ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ

ಮತ ಎಣಿಕೆ ಸಿಬ್ಬಂದಿಗೂ ಮೊಬೈಲ್‌ ಬಳಕೆ ನಿಷೇಧ
Last Updated 21 ಮೇ 2019, 15:38 IST
ಅಕ್ಷರ ಗಾತ್ರ

ಬೀದರ್‌: ‘ಮೇ 23ರಂದು ನಡೆಯಲಿರುವ ಬೀದರ್‌ ಲೋಕಸಭೆ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಮಧ್ಯಾಹ್ನ 3 ಗಂಟೆ ವೇಳೆಗೆ ಫಲಿತಾಂಶ ಹೊರ ಬೀಳಲಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ತಿಳಿಸಿದರು.

‘ಮತ ಎಣಿಕೆ ಸಿಬ್ಬಂದಿ ಹಾಗೂ ಎಜೆಂಟರು ಮತ ಎಣಿಕೆ ಕೊಠಡಿಯೊಳಗೆ ಮೊಬೈಲ್‌ ತರುವುದನ್ನು ನಿಷೇಧಿಸಲಾಗಿದೆ. ಮೊಬೈಲ್‌ಗಳನ್ನು ಮನೆಯಲ್ಲೇ ಇಟ್ಟು ಬರಬೇಕು’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಿಗ್ಗೆ 6ಕ್ಕೆ ಹಾಜರಿರಲು ಸೂಚಿಸಲಾಗಿದೆ. ಬೆಳಿಗ್ಗೆ 7.30ಕ್ಕೆ ಚುನಾವಣಾ ವೀಕ್ಷ ಕರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಬೆಳಿಗ್ಗೆ 8ಕ್ಕೆ ಎಣಿಕೆ ಆರಂಭವಾಗಲಿದೆ. ಇವಿಎಂಗಳಲ್ಲಿನ ಮತ ಎಣಿಕೆ ಹಾಗೂ ಬ್ಯಾಲೆಟ್‌ ಪೇಪರ್‌ ಎಣಿಕೆ ಏಕಕಾಲದಲ್ಲಿ ನಡೆಯಲಿದೆ. ಎಣಿಕೆ ಕಾರ್ಯಕ್ಕೆ 1,600 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಬೀದರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆಯು ಒಟ್ಟು 13 ಕೋಣೆಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‌ಗಳನ್ನು ಹಾಕಲಾಗಿದೆ. ಪ್ರತಿ ಟೇಬಲ್‌ಗೆ ತಲಾ ಒಬ್ಬರಂತೆ ಮತ ಎಣಿಕೆ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೊ ವೀಕ್ಷಕರನ್ನು ನಿಯೋಜಿಸಲಾಗಿದೆ.

ಮತ ಎಣಿಕೆ ಸಿಬ್ಬಂದಿಯು ವಿದ್ಯುನ್ಮಾನ ಮತಯಂತ್ರಗಳಲ್ಲಿ ಫಲಿತಾಂಶದ ಬಟನ್ ಒತ್ತಿ ಫಲಿತಾಂಶದ ವಿವರಗಳನ್ನು 17 ಸಿ ನಮೂನೆಯ ಭಾಗ-2ರಲ್ಲಿ ನಮೂದಿಸಿ ಹಾಜರಿರುವ ಎಣಿಕೆ ಏಜೆಂಟರ ಸಹಿ ಪಡೆದು ಚುನಾವಣಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.

‘ಅಂಚೆ ಮತಪತ್ರಗಳ ಎಣಿಕೆಯನ್ನು ಚುನಾವಣಾಧಿಕಾರಿ ಮೇಲುಸ್ತುವಾರಿಯಲ್ಲಿ ಹಾಗೂ ಐವರು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಒಂದು ಟೇಬಲ್‌ನಲ್ಲಿ 500 ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೆ ಒಬ್ಬ ಪತ್ರಾಂಕಿತ ಅಧಿಕಾರಿಯನ್ನು ಎಣಿಕೆ ಮೇಲ್ವಿಚಾರಕರಾಗಿ, ಒಬ್ಬ ಕೇಂದ್ರ ಸರ್ಕಾರದ ಅಧಿಕಾರಿಯನ್ನು ಮೈಕ್ರೊ ವೀಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅಂಚೆ ಮತ ಎಣಿಕೆ ಪ್ರಾರಂಭವಾದ ನಂತರ ಎಲೆಕ್ಟ್ರಾನಿಕ್ ಮತ ಯಂತ್ರಗಳ ಎಣಿಕೆ ಕಾರ್ಯವು ಸಹಾಯಕ ಚುನಾವಣಾಧಿಕಾರಿ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಮತ ಎಣಿಕೆ ಕಾರ್ಯಕ್ಕೆ ಭಾರತ ಚುನಾವಣಾ ಆಯೋಗವು 3 ಜನ ವೀಕ್ಷಕರನ್ನು ನೇಮಿಸಿದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಹೇಳಿದರು.

‘ಮತ ಎಣಿಕೆ ಕೇಂದ್ರದಲ್ಲಿ 1,600 ಸಿಬ್ಬಂದಿ ಹಾಗೂ 400 ಪೊಲೀಸರಿಗೆ ಉಪಾಹಾರ, ಟೀ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ವ್ಯಕ್ತಿಗಳು ಹಣ ಕೊಟ್ಟು ಉಪಾಹಾರ ಸೇವಿಸಬಹುದಾಗಿದೆ’ ಎಂದು ತಿಳಿಸಿದರು.

‘ಅಭ್ಯರ್ಥಿಗಳು ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 15 ಮತ ಎಣಿಕೆ ಏಜೆಂಟರನ್ನು ಹಾಗೂ ಅಂಚೆ ಮತಗಳ ಎಣಿಕೆಗೆ ಐವರು ಏಜೆಂಟರನ್ನು ನೇಮಕ ಮಾಡಬೇಕು ಎಂದು ಸೂಚಿಸಲಾಗಿದೆ. ಬುಧವಾರ ಎಲ್ಲ ಏಜೆಂಟರಿಗೆ ಪಾಸ್‌ಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.

‘ಮತ ಎಣಿಕೆಯನ್ನು ಶಾಂತಿಯುತವಾಗಿ ನಡೆಸಲು ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ನಿಷೇಧಾಜ್ಞೆಯು ಮೇ 23ರ ಬೆಳಿಗ್ಗೆ 5ರಿಂದ ಮೇ 24ರ ಬೆಳಿಗ್ಗೆ 6ರ ವರೆಗೆ ಜಾರಿಯಲ್ಲಿರುತ್ತದೆ’ ಎಂದು ತಿಳಿಸಿದರು.


ಬಿಗಿ ಪೊಲೀಸ್‌ ಬಂದೋಬಸ್ತ್
ಬೀದರ್‌: ‘ಮೇ 23 ರಂದು ನಡೆಯಲಿರುವ ಬೀದರ್ ಲೋಕಸಭಾ ಕ್ಷೇತ್ರದ  ಮತ ಎಣಿಕೆ ಪ್ರಯುಕ್ತ ನಗರದ ಬಿ.ವಿ.ಬಿ. ಕಾಲೇಜಿನ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ತಿಳಿಸಿದರು.

‘ಕೆಎಸ್‌ಆರ್‌ಪಿಯ ಮೂರು ತುಕ್ಕಡಿ, ಜಿಲ್ಲಾ ಸಶಸ್ತ್ರ ಪಡೆಯ 8 ತಂಡ ಹಾಗೂ ಒಬ್ಬ ಅಧಿಕಾರಿ, 14 ಕಮಾಂಡೊಗಳನ್ನೊಳಗೊಂಡ ಕ್ಷಿಪ್ರ ಕಾರ್ಯಾಚರಣೆ ತಂಡವನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅಹಿತಕರ ಘಟನೆ ನಡೆದರೂ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಿದೆ’ ಎಂದು ಹೇಳಿದರು.

‘ಬಿವಿಬಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ಸಂಚಾರ ಏಕಮುಖ ಮಾಡಲಾಗುವುದು. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಪಾಸ್‌ ಇಲ್ಲದ ವ್ಯಕ್ತಿಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳ ವಾಹನ ನಿಲುಗಡೆಗೆ ಬಿವಿಬಿ ಕಾಲೇಜು ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ಮತ ಎಣಿಕೆ ಕೊಠಡಿಗೆ ಒಬ್ಬ ಸಿಪಿಐ, ಇಬ್ಬರು ಪಿಎಸ್‌ಐ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಮ್ಮೆ ಮತ ಎಣಿಕೆ ಕೇಂದ್ರದೊಳಗೆ ಬಂದ ವ್ಯಕ್ತಿ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೂ ಹೊರಗೆ ಹೋಗುವಂತಿಲ್ಲ. ಒಂದು ವೇಳೆ ಹೊರಗೆ ಹೋದರೆ ಮರಳಿ ಬರುವಂತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT