ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್| ಸ್ವಚ್ಛ ಸುಂದರ ಪಟ್ಟಣ ನಿರ್ಮಾಣಕ್ಕೆ ಆದ್ಯತೆ: ಡಾ.ಸಿದ್ದು ಪಾಟೀಲ

Published 27 ಮೇ 2023, 23:39 IST
Last Updated 27 ಮೇ 2023, 23:39 IST
ಅಕ್ಷರ ಗಾತ್ರ

ಗುಂಡು ಅತಿವಾಳ

ಹುಮನಾಬಾದ್: ಬಿಜೆಪಿಯಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ಡಾ.ಸಿದ್ದು ಪಾಟೀಲ ಅವರು ‘ಪ್ರಜಾವಾಣಿ’ ನಡೆಸಿದ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

ಪಟ್ಟಣದಲ್ಲಿ ಸ್ವಚ್ಛತೆ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಪಶ್ನೆಗಳಿಗೆ ಉತ್ತರಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕನಸುಗಳನ್ನು ಹಂಚಿಕೊಂಡಿದ್ದಾರೆ.

* ಕಾಂಗ್ರೆಸ್ ಭದ್ರಕೋಟೆ ಚಿದ್ರಗೊಳಿಸಿ ಕಮಲ ಅರಳಿಸಿದ ನಿಮ್ಮ ಮೇಲೆ ಜನರ ನಿರೀಕ್ಷೆಗಳು ಅಪಾರ ಇವೆ. ಅವುಗಳನ್ನು ಹೇಗೆ ಈಡೇರಿಸುತ್ತೀರಿ?

ಉ: ಕ್ಷೇತ್ರದಲ್ಲಿ ಹಲವು ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ನಿರೀಕ್ಷೆಯಷ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸುವುದಕ್ಕೆ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ.

* ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದೀರಿ ಆದರೆ ರಾಜ್ಯದಲ್ಲಿ ನಿಮ್ಮ ಪಕ್ಷ ಅಧಿಕಾರ ಕಳೆದುಕೊಂಡಿದೆ. ಕ್ಷೇತ್ರಕ್ಕೆ ಹೊಸ ಯೋಜನೆಗಳು ತರಲು ಸಾಧ್ಯವೇ?

ಉ: ನಾನು ಬುದ್ಧ, ಬಸವ ಹಾಗೂ ಅಂಬೇಡ್ಕರರ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವನು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿ ಇಲ್ಲ. ಹಾಗೇನಾದರೂ ತಾರತಮ್ಯ ನಡೆದರೆ ಹೋರಾಟ ನಡೆಸಲು ಹಿಂಜರಿಯುವುದಿಲ್ಲ.

* ಹೈದರಾಬಾದ್ ಅಲ್ಲದೆ, ವಿದೇಶಕ್ಕೂ ಕೂಲಿ ಕೆಲಸ ಮಾಡುವುದಕ್ಕೆ ಕ್ಷೇತ್ರದ ಜನರು ತೆರುಳುತ್ತಿದ್ದಾರೆ. ಉದ್ಯೋಗ ಕಲ್ಪಿಸಲು ಏನು ಕ್ರಮ ಕೈಗೊಳ್ಳುತ್ತೀರಿ?

ಉ: ಈ ಹಿಂದೆ ಉದ್ಯೋಗ ಮೇಳ ನಡೆಸಿ ಕ್ಷೇತ್ರದ ಯುವಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಒಬ್ಬ ಶಾಸಕನಿಂದ ಬೃಹತ್ ಕೈಗಾರಿಕೆಗಳನ್ನು ತರಲು ಸಾಧ್ಯವಿಲ್ಲ. ಪಟ್ಟಣದ ಹೊರವಲಯದಲ್ಲಿ ಕೆಲ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯರಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗ ದೊರೆಯಬೇಕು. ಆದರೆ ಕೈಗಾರಿಕಾ ಕ್ಷೇತ್ರ ನೋಡಿದರೆ ಸ್ಥಳೀಯರಿಗೆ ಆದ್ಯತೆ ದೊರೆತಿಲ್ಲ. ಶೇ 80ರಷ್ಟು ಉದ್ಯೋಗ ಸ್ಥಳೀಯರಿಗೆ ಕೊಡುತ್ತೇವೆ ಎನ್ನುವ ಭರವಸೆ ನೀಡುವವರಿಗೆ ಮಾತ್ರ ಕ್ಷೇತ್ರದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ಅವಕಾಶ ನೀಡಲಾಗುವುದು.

* ಹುಮನಾಬಾದ್, ಚಿಟಗುಪ್ಪ ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿಂದ ಜನ ಪರದಾಡುವ ಸ್ಥಿತಿ ಇದೆ. ಇದಕ್ಕೆ ಶಾಶ್ವತ ಪರಿಹಾರ ಸಾಧ್ಯವಿದೆಯೇ?

ಉ: ಈ ಸಮಸ್ಯೆ ಅನೇಕ ವರ್ಷಗಳಿಂದ ಇದೆ. ಹಿಂದಿನ ಶಾಸಕರು 15 ವರ್ಷ ಅಧಿಕಾರದಲ್ಲಿದ್ದರೂ ಸಮಸ್ಯೆ ಪರಿಹಾರಕ್ಕೆ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಕ್ಷೇತ್ರದ ಜನರು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಹುಮನಾಬಾದ್, ಚಿಟಗುಪ್ಪ ಹಾ ಗೂ ಹಳ್ಳಿಖೇಡ (ಬಿ) ಸೇರಿ ವಿವಿಧ ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದ ನೀರು ಪೂರೈಕೆ ಮಾಡಲಾಗುತ್ತಿದೆ.‌ ಎಲ್ಲೆಲ್ಲಿ ಈ ಸಮಸ್ಯೆ ಇದೆಯೋ ನಾನೂ ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುವೆ.

* ಹುಮನಾಬಾದ್ ಪಟ್ಟಣ ಸೇರಿ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸ್ವಚ್ಛತೆ ಕೊರತೆ ಇದೆ. ನೈರ್ಮಲ್ಯಕ್ಕೆ ಒತ್ತು ಕೊಡುವಿರಾ?

ಉ: ಕ್ಷೇತ್ರದಲ್ಲಿ ಸ್ವಚ್ಛತೆ ಕೊರತೆ ಎದುರಾಗಿರುವುದಕ್ಕೆ ಅಧಿಕಾರಿಗಳೇ ಕಾರಣ. ಸ್ವಚ್ಛತೆ ಕೆಲಸದ ಗುತ್ತಿಗೆ ಪಡೆದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪುರಸಭೆ ವಿರುದ್ಧ ಜನಾಕ್ರೋಶವೂ ಇದೆ. ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಮತ್ತೊಮ್ಮೆ ಅಧಿಕಾರಗಳ ಸಭೆ ನಡೆಸಿ ಸ್ವಚ್ಛ ಸುಂದರ ಪಟ್ಟಣ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT