ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಮತ್ತೆ ಶತಕ ದಾಟಿದ ಟೊಮೆಟೊ ಬೆಲೆ

ಸೆಟೆದ ನುಗ್ಗೆಕಾಯಿ, ಹಿರಿಹಿರಿ ಹಿಗ್ಗಿದ ಹಿರೇಕಾಯಿ
Last Updated 20 ನವೆಂಬರ್ 2021, 13:43 IST
ಅಕ್ಷರ ಗಾತ್ರ

ಬೀದರ್‌: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಜಿಲ್ಲೆಯ ತರಕಾರಿ ಮಾರುಕಟ್ಟೆಯ ಮೇಲೂ ಆಗಿದೆ. ಅನೇಕ ಕಡೆ ಅತಿವೃಷ್ಟಿಗೆ ಬೆಳೆ ನೀರು ಪಾಲಾಗಿರುವ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಆವಕವಾಗಿದೆ. ಇದರಿಂದಾಗಿ ಬಹುತೇಕ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಳವಾಗಿದೆ.

ಟೊಮೆಟೊ ಬೆಲೆ ದುಪ್ಪಟ್ಟಾಗಿದೆ. ಕಳೆದ ವಾರ ಪ್ರತಿ ಕೆಜಿಗೆ ₹ 40 ಇದ್ದ ಟೊಮೆಟೊ ಬೆಲೆ ₹ 100ಗೆ ಏರಿದೆ. ಹಸಿ ಮೆಣಸಿನಕಾಯಿ, ಹಿರೇಕಾಯಿ ಹಾಗೂ ಹೂಕೋಸು ಬೆಲೆಯೂ ದುಪ್ಪಟ್ಟಾಗಿದ್ದು, ಪ್ರತಿ ಕೆಜಿಗೆ ₹ 80ರಂತೆ ಮಾರಾಟವಾಗುತ್ತಿವೆ. ಬೆಲೆ ಏರಿಕೆ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದೆ.

ತರಕಾರಿ ಮಾರುಕಟ್ಟೆಯಲ್ಲಿ ಹೂಕೋಸು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 4,500, ಗಜ್ಜರಿ, ಟೊಮೆಟೊ, ಹಿರೇಕಾಯಿ ₹ 4 ಸಾವಿರ, ಸಬ್ಬಸಗಿ ₹ 500, ಬೆಳ್ಳುಳ್ಳಿ ₹ 1,500 ಮೆಣಸಿನಕಾಯಿ, ಈರುಳ್ಳಿ, ಬೀನ್ಸ್‌, ತೊಂಡೆಕಾಯಿ, ಪಾಲಕ್‌ ₹ 1 ಸಾವಿರ, ಬೆಂಡೆಕಾಯಿ ₹ 500 ಹಾಗೂ ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 7 ಸಾವಿರ ಹೆಚ್ಚಾಗಿದೆ.

ಆಲೂಗಡ್ಡೆ, ಎಲೆಕೋಸು ₹ 1,500, ಬದನೆಕಾಯಿ, ಕೊತಂಬರಿ, ಮೆಂತೆ ಸೊಪ್ಪು ₹ 1 ಸಾವಿರ, ಬೀಟ್‌ರೂಟ್‌ ಹಾಗೂ ಕರಿಬೇವು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಕಡಿಮೆಯಾಗಿದೆ.

‘ಜಿಲ್ಲೆಯ ಮಾರುಕಟ್ಟೆಗೆ ಹೊರ ಜಿಲ್ಲೆಗಳಿಂದಲೇ ಹೆಚ್ಚಿನ ತರಕಾರಿ ಬರುತ್ತದೆ. ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಟೊಮೆಟೊ ನೀರು ಪಾಲಾಗಿದೆ. ಪೂರೈಕೆ ಕಡಿಮೆಯಾಗಿ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ತಿಳಿಸಿದರು.

ಟೊಮೆಟೊ ಬೆಲೆಯಲ್ಲಿ ಹಠಾತ್‌ ಏರಿಳಿತವಾಗುವ ಕಾರಣ ಜಿಲ್ಲೆಯಲ್ಲಿ ರೈತರು ಹೆಚ್ಚು ಟೊಮೆಟೊ ಬೆಳೆಯುವುದಿಲ್ಲ. ಟೊಮೆಟೊ ಸಾಮಾನ್ಯವಾಗಿ ಬೇರೆ ಜಿಲ್ಲೆಗಳಿಂದ ಕೆಲ ತರಕಾರಿ ಬೀದರ್‌ಗೆ ಬರುತ್ತದೆ. ಸ್ಥಳೀಯವಾಗಿ ಸುಲಭವಾಗಿ ದೊರಕದ ಕಾರಣ ಬೆಲೆ ಹೆಚ್ಚಳವಾಗಿದೆ’ ಎಂದು ಪ್ರಗತಿಪರ ರೈತ ರವೀಂದ್ರ ಪಾಟೀಲ ಹೇಳಿದರು.

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ, ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ಬೀನ್ಸ್, ಗಜ್ಜರಿ, ಡೊಣ ಮೆಣಸಿನಕಾಯಿ, ಸೌತೆಕಾಯಿ, ಕುಂಬಳಕಾಯಿ, ತೊಂಡೆಕಾಯಿ, ಬೀಟ್‌ರೂಟ್‌ ಬಂದಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ:ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
ಈರುಳ್ಳಿ 25-30, 30-40
ಮೆಣಸಿನಕಾಯಿ 30-35,60-80
ಆಲೂಗಡ್ಡೆ 40-45, 20-30
ಎಲೆಕೋಸು 40-45, 20-30
ಬೆಳ್ಳುಳ್ಳಿ 60-65, 70-80
ಗಜ್ಜರಿ 35-40, 40-45
ಬೀನ್ಸ್‌ 80-90,80-100
ಬದನೆಕಾಯಿ 40-45,20-30
ಮೆಂತೆ ಸೊಪ್ಪು 30-40,20-30
ಹೂಕೋಸು 30-35,60-80
ಸಬ್ಬಸಗಿ 40-45,40-50
ಬೀಟ್‌ರೂಟ್‌,40-45,35-40
ತೊಂಡೆಕಾಯಿ 30-40,40-50
ಕರಿಬೇವು 30-35,28-30
ಕೊತಂಬರಿ 30-40,20-30
ಟೊಮೆಟೊ 30-40,80-100
ಪಾಲಕ್‌ 35-40,40-50
ಬೆಂಡೆಕಾಯಿ 40-45,40-50
ಹಿರೇಕಾಯಿ 35-40,60-80
ನುಗ್ಗೆಕಾಯಿ 60-70,120-140

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT