ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ಧರಣಿ

ಮೂರು ತಿಂಗಳಿಂದ ಬಿಡುಗಡೆಯಾಗದ ವೇತನ
Last Updated 27 ಮೇ 2019, 12:05 IST
ಅಕ್ಷರ ಗಾತ್ರ

ಬೀದರ್: ಸರ್ವಶಿಕ್ಷಣ ಅಭಿಯಾನ ಅಡಿ ಕಾರ್ಯನಿರ್ವಹಿಸುತ್ತಿರುವ ಬೀದರ್‌ ತಾಲ್ಲೂಕಿನ ಶಿಕ್ಷಕರಿಗೆ ಮೂರು ತಿಂಗಳಿಂದ ವೇತನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ನಗರದ ಬಿಇಒ ಕಚೇರಿ ಆವರಣದಲ್ಲಿ ಸೋಮವಾರ ಸಾಂಕೇತಿಕ ಧರಣಿ ನಡೆಸಿದರು.

ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ನಾಲ್ಕು ತಾಲ್ಲೂಕುಗಳಲ್ಲಿ ನಿಯಮಿತವಾಗಿ ಪ್ರತಿ ತಿಂಗಳು ವೇತನ ಬಿಡುಗಡೆ ಮಾಡಲಾಗುತ್ತದೆ. ಆದರೆ ಬೀದರ್‌ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯ ಕಾರ್ಯವೈಖರಿಯಿಂದಾಗಿ ಶಿಕ್ಷಕರಿಗೆ ಸರಿಯಾಗಿ ವೇತನ ಬಿಡುಗಡೆ ಆಗುತ್ತಿಲ್ಲ. ಬಿಇಒ ಅವರಿಗೆ ಅನೇಕಬಾರಿ ಮನವಿ ಮಾಡಿಕೊಂಡರೂ ಅವರು ತಾಲ್ಲೂಕು ಪಂಚಾಯಿತಿ ಹಾಗೂ ಖಜಾನೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಶಿಕ್ಷಕರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಮನೆಗಳ ಮಾಲೀಕರು ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಮನೆ ಕಟ್ಟಲು, ಮಕ್ಕಳ ಮದುವೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲ ಪಡೆದವರು ಸಾಲ ಮರುಪಾವತಿಸಲು ಪರದಾಡುತ್ತಿದ್ದಾರೆ. ಬೇರೆ ತಾಲ್ಲೂಕಿನಲ್ಲಿ ಶಿಕ್ಷಕರಿಗೆ ತುಟ್ಟಿ ಭತ್ಯೆ ಕೊಡಲಾಗಿದೆ. ಆದರೆ ಬೀದರ್ ತಾಲ್ಲೂಕಿನ ಎಸ್‌ಎಸ್‌ಎ ಶಿಕ್ಷಕರಿಗೆ ಬಿಇಒ ಕಚೇರಿಯಿಂದ ತುಟ್ಟಿ ಭತ್ಯೆಯನ್ನೂ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೀದರ್‌ ತಾಲ್ಲೂಕಿನಲ್ಲಿ ಸರ್ವಶಿಕ್ಷಣ ಅಭಿಯಾನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಶಿಕ್ಷಕರು ಇದ್ದಾರೆ. ವೇತನ ಬಿಡುಗೆ ಮಾಡುವಂತೆ ಅವರ ಬಳಿ ಹೋದರೆ ಅರ್ಜಿ ಕೊಡುವಂತೆ ಸೂಚಿಸುತ್ತಿದ್ದಾರೆ. ಸಂಬಳ ಬಿಡುಗಡೆಗೂ ಕಮಿಷನ್‌ ಕೊಡಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಶಿಕ್ಷಕರು ಆರೋಪಿಸಿದರು.

ಶಿಕ್ಷಕರು ಕಚೇರಿ ಆವರಣದಲ್ಲಿ ಧರಣಿ ಮುಂದುವರಿಸಲು ಯತ್ನಿಸಿದಾಗ ಬಿಇಒ ವಿಠೋಬಾ ಪತ್ತಾರ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ ಆರೋಪದ ಮೇಲೆ ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ತಿಳಿಸಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಯ ಬೆದರಿಕೆಗೆ ಬಗ್ಗದ ಶಿಕ್ಷಕರು ನಮ್ಮನ್ನು ಬಂಧಿಸಿದರೂ ಚಿಂತೆ ಇಲ್ಲ ವೇತನ ಬಿಡುಗಡೆ ಆಗುವವರೆಗೆ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಬಿಇಒ, ಶಿಕ್ಷಕರನ್ನು ಜಿಲ್ಲಾ ಖಚಾನೆ ಕಚೇರಿಗೆ ಕರೆದೊಯ್ದರು. ಅಲ್ಲಿ ಖಜಾನೆ ಕಚೇರಿಯ ಅಧಿಕಾರಿ ಸಹ ಬಿಇಒ ಕಚೇರಿಯಿಂದ ವೇತನ ಬಟವಡೆಯ ವಿವರಗಳು ಬಂದಿಲ್ಲ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಅಧಿಕಾರಿಯನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ, ಬಿಇಒ ಕಚೇರಿಯ ಸಿಬ್ಬಂದಿ ಬಂದು ಚೆಕ್‌ ಒಯ್ಯದಿದ್ದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು. ಆಗ ಶಿಕ್ಷಕರೆಲ್ಲ ಬಿಇಒ ಮೇಲೆ ಮುಗಿ ಬಿದ್ದರು. ‘11 ಗಂಟೆಯ ಯೊಳಗೆ ಶಿಕ್ಷಕರ ವೇತನ ಬಿಡುಗಡೆ ಮಾಡಲಾಗುವುದು’ ಎಂದು ಬಿಇಒ ಭರವಸೆ ನೀಡಿದರೂ ವೇತನ ಬಿಡುಗಡೆಯಾಗಲಿಲ್ಲ.

‘ಮೇ 28 ರಂದು ವೇತನ ಬಿಡುಗಡೆ ಮಾಡದಿದ್ದರೆ ಬಿಇಒ ಕಚೇರಿ ಮುಂದೆ ಟೆಂಟ್‌ ಹಾಕಿ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌.ಮನೋಹರ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT