದರ್ಭದಲ್ಲಿ ಅಕ್ಕ ಅನ್ನಪೂರ್ಣ ಅವರು ಸಾಮೂಹಿಕವಾಗಿ ಬಸವಣ್ಣನವರ ವಚನವನ್ನು ಓದಿಸುವ ಮೂಲಕ 2019ನೇ ಸಾಲಿನ ವಚನ ಪಠಣ ಅಭಿಯಾನಕ್ಕೆ ಚಾಲನೆ ನೀಡಿದರು.

‘ಅಭಿಯಾನದ ಪ್ರಯುಕ್ತ ಪ್ರತಿಯೊಬ್ಬರು ಶ್ರಾವಣದಲ್ಲಿ ಪ್ರತಿ ದಿನ 108 ವಚನಗಳನ್ನು ಅಧ್ಯಯನ ಮಾಡಬೇಕು. 1999 ರಿಂದ ಅಭಿಯಾನವನ್ನು ಆರಂಭಿಸಲಾಗಿದ್ದು, ಇದರ ಫಲವಾಗಿ ಪ್ರತಿ ವರ್ಷವೂ ಲಕ್ಷಾಂತರ ವಚನಗಳು ಓದಲ್ಪಡುತ್ತಿವೆ’ ಎಂದು ಅವರು ಹೇಳಿದರು.

ಶಕುಂತಲಾ ಗಾದಗಿ ಗುರುಪೂಜೆ ಮಾಡಿದರು. ಎಂಜಿನಿಯರ್ ರಾಚಪ್ಪ ಪಾಟೀಲ ವಚನ ಗಾಯನ ಮಾಡಿದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT