ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧನೆಯೊಂದಿಗೆ ಸಂಶೋಧನೆಗೂ ಆದ್ಯತೆ: ಎಚ್‌.ಡಿ.ನಾರಾಯಣಸ್ವಾಮಿ

ರೈತರ ಆರ್ಥಿಕಾಭಿವೃದ್ಧಿ, ಜಾನುವಾರು ತಳಿ ಸುಧಾರಣೆಯೇ ವಿಶ್ವವಿದ್ಯಾಲಯದ ಗುರಿ
Last Updated 22 ಅಕ್ಟೋಬರ್ 2020, 15:34 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ ಕಮಠಾಣಾ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದಿಂದ ರೈತರಿಗೆ ದೊರೆಯುವ ತಾಂತ್ರಿಕ ನೆರವು, ಹೈನುಗಾರಿಕೆ ಮೂಲಕ ಆರ್ಥಿಕ ಸ್ವಾವಲಂಬನೆಗೆ ಅನುಸರಿಸಬಹುದಾದ ಕ್ರಮಗಳು, ಹೈನುಗಾರಿಕೆ ಡಿಪ್ಲೊಮಾದ ನೇಮಕಾತಿಯಲ್ಲಿರುವ ತಾಂತ್ರಿಕ ಸಮಸ್ಯೆಗಳು ಇನ್ನಿತರ ಮಾಹಿತಿ ಕೇಳಿ ಉತ್ತರ ಕರ್ನಾಟಕದ ಜಿಲ್ಲೆಗಳ ಹಲವು ರೈತರ ಹಾಗೂ ವಿದ್ಯಾರ್ಥಿಗಳ ಕರೆಗಳು ಬಂದವು.

ಕುಲಪತಿ ಎಚ್‌.ಡಿ. ನಾರಾಯಣಸ್ವಾಮಿ ಅವರು ರೈತರ ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಕ್ಲಿಷ್ಟಕರ ಪ್ರಶ್ನೆಗಳಿಗೂ ಉತ್ತರಿಸಿ, ಕೆಲವು ನಿರ್ಧಾರಗಳನ್ನು ಸರ್ಕಾರದ ಮಟ್ಟದಲ್ಲೇ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

* ಪಶು ಸಾಕಾಣಿಕೆಗಾಗಿಯೇ ಪಶು ಸಂಗೋಪನಾ ಡಿಪ್ಲೊಮಾ ನೀಡಿದ್ದರೆ ಅದು ನಿರರ್ಥಕ. ಮೆರಿಟ್‌ ಪದ್ಧತಿ ನಿಲ್ಲಿಸಿ ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಕೊಡಲು ಸಾಧ್ಯವಿದೆಯೇ?
- ದಿಲೀಪಕುಮಾರ ಎಚ್.ಟಿ, ವಿಜಯಪುರ

ಉತ್ತರ: ಅಲ್ಪಾವಧಿಯಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಡಿಪ್ಲೊಮಾ ಕೋರ್ಸ್‌ ಆರಂಭಿಸಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗದು. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಡಿಪ್ಲೊಮಾ ಕೋರ್ಸ್‌ ಅನ್ನೇ ರದ್ದುಪಡಿಸುವ ಕುರಿತು ಚಿಂತನೆ ನಡೆದಿದೆ.

* ಡಿಪ್ಲೊಮಾ ಮಾಡಿದರೂ ಅದಕ್ಕೆ ಸರ್ಕಾರದ ಇತರೆ ಸಂಸ್ಥೆಗಳೇ ಮಾನ್ಯತೆ ಕೊಡುತ್ತಿಲ್ಲ. ಪಶು ಸಂಗೋಪನಾ ಡಿಪ್ಲೊಮಾವನ್ನು ಪಿಯುಸಿ ತತ್ಸಮಾನ ಶಿಕ್ಷಣವೆಂದು ಘೋಷಣೆ ಮಾಡಲು ಸಾಧ್ಯವಿದೆಯೇ?
- ಪ್ರಕಾಶ ಮೂಲಿಮನಿ, ವಿಜಯಾನಂದ ಅಗಸಬಾಳ, ಪಶು ಸಂಗೋಪನಾ ಡಿಪ್ಲೊಮಾ ಪದವೀಧರರ ಸಂಘ, ವಿಜಯಪುರ

ಉತ್ತರ: ಪಶು ಸಂಗೋಪನಾ ಡಿಪ್ಲೊಮಾಗೆ ಪಿಯುಸಿ ತತ್ಸಮಾನ ಮಾನ್ಯತೆ ನೀಡುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಡಿಪ್ಲೊಮಾದಲ್ಲಿ ಪಶುಗಳ ಶರೀರ ರಚನಾಶಾಸ್ತ್ರದ ವಿಷಯವೇ ಇಲ್ಲ. ಇದು ಕಾಂಪೌಂಡರ್‌ ವೃತ್ತಿಗೆ ಸಮಾನವಾದ ಶಿಕ್ಷಣವಾಗಿದೆ. ಹೀಗಾಗಿಯೇ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡಿಲ್ಲ. ವಿಶ್ವವಿದ್ಯಾಲಯವೇ ಈ ಕೋರ್ಸ್‌ ನೀಡಿರುವ ಕಾರಣ ಕೆಲ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರದಿಂದ ಒಪ್ಪಿಗೆ ಪಡೆಯಲಾಗಿದೆ. ಹಣಕಾಸು ಇಲಾಖೆಯಿಂದ ಅನುಮತಿ ದೊರೆತ ತಕ್ಷಣ ಪ್ರಕಟಣೆ ನೀಡಿ ನೇಮಕಾತಿ ಮಾಡಿಕೊಳ್ಳಲಾಗುವುದು. ಕೊರೊನಾ ತೊಲಗಿದ ನಂತರ ನೇಮಕಾತಿ ಪ್ರಕ್ರಿಯೆ ಶುರು ಮಾಡಲಾಗುವುದು.

* ಪಶು ಸಂಗೋಪನಾ ಡಿಪ್ಲೊಮಾದ ಗೊಂದಲ ನಿವಾರಿಸಿ
-ಸುವರ್ಣ, ವಿಜಯಪುರದ ವಿದ್ಯಾರ್ಥಿನಿ, ದಿಲೀಪ್‌, ಚಿಕ್ಕಮಗಳೂರು, ರೂಪಾ ಬಸಪ್ಪ ಗೌಡ್ರ, ಬಾಗಲಕೋಟೆ ಜಿಲ್ಲೆಯ ವೆಂಕಚ್ಚಿ

ಉ: ಪಶು ಸಂಗೋಪನಾ ಡಿಪ್ಲೊಮಾದ ನೇಮಕಾತಿಯಲ್ಲಿರುವ ತಾಂತ್ರಿಕ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಪಶು ಸಂಗೋಪನಾ ಸಚಿವರೊಂದಿಗೂ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಸರ್ಕಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಪಶು ಸಂಗೋಪನಾ ಇಲಾಖೆಯಲ್ಲಿ ಕಾಂಪೌಂಡರ್‌ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ. ಅಲ್ಲಿಯ ವರೆಗೆ ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬಿ ಬದುಕು ನಡೆಸಲು ಪ್ರಯತ್ನಿಸುವುದು ಒಳ್ಳೆಯದು.

* ದೇವಣಿ ತಳಿಯ ಫಾರ್ಮ್‌ ಆರಂಭಿಸಲು ಬಯಸಿದ್ದೇನೆ. ವಿಶ್ವವಿದ್ಯಾಲಯದಿಂದ ತಾಂತ್ರಿಕ ನೆರವು ಕೊಡುತ್ತಿರಾ?
-ಶ್ರೀನಿವಾಸ ರೆಡ್ಡಿ, ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ ಗ್ರಾ.ಪಂ ಮಾಜಿ ಅಧ್ಯಕ್ಷ

ಉತ್ತರ: ನಿಮ್ಮಲ್ಲಿ ಜಾಗ ಹಾಗೂ ಮೇವಿನ ಲಭ್ಯತೆಗೆ ಅನುಗುಣವಾಗಿ ಎಷ್ಟು ಹಸುಗಳ ಸಾಕಾಣಿಕೆ ಮಾಡಬಹುದು ಎನ್ನುವುದನ್ನು ನಿರ್ಧರಿಸಬಹುದು. ವಿಶ್ವವಿದ್ಯಾಲಯದ ತಾಂತ್ರಿಕ ತಜ್ಞರು ದೇವಣಿ ಫಾರ್ಮ್‌ ಆರಂಭಿಸಲು ಮಾರ್ಗದರ್ಶನ ನೀಡಲಿದ್ದಾರೆ.

* ಮಾರುಕಟ್ಟೆಯಲ್ಲಿ ಶಾಖಾಹಾರಿ ಮೊಟ್ಟೆಗಳು ಬಂದಿವೆಯೇ?
- ದತ್ತಾತ್ರಿ ವಿ.ಕೆ., ಬೀದರ್

ಉ: ಕೆಲ ಫಾರ್ಮ್‌ ಕೋಳಿಗಳ ಮೊಟ್ಟೆಗಳಿಂದ ಮರಿಗಳು ಉತ್ಪಾದನೆಯಾಗುವುದಿಲ್ಲ. ಆದರೆ ಸಾಮಾನ್ಯ ಮೊಟ್ಟೆಗಳಿಗೂ ಅದಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಇವುಗಳನ್ನು ಶಾಖಾಹಾರಿಗೆ ಸಮಾನವಾದ ಮೊಟ್ಟೆಗಳೆಂದು ಹೇಳಬಹುದು ಅಷ್ಟೇ.

* ಸಾಕಾಣಿಕೆಗೆ ದೇವಣಿ ತಳಿ ಬೇಕಿದೆ. ಎಲ್ಲಿ ಖರೀದಿಸಬೇಕು?
-ಸೈಬಣ್ಣ, ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ, ಎಂ.ಎಸ್‌.ಮನೋಹರ್, ಕಸಾಪ ಬೀದರ್‌ ತಾಲ್ಲೂಕು ಘಟಕದ ಅಧ್ಯಕ್ಷ

ಉ: ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ(ಕೆ) ಸಮೀಪ ಪಶು ವಿಶ್ವವಿದ್ಯಾಲಯದ ದೇವಣಿ ತಳಿ ಅಭಿವೃದ್ಧಿ ಕೇಂದ್ರದಲ್ಲಿ ಉತ್ತಮ ತಳಿಯ ದೇವಣಿ ಕರುಗಳನ್ನು ಖರೀದಿಸಬಹುದಾಗಿದೆ. ಜಿಲ್ಲೆಯ ಹವಾಗುಣಕ್ಕೆ ದೇವಣಿ ತಳಿ ಸೂಕ್ತವಾಗಿದೆ.
ಬರದಲ್ಲಿ ಒಣ ಮೇವು ತಿಂದು ಬದುಕುವ ಶಕ್ತಿ ದೇವಣಿ ತಳಿಗೆ ಇದೆ. ಅದಕ್ಕೆ ರೋಗ ನಿರೋಧಕ ಶಕ್ತಿಯೂ ಅಧಿಕ ಇದೆ. ದಿನವೊಂದಕ್ಕೆ 10 ಕೆ.ಜಿ ಒಣ ಮೇವು, 30 ಕೆ.ಜಿ ಹಸಿರು ಮೇವು ಹಾಗೂ 2 ಕೆ.ಜಿ ಹಿಂಡಿ ಕೊಟ್ಟರೆ ಸಾಕು. ಅದರ ಆರೋಗ್ಯ ಸದೃಢವಾಗಿರುತ್ತದೆ.
ಪ್ರತಿ ವರ್ಷ 15 ರಿಂದ 20 ದೇವಣಿ ಹಸುಗಳ ಹರಾಜು ಮಾಡಲಾಗುತ್ತಿದೆ. ರೈತರು ಹರಾಜಿನಲ್ಲಿ ಪಾಲ್ಗೊಂಡು ಖರೀದಿಸಿ ಫಾರ್ಮ್‌ ಶುರು ಮಾಡಬಹುದಾಗಿದೆ.

* ಪಶು ವಿಶ್ವವಿದ್ಯಾಲಯದ ಆಂಬುಲನ್ಸ್‌ ಬಳಕೆಯಾಗುತ್ತಿಲ್ಲ ಏಕೆ. ಭದ್ರತಾ ಸಿಬ್ಬಂದಿ ನೇಮಕಾತಿಗೆ ಟೆಂಡರ್‌ ಕರೆದರೂ ಏಕೆ ನೇಮಕಾತಿ ಮಾಡಿಕೊಳ್ಳುತ್ತಿಲ್ಲ.
ಬಸಯ್ಯ ಸ್ವಾಮಿ, ಬೀದರ್ ತಾಲ್ಲೂಕಿನ ಕಮಠಾಣ

ಉ: ಆಂಬುಲನ್ಸ್‌ ಜಾನುವಾರು ಚಿಕಿತ್ಸೆಗೆ ದೊರಕುವಂತೆ ಮಾಡಲಾಗುವುದು. ತಾಂತ್ರಿಕ ಸಮಸ್ಯೆಗಳಿದ್ದರೆ ತಕ್ಷಣ ಸರಿಪಡಿಸಲಾಗುವುದು. 300 ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಸರ್ಕಾರದ ಅನುಮತಿ ಪಡೆಯಲಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಕೊರೊನಾ ಮುಗಿದ ತಕ್ಷಣ ನೇಮಕಾತಿ ಪ್ರಕ್ರಿಯೆ ಶುರು ಮಾಡುತ್ತೇವೆ.

* ಗ್ರಾಮೀಣ ಪ್ರದೇಶದಲ್ಲಿ ಬರಡು ದನಗಳ ಹಾಗೂ ಬೀದಿ ನಾಯಿಗಳ ಸಂತಾನ ಹೆಚ್ಚಾಗುತ್ತಿದೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆಯೇ?
ಶಿವಕುಮಾರ ಸ್ವಾಮಿ, ಬೀದರ್‌ ತಾಲ್ಲೂಕಿನ ಬಾವಗಿ

ಉ: ಬಾವಗಿ ಗ್ರಾಮಕ್ಕೆ ವಿಶ್ವವಿದ್ಯಾಲಯದ ತಜ್ಞರನ್ನು ಕಳಿಸಿ ಪರಿಶೀಲನೆ ನಡೆಸಲಾಗುವುದು. ಗ್ರಾಮ ಮಟ್ಟದಲ್ಲಿ ಶಿಬಿರ ಆಯೋಜಿಸಿ ರೈತರಿಗೆ ತಿಳಿವಳಿಕೆ ನೀಡಲಾಗುವುದು. ಬೀದಿ ನಾಯಿಗಳನ್ನು ನಿಯಂತ್ರಿಸಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ಸ್ಥಳೀಯ ಸಂಸ್ಥೆಗಳು ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

* ವಿಶ್ವವಿದ್ಯಾಲಯದಲ್ಲಿ ಶೇಕಡ 70ರಷ್ಟು ಬೋಧಕೇತರ ಹುದ್ದೆಗಳು ಖಾಲಿ ಇವೆ. ಯಾವಾಗ ಭರ್ತಿ ಮಾಡಿಕೊಳ್ಳುತ್ತೀರಿ?
ವೀರಭದ್ರಪ್ಪ ಉಪ್ಪಿನ್‌, ನಿವೃತ್ತ ಅಧಿಕಾರಿ, ಬೀದರ್‌

ಉ: 300 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ.

* ಔರಾದ್ ತಾಲ್ಲೂಕಿನ ಕೊಳ್ಳೂರಲ್ಲಿ ಐದು ದಿನಗಳಲ್ಲಿ ಮೂರು ಕತ್ತೆಗಳು ಅನಿರೀಕ್ಷಿತವಾಗಿ ಸಾವಿಗೀಡಾಗಿವೆ. ಕತ್ತೆಗಳು ಮೃತಪಟ್ಟರೆ ಪರಿಹಾರ ಪಡೆಯಲು ಸಾಧ್ಯವಿದೆಯೇ?
ರಿಯಾಜ್‌ ಪಾಶಾ, ಔರಾದ್ ತಾಲ್ಲೂಕಿನ ಕೊಳ್ಳೂರ

ಉ: ಕತ್ತೆಗಳು ಸಾವಿಗೀಡಾದ ತಕ್ಷಣ ಸಮೀಪದ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಕತ್ತೆಯನ್ನು ವಿಶ್ವವಿದ್ಯಾಲಯಕ್ಕೆ ತಂದಿದ್ದರೆ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಕೊಡಬಹುದಿತ್ತು. ವಿಶ್ವವಿದ್ಯಾಲಯದಿಂದ ಪರಿಹಾರ ಕೊಡುವ ವ್ಯವಸ್ಥೆ ಇಲ್ಲ. ಆದರೆ ಪಶು ಸಂಗೋಪನಾ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

* ಎಂಟು ಎಮ್ಮೆ ಹಾಗೂ ಎರಡು ಹಸುಗಳನ್ನು ಸಾಕಾಣಿಕೆ ಮಾಡಿ ಚಿಕ್ಕದಾಗಿ ಹೈನುಗಾರಿಕೆ ಶುರು ಮಾಡಿದ್ದೇನೆ. ಆದರೆ, ಹಾಲು ಉತ್ಪಾದನೆ ಸಮರ್ಪಕವಾಗಿಲ್ಲ. ಉತ್ಪಾದನೆ ಹೆಚ್ಚಿಸಲು ಮಾರ್ಗದರ್ಶನ ಕೊಡಿ.
ಸುನಂದಾ, ಕಲಬುರ್ಗಿ

ಉತ್ತರ: ಎಂಟು ಎಮ್ಮೆಗಳಿದ್ದರೆ ಕನಿಷ್ಠ 20 ರಿಂದ 25 ಲೀಟರ್‌ ವರೆಗಾದರೂ ಹಾಲು ಕೊಡಬೇಕು. ಮಾಲೀಕರೇ ನೇರವಾಗಿ ಜಾನುವಾರು ಕಾಳಜಿ ವಹಿಸುವುದು ಒಳ್ಳೆಯದು. ಕಲಬುರ್ಗಿಯ ಮಹಾಗಾಂವ ಕ್ರಾಸ್‌ನಲ್ಲಿರುವ ಹೈನುಗಾರಿಕೆ ಕಾಲೇಜಿಗೆ ಭೇಟಿ ಕೊಟ್ಟು ತಜ್ಞರಿಂದ ಸಲಹೆ ಪಡೆಯಬೇಕು.

* ಜಾನುವಾರುಗಳಿಗೆ ಚರ್ಮ ಗಡ್ಡೆ ರೋಗ ಬಂದಿದೆ. ನಮ್ಮ ಎತ್ತು ಕುಂಟುತ್ತಿದೆ. ಚಿಕಿತ್ಸೆ ಫಲಿಸುತ್ತಿಲ್ಲ. ಏನು ಮಾಡಬೇಕು?
ರಮೇಶ ತೇಲಿ, ಕಲಬುರ್ಗಿ ಜಿಲ್ಲೆಯ ಕಾಳಗಿ

ಉ: ಚರ್ಮ ಗಡ್ಡೆ ರೋಗ ಸೋಂಕಿನಿಂದ ಹರಡುತ್ತಿದೆ. ಇದಕ್ಕೆ ಪ್ರಸ್ತುತ ಚಿಕಿತ್ಸೆ ಇಲ್ಲ. ಮನೆ ಮದ್ದು ಬಳಸಿ ಜಾನುವಾರುಗಳ ಉಪಚಾರ ಮಾಡಬೇಕಿದೆ. ಸಮೀಪದ ವೈದ್ಯರನ್ನು ಸಂಪರ್ಕಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಬೇಕು.

* ಹೈನುಗಾರಿಕೆ ಶುರು ಮಾಡಲು ಬಯಸಿದ್ದೇವೆ. ಎಲ್ಲಿ ಮಾರ್ಗದರ್ಶನ ಪಡೆಯಬೇಕು.
ಅರವಿಂದ ಕುಲಕರ್ಣಿ, ಬೀದರ್ ತಾಲ್ಲೂಕಿನ ಬಾವಗಿ

ಉ: ಜಾಗದ ಅಳತೆ, ಮೇವಿನ ಲಭ್ಯತೆ ಹಾಗೂ ಯಾವ ತಳಿಯ ಹಸುಗಳನ್ನು ಸಾಕಲು ಬಯಸಿದ್ದೀರಿ ಎನ್ನುವ ಕುರಿತು ಪಟ್ಟಿ ಮಾಡಿಕೊಂಡು ವಿಶ್ವವಿದ್ಯಾಲಯಕ್ಕೆ ಬಂದರೆ ತಾಂತ್ರಿಕ ತಜ್ಞರು ಮಾರ್ಗದರ್ಶನ ಮಾಡಲಿದ್ದಾರೆ.

* 10 ಎಕರೆ ಜಮೀನು ಇದೆ. ಮೇಕೆ ಸಾಕಾಣಿಕೆ ಮಾಡಲು ತಾಂತ್ರಿಕ ಮಾರ್ಗದರ್ಶನ ಬೇಕಿದೆ. ಯಾರನ್ನು ಸಂಪರ್ಕಿಸಬೇಕು?
ಜೀವನ್, ರಾಯಬಾಗ ತಾಲ್ಲೂಕಿನ ಮುಗಳಖೋಡ

ಉ: ಮೇಕೆ ಸಾಕಾಣಿಕೆಗೆ ಪಶು ಸಂಗೋಪನಾ ಇಲಾಖೆ ಈಗಾಗಲೇ ತಾಂತ್ರಿಕ ತರಬೇತಿ ನೀಡುತ್ತಿದೆ. ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಪಶು ಸಂಗೋಪನಾ ಇಲಾಖೆ ಕಚೇರಿಯಿಂದ ಮಾಹಿತಿ ಪಡೆಯಬಹುದು.
ಹೆಚ್ಚು ಆದಾಯ ತಂದು ಕೊಡುವ ವಿವಿಧ ತಳಿಗಳ ಮಾಹಿತಿ ಅಗತ್ಯವಿದ್ದರೆ ವಿಶ್ವವಿದ್ಯಾಲಯದ ತಜ್ಞರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ.

ಗ್ರಾಮೀಣ ಜನರ ಅಚ್ಚುಮೆಚ್ಚಿನ ಕೋಳಿ ‘ಸ್ವರ್ಣಧಾರ’

ಬೀದರ್: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು
2006ರಲ್ಲಿ ಅಧಿಕ ಮೊಟ್ಟೆ ಕೊಡುವ ಅಂಶವನ್ನು ಗಮನದಲ್ಲಿಟ್ಟುಕೊಂಡು ‘ಸ್ವರ್ಣಧಾರ’ ಎನ್ನುವ ಕೋಳಿ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ನಾಟಿ ಕೋಳಿಯ ರೆಕ್ಕೆ ಪುಕ್ಕಗಳನ್ನು ಹೋಲುವ ಇದು ವಾರ್ಷಿಕ 160 ರಿಂದ 180 ಮೊಟ್ಟೆಗಳನ್ನು ಕೊಡುತ್ತದೆ. ಈ ಕೋಳಿ ಮಾಂಸ 4 ಕೆ.ಜಿ. ವರೆಗೂ ಉತ್ಪಾದನೆಯಾಗುತ್ತದೆ. ಎಲ್ಲ ರೀತಿಯ ಭೌಗೋಳಿಕ ವಾತಾವರಣಕ್ಕೆ ಹೊಂದಿಕೊಳ್ಳುವುದರಿಂದ ‌‌ಇದು ಗ್ರಾಮೀಣ ಜನರ ಅಚ್ಚುಮೆಚ್ಚಿನ ಕೋಳಿ ತಳಿಯಾಗಿದೆ.

ನಾಟಿ ಕೋಳಿ ಮೊಟ್ಟೆ ಕೊಡುವ ಸಾಮರ್ಥ್ಯ ಹೆಚ್ಚಿಸಿದ ಶ್ರೇಯಸ್ಸು ಸಹ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸಲ್ಲುತ್ತದೆ. ವಾರ್ಷಿಕ 40 ಮೊಟ್ಟೆ ಕೊಡುವ ನಾಟಿ ಕೋಳಿ 60 ಮೊಟ್ಟೆ ಕೊಡುತ್ತಿದೆ. ಈ ಕೋಳಿಗಳ ಬೇಡಿಕೆ ಅಧಿಕವಾಗಿದ್ದು, ವರ್ಷಕ್ಕೆ 4 ಲಕ್ಷ ಕೋಳಿ ಮರಿಗಳು ಮಾರಾಟವಾಗುತ್ತಿವೆ.

ಬೀದರ್‌, ಕಲಬುರ್ಗಿ, ರಾಯಚೂರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರೈತರು ಕೋಳಿ ಮರಿಗಳನ್ನು ಕೊಂಡೊಯ್ಯುತ್ತಿದ್ದಾರೆ. ವಿಶ್ವವಿದ್ಯಾಲಯವು ರಾಜಾ–2 ಕಲರ್ ಮಾಂಸದ ಕೋಳಿ ತಳಿಯನ್ನೂ ಅಭಿವೃದ್ಧಿ ಪಡಿಸಿದೆ.
ದೇಸಿ ತಳಿಗಳ ಸಂರಕ್ಷಣೆ, ಅದರ ಕಾರ್ಯಕ್ಷಮತೆ ಕುರಿತು ಸಂಶೋಧನೆ ನಡೆದಿದೆ. ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ತಳಿಗಳಾದ 500 ಸಾವಿರ ದೇವಣಿ ಹಾಗೂ 1 ಸಾವಿರ ಹಳ್ಳಿಕಾರ ತಳಿಯ ಕಾರ್ಯಕ್ಷಮತೆಯ ಅಧ್ಯಯನ ಮಾಡಲಾಗಿದೆ.

ಹಂದಿ ಜ್ವರ: ಲಸಿಕೆ ಅಭಿವೃದ್ಧಿ

ಆಡುಗಳಿಗೆ ಮೈಕೊ ಪ್ಲಾಸ್ಮಾ ಎನ್ನುವ ರೋಗ ಬರುವುದನ್ನು ಪತ್ತೆ ಮಾಡಲು ರೋಗ ತಪಾಸಣಾ ಕಿಟ್‌ ಅಭಿವೃದ್ಧಿಪಡಿಸಲಾಗಿದೆ.
ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮೂಲಕ ಪಿಪಿಆರ್‌ ರೋಗಕ್ಕೆ ಲಸಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಐಎಎಚ್‌ ಆ್ಯಂಡ್ ವಿಬಿಯು 10 ಜಿಲ್ಲೆಗಳಲ್ಲಿ ಪ್ರಾದೇಶಿಕ ರೋಗ ತಪಾಸಣೆ ಕೇಂದ್ರಗಳನ್ನು ಹೊಂದಿದೆ. ಜಾನುವಾರು ರೋಗ ಪತ್ತೆ ಹಚ್ಚಲು ಇದರಿಂದ ನೆರವಾಗಿದೆ.

ಎರಡು ವರ್ಷಗಳ ಹಿಂದೆ ಹುಮನಾಬಾದ್‌ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಾಗ ಸೋಂಕು ನಿಯಂತ್ರಿಸಲು ವೈಜ್ಞಾನಿಕ ರೀತಿಯಲ್ಲಿ 50 ಸಾವಿರ ಕೋಳಿ ವಧೆ ಮಾಡಲಾಯಿತು. ಹೀಗಾಗಿ ರೋಗ ಸಂಪೂರ್ಣ ಹತೋಟಿಗೆ ಬಂದಿತು. ವಿಶ್ವವಿದ್ಯಾಲಯ ಬೋಧನೆ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಹೊತ್ತುಕೊಂಡಿತು.

‘ಬೇರೆ ರಾಜ್ಯಗಳಲ್ಲಿ ಬೋಧನೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದರೆ ನಮ್ಮ ವಿಶ್ವವಿದ್ಯಾಲಯ ಸಂಶೋಧನೆಗೂ ಪ್ರಾಮುಖ್ಯ ನೀಡಿದೆ. ಒಟ್ಟು ಏಳು ರೋಗಗಳಿಗೆ ಲಸಿಕೆ ತಯಾರಿಸಿ ಸರ್ಕಾರಕ್ಕೆ ಕೊಡುತ್ತಿದೆ. ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ (IAH & VB) ಯಿಂದ ರಾಜ್ಯದ ತಾಲ್ಲೂಕುಗಳಿಗೆ ಲಸಿಕೆ ಪೂರೈಸಲಾಗುತ್ತಿದೆ. ಸರ್ಕಾರ ಪಶು ಸಂಗೋಪನೆ ಇಲಾಖೆ ಮೂಲಕ ರೈತರಿಗೆ ಉಚಿತವಾಗಿ ಪೂರೈಸುತ್ತಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ನಾರಾಯಣಸ್ವಾಮಿ ಹೇಳುತ್ತಾರೆ.

ಗಂಟಲು ಬೇನೆ, ನರಡಿ ರೋಗ, ಬ್ಲಾಕ್‌ ಪ್ಲಾಟರ್‌ ಚಪ್ಪೆ ರೋಗ ಇವುಗಳಿಗೆ ಲಸಿಕೆ ವಿತರಿಸಲಾಗುತ್ತಿದೆ. ವಿದೇಶಿ ತಳಿ ಜರ್ಸಿ, ಎಚ್‌.ಎಫ್‌. ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಆಕಳ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ. ಹೀಗಾಗಿ ಹಸುವಿನ ಹಾಲಿನ ಗುಣಮಟ್ಟದಲ್ಲಿ ಆಹಾರ ಸೂತ್ರದ ಪ್ರಕಾರ ಸುಧಾರಣೆ ತರಲಾಗಿದೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೆಎಂಎಫ್‌ಗೆ ಸುಧಾರಣಾ ಕ್ರಮಗಳ ಸೂತ್ರಗಳನ್ನು ಕೊಟ್ಟಿದ್ದಾರೆ. ಸರ್ಕಾರ ಮಟ್ಟದಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಆರೋಗ್ಯ ರಕ್ಷಣೆಗೆ ಆದ್ಯತೆ

ಫೋನ್‌ ಇನ್‌ ಮೂಲಕ ರೈತರಿಗೆ ಹಾಗೂ ಜಾನುವಾರು ಮಾಲೀಕರಿಗೆ ಮಾಹಿತಿ ನೀಡಲಾಗುತ್ತಿದೆ. ಪಶು ವೈದ್ಯಕೀಯ ತಜ್ಞರು ತರಬೇತಿ ಹಾಗೂ ತಾಂತ್ರಿಕ ನೆರವು ನೀಡುತ್ತಿದ್ದಾರೆ. ಐದು ಪಶು ವೈದ್ಯಕೀಯ ಕಾಲೇಜುಗಳು ಪಶು ಚಿಕಿತ್ಸೆಯಲ್ಲಿ ತೊಡಗಿವೆ. ಪ್ರತಿ ವರ್ಷ ಒಂದು ಲಕ್ಷ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪಶು ವೈದ್ಯರಿಗೆ ಅಲ್ಪಾವಧಿ ಪುನಶ್ಚೇತನ ಕಾರ್ಯಾಗಾರ ಏರ್ಪಡಿಸಿ ಮಾರ್ಗದರ್ಶನ ನೀಡಲಾಗುತ್ತಿದೆ. ವಂಶ ಅಭಿವೃದ್ಧಿ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 40 ತರಬೇತಿಗಳು ನಡೆಯುತ್ತವೆ. ವಿಶ್ವವಿದ್ಯಾಲಯವು ಐಟಿ ಕ್ಷೇತ್ರವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.

ಆದಾಯ ತಂದುಕೊಡುವ ಅಮೂರ್

ಅಮೂರ್ ಕಾಮನ್‌ ಕಾರ್ಪ್‌ (ಅಮೂರ್ ಸಾಮಾನ್ಯ ಗೆಂಡೆ) ಮೀನು ತಳಿ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಹೆಸರು ಘಟ್ಟದ ಮೀನುಗಾರಿಕೆ ವಿಜ್ಞಾನಿಗಳು ತಳಿ ಅಭಿವೃದ್ಧಿಪಡಿಸಿದ್ದಾರೆ. 17 ರಾಜ್ಯಗಳಿಗೆ ಹೊಸ ತಳಿ ಕೊಡಲಾಗಿದೆ.

ಪಶ್ಚಿಮ ಬಂಗಾಳದ ಮೀನುಗಾರರು ಅಮೂರ್‌ ತಳಿ ಬೆಳೆಸಿ ಆರ್ಥಿಕ ಅಭಿವೃದ್ಧಿ ಸಾಧಿಸಿದ್ದಾರೆ. ವಿಜಯಪುರದ ಭೂತನಾಳದಲ್ಲಿ ಮೀನು ತಳಿ ಸಂಗ್ರಹಿಸಿ ರೈತರಿಗೆ ವಿತರಿಸಲಾಗುತ್ತಿದೆ.

ಸಾಮಾನ್ಯವಾಗಿ ಸಿಗಡಿ ಮೀನಿಗೆ ಬಿಳಿ ಚುಕ್ಕೆ ರೋಗ ಬರುತ್ತದೆ. ರೋಗ ತಪಾಸಣೆಗೆ ರ‍್ಯಾಪಿಡಾಟ್‌ ಕಿಟ್‌ ತಯಾರು ಮಾಡಲಾಗಿದೆ. ಪ್ರಾಧ್ಯಾಪಕರು ಹಾಗೂ ವಿಜ್ಞಾನಿಗಳು ಪಾಠದ ಜತೆಗೆ ಸಂಶೋಧನೆ ಮಾಡಿ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ಕೊಡುತ್ತಿದ್ದಾರೆ.
ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯ ಹೊಸ ಯೋಜನೆ ಕೈಗೆತ್ತಿಕೊಂಡಿದೆ. ಕಾರ್ಖಾನೆ ವಿಸರ್ಜನೆ ಮಾಡುವ ತ್ಯಾಜ್ಯದ ನೀರನ್ನು ಬಳಸಿಕೊಳ್ಳಲು ಸಂಶೋಧನೆ ನಡೆಸಿದೆ. ಸಮುದ್ರದ ಮಾಲಿನ್ಯ, ನೀರಿನ ಗುಣಮಟ್ಟವನ್ನು ಪರಿಶೀಲಿಸುತ್ತಿದೆ. ಯಾವ ನೀರಿನಲ್ಲಿ ಯಾವ ಮೀನು ಬೆಳೆಸಬಹುದು ಎನ್ನುವ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ.

ಚರ್ಮಗಡ್ಡೆ ರೋಗ:ಚರ್ಮಗಡ್ಡೆ ರೋಗ ಹೊಸತಲ್ಲ. ಮೊದಲು ಸಹ ಆಗಾಗ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ವರ್ಷ
ಸಾವಿರಾರು ಜಾನುವಾರುಗಳಿಗೆ ಬಂದಿದೆ. ನಿಖರವಾದ ಲಸಿಕೆ ಇನ್ನೂ ಪತ್ತೆಯಾಗಿಲ್ಲ. ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಲಸಿಕೆ ಅಭಿವೃದ್ಧಿ ನಡೆಸಿ ನೀಡಬೇಕಾಗುತ್ತಾರೆ. ಹೀಗಾಗಿ ಸಂಶೋಧನೆಗೆ ಅಗತ್ಯವಿರುವ ಅನುದಾನಕ್ಕಾಗಿ ಫಂಡಿಂಗ್‌ ಏಜೆನ್ಸಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ರೇಬಿಸ್‌ ಮಾರಣಾಂತಿಕ ರೋಗವಾಗಿದೆ. ದಕ್ಷಿಣ ಏಷ್ಯಾದಲ್ಲಿ ದೊಡ್ಡದಾದ ರೋಗ ತಪಾಸಣೆ ಪ್ರಯೋಗಾಲಯ ಬೆಂಗಳೂರಿನಲ್ಲಿ ಇದೆ. ಇದಕ್ಕೆ ವಿಶ್ವ ಪಶು ಆರೋಗ್ಯ ಸಂಸ್ಥೆ (OIE-World Organisation for Animal Health) ನೆರವು ನೀಡಿದ್ದು, ರೋಗ ಪತ್ತೆಗೆ ಸುಧಾರಿತ ಪದ್ಧತಿಗಳನ್ನು ಅನುಸರಿಸಲಾಗಿದೆ.

ರಾಜ್ಯದ ಐದು ಕಾಲೇಜುಗಳಲ್ಲಿ ಒಂದು ವರ್ಷದಲ್ಲಿ 320 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಸಂಶೋಧನಾ ವಿಭಾಗದಲ್ಲಿ 200 ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಹೊರ ಬರುತ್ತಿದ್ದು, ಎಲ್ಲರೂ ಉದ್ಯೋಗದಲ್ಲಿದ್ದಾರೆ. ಪಶು ವೈದ್ಯಕೀಯ ಶಿಕ್ಷಣಕ್ಕೆ ಬಹಳ ಬೇಡಿಕೆ ಇದೆ. ಪಶು ವೈದ್ಯಕೀಯ ಶಿಕ್ಷಣ ಪಡೆದವರು ಸಹ ಐಎಎಸ್‌ ಹಾಗೂ ಕೆಎಎಸ್‌. ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT