ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ‘ನನ್ನ ಎಸ್ಸಿ ಪ್ರಮಾಣಪತ್ರ ರದ್ದಾಗಿಲ್ಲ’

ವಿರೋಧಿಗಳಿಂದ ಅಪಪ್ರಚಾರ: ರವೀಂದ್ರ ಸ್ವಾಮಿ
Last Updated 9 ಫೆಬ್ರುವರಿ 2023, 6:44 IST
ಅಕ್ಷರ ಗಾತ್ರ

ಬೀದರ್: ‘ನನ್ನ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ರದ್ದಾಗಿಲ್ಲ. ನಾನು ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸದಂತೆ ತಡೆಯಲು ವಿರೋಧಿಗಳು ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಹೇಳಿದರು.

‘ತಹಶೀಲ್ದಾರರು ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರವೇ 2019ರ ಆಗಸ್ಟ್ 27ರಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಕೊಟ್ಟಿದ್ದಾರೆ. ತಾಲ್ಲೂಕು ದಂಡಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ನನ್ನ ಪರವಾಗಿಯೇ ಆದೇಶ ನೀಡಿವೆ. ಜಿಲ್ಲಾಧಿಕಾರಿಯೂ ನನ್ನ ಪರವಾಗಿಯೇ ಆದೇಶ ಕೊಟ್ಟಿದ್ದಾರೆ’ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ನಾನು ಜಿಲ್ಲಾಧಿಕಾರಿ ವಿಚಾರಣೆಗೆ ತಡೆ ನೀಡುವಂತೆ ಹೈಕೋರ್ಟ್‌ ಮೊರೆ ಹೋಗಿದ್ದೆ. ಅಷ್ಟರಲ್ಲಿ ಜಿಲ್ಲಾ ನ್ಯಾಯಿಕ ದಂಡಾಧಿಕಾರಿಗಳು ನನ್ನ ಪರವಾಗಿಯೇ ತೀರ್ಪು ಕೊಟ್ಟರು. ಅದನ್ನು ನ್ಯಾಯಾಲಯಕ್ಕೂ ಸಲ್ಲಿಸಿರುವೆ. ಜಿಲ್ಲಾಧಿಕಾರಿ ಹಂತದಲ್ಲಿ ಬಗೆಹರಿಸಿಕೊಳ್ಳಬೇಕಿದ್ದ ಪ್ರಕರಣವನ್ನು ಹೈಕೋರ್ಟ್‌ಗೆ ತಂದಿದ್ದಕ್ಕೆ ಹೈಕೋರ್ಟ್‌ ದ್ವಿಸದಸ್ಯ ಪೀಠ ನನಗೆ ₹ 1 ಲಕ್ಷ ದಂಡ ವಿಧಿಸಿದ್ದು ನಿಜ. ಆದರೆ, ಜಾತಿ ಪ್ರಮಾಣಪತ್ರ ರದ್ದು ಪಡಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚುನಾವಣೆಗೆ ಸ್ಪರ್ಧಿಸಲು ನಾನು ಜಾತಿ ಪ್ರಮಾಣಪತ್ರ ಪಡೆದಿದ್ದೇನೆ. ಶೈಕ್ಷಣಿಕ ಸೌಲಭ್ಯ ಪಡೆದುಕೊಳ್ಳಲು ಮಗನಿಗೆ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ. ಈಗಾಗಲೇ ಜಿಲ್ಲೆಯ 40 ಮಂದಿ ಬೇಡ ಜಂಗಮ ಸಮುದಾಯದವರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದಾರೆ. ಈಗಲೂ ಲಿಂಗಾಯತ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

‘ನಾನು ಔರಾದ್‌ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಬೇರೆ ರಾಜ್ಯದ ವ್ಯಕ್ತಿ ಇಲ್ಲಿಗೆ ಬಂದು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಆಯ್ಕೆಯಾಗಿದ್ದಾರೆ. ಈ ಮೂಲಕ ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ. ಸಚಿವ ಪ್ರಭು ಚವಾಣ್‌ ಅವರು ಸರ್ಕಾರದ ಸೌಲಭ್ಯಗಳನ್ನು ತಮ್ಮ ಸಂಬಂಧಿಕರು ಹಾಗೂ ತಮ್ಮ ಜಾತಿಯವರಿಗೆ ಮಾತ್ರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪರಿಶಿಷ್ಟರು ಅನ್ಯಾಯಕ್ಕೆ ಒಳಗಾಗಿದ್ದಾರೆ’ ಎಂದು ಹೇಳಿದರು.

‘2019ರ ಆಗಸ್ಟ್ 27ರಂದು ತಹಶೀಲ್ದಾರ್‌ ಕೀರ್ತಿ ಚಾಲಕ ಅವರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡಿದ್ದಾರೆ. 2020ರ ಜೂನ್ 24ರಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಅವರು ರವೀಂದ್ರ ಸ್ವಾಮಿ ಹಾಗೂ ಇತರ 8 ಮಂದಿಗೆ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರ ರದ್ದು ಪಡಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿಗ ಪತ್ರ ಬರೆದಿದ್ದರು. ನಮ್ಮ ಬಳಿ ಎಲ್ಲ ದಾಖಲೆಗಳು ಇರುವ ಕಾರಣ ಜಾತಿ ಪ್ರಮಾಣಪತ್ರ ರದ್ದು ಪಡಿಸಲು ಸಾಧ್ಯವಾಗಿಲ್ಲ’ ಎಂದರು.

‘ಹೈಕೋರ್ಟ್‌ ದ್ವಿಸದಸ್ಯ ಪೀಠ ನೀಡಿದ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ಸುಪ್ರಿಂ ಕೋರ್ಟ್‌ ಯಾವುದೇ ತೀರ್ಪು ನೀಡಿದರೂ ಸ್ವಾಗತಿಸುವೆ. ಸಚಿವ ಪ್ರಭು ಚವಾಣ್‌ ಅವರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ್, ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಮೂಲಕ ನನ್ನ ರಾಜಕೀಯ ನಡೆಗೆ ತಡೆವೊಡ್ಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಟಿಕೆಟ್‌ ದೊರೆಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದೇನೆ’ ಎಂದು ತಿಳಿಸಿದರು. ಲಿಂಗಾಯತ ಬೇಡ ಜಂಗಮ ಸಮುದಾಯದ ಮುಖಂಡ ಸಿದ್ರಾಮಯ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT