ಮಂಗಳವಾರ, ಅಕ್ಟೋಬರ್ 26, 2021
26 °C
ಶಾಸಕರ ಪ್ರದೇಶ ಅಭಿವೃದ್ಧಿ ನಿಧಿ

ಬೀದರ್: ಕ್ಷೇತ್ರದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶಾಸಕ ರಹೀಂ ಖಾನ್‌ ಅವರ ಪ್ರದೇಶ ಅಭಿವೃದ್ಧಿ ನಿಧಿಯನ್ನು ಹೆಚ್ಚಾಗಿ ಸಿಸಿ ರಸ್ತೆ ನಿರ್ಮಾಣ, ಹೈಮಾಸ್ಟ್‌ ಅಳವಡಿಕೆ ಹಾಗೂ ಕೊಳವೆಬಾವಿ ಕೊರೆಯಲು ಬಳಸಲಾಗಿದೆ.

ಶಾಸಕರ ಪ್ರದೇಶ ಅಭಿವೃದ್ಧಿ ನಿಧಿ ಬಳಕೆಗೆ ಬೀದರ್ ಶಾಸಕ ರಹೀಮ್‌ ಖಾನ್‌ ಅವರ ಕಡೆಯಿಂದ ಪ್ರಸ್ತಾವ ಸಲ್ಲಿಕೆಯಾಗಿದ್ದರೂ ಎರಡು ವರ್ಷಗಳ ಹಿಂದಿನ ಅನೇಕ ಕಾಮಗಾರಿಗಳು ಆರಂಭವಾಗಿಲ್ಲ. ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದರೂ ಅನೇಕ ಕಡೆ ಕೊಳವೆಬಾವಿ ಕೊರೆಯಲು ಅನುದಾನ ಒದಗಿಸಲಾಗಿದೆ.

ಕೆಲ ಕಡೆ ಉತ್ತಮ ರಸ್ತೆ ನಿರ್ಮಿಸಿದ ಮರು ವರ್ಷವೇ ಮತ್ತೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಅನುದಾನ ಕಲ್ಪಿಸಲಾಗಿದೆ. ಐಎಂಎ ಭವನದಿಂದ ನಂದಿ ಕಾಲೊನಿಗೆ ಹೋಗುವ ಮಾರ್ಗದಲ್ಲಿ ಕಳೆದ ವರ್ಷವೇ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಿಸಿದ ಆರು ತಿಂಗಳಲ್ಲಿ ಒಳಚರಂಡಿ ನಿರ್ಮಿಸಲು ರಸ್ತೆ ಅಗೆಯಲಾಗಿದೆ. ಇದೀಗ ಮತ್ತೆ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ 10 ಕಾಮಗಾರಿ ಮಾತ್ರ ಪೂರ್ಣ: 2019-2020ರಲ್ಲಿ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ರಹೀಂ ಖಾನ್ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಅದರಲ್ಲಿ ₹ 1.95 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ₹ 1.46 ಕೋಟಿ ಹಾಗೂ ಎರಡನೇ ಹಂತದಲ್ಲಿ ₹ 5.94 ಲಕ್ಷ ಅನುದಾನ ಬಿಡುಗಡೆಯೂ ಆಗಿದೆ. ಹಣ ಸಂಬಂಧಪಟ್ಟವರ ಖಾತೆಗೆ ಸೇರಿದರೂ ಕಾಮಗಾರಿ ಪೂರ್ಣಗೊಂಡಿಲ್ಲ.

40 ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಆದರೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಉಲ್ಲೇಖಿಸಿ ಮಾಹಿತಿ ನೀಡಿ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ. 10 ಕಾಮಗಾರಿಗಳು ಮಾತ್ರ ಮುಗಿದಿವೆ. 10 ಕಾಮಗಾರಿಗಳ ಅಂದಾಜು ವೆಚ್ಚದ ಮಾಹಿತಿ ಕೇಳಲಾಗಿದ್ದು, ಇನ್ನೂ ಕಾಮಗಾರಿ ಆರಂಭವಾಗಿಲ್ಲ.

₹ 1.34 ಕೋಟಿ ಬಿಡುಗಡೆ

2020–2021ನೇ ಸಾಲಿನಲ್ಲಿ ಒಟ್ಟು ₹ 2 ಕೋಟಿ ಅನುದಾನದಲ್ಲಿ ₹ 1.80 ಲಕ್ಷದ ಕಾಮಗಾರಿಯ ಪ್ರಸ್ತಾವ ಸಲ್ಲಿಸಲಾಗಿದೆ. ₹ 1.34 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭವಾಗಬೇಕಿದೆ.

ನೌಬಾದ್‌ನ ಭಾರತ ಪೆಟ್ರೋಲ್‌ ಬಂಕ್‌ ಬಳಿ, ಜನವಾಡ ರಸ್ತೆ ಲೇಬರ್‌ ಕಾಲೊನಿ ಬಳಿ, ಜನವಾಡದ ಹನುಮಾನ ಮಂದಿರ ಆವರಣ, ನ್ಯೂ ಆದರ್ಶ ಕಾಲೊನಿ, ಆಫೆನ್‌ ಹೌಸ್‌ ಬಳಿ, ವಾರ್ಡ್‌ ನಂ.6 ಮೆಮೊರಿಯಲ್‌ ಸ್ಕೂಲ್‌ ಬಳಿ ಹೈಮಾಸ್ಟ್, ವಾರ್ಡ್‌ ನ.32ರ ಪಿ.ಕೆ.ಪೆಟ್ರೋಲ್‌ ಬಳಿ ಸಿಸಿ ರಸ್ತೆ ನಿರ್ಮಾಣ, ವಾರ್ಡ್‌ ನ.6ರ ಫಹೀಮ್‌ ನಿವಾಸದ ಬಳಿ ಸಿಸಿ ರಸ್ತೆ, ವಾರ್ಡ್‌ 7ರಲ್ಲಿ, ಶಮದನಿ ದರ್ಗಾ ಸಮೀಪ ರಸ್ತೆ ನಿರ್ಮಾಣ, ವಾರ್ಡ್‌ 32ರ ಇಕ್ಬಾಲ್‌ ಹೋಟೆಲ್‌ ಬಳಿ ರಸ್ತೆ, ಅಲ್‌ ಅಮಿನ್‌ ಲೇಔಟ್‌ ಬಳಿ ರಸ್ತೆ ನಿರ್ಮಾಣ, ಐಎಂಎ ಹಾಲ್‌ನಿಂದ ನಂದಿ ಕಾಲೊನಿ ಶೈಲೇಂದ್ರ ಬೆಲ್ದಾಳೆ ಮನೆ ಮುಂಭಾಗದ ರಸ್ತೆಯ ಮರು ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

‘ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರ್ತಿ ಅನುದಾನವನ್ನೇ ಕೊಡಲಿಲ್ಲ. ಮತಕ್ಷೇತ್ರದ ಜನರ ಬೇಡಿಕೆಗಳಿಗೆ ಸ್ಪಂದಿಸಿ ಬಹುತೇಕ ಎಲ್ಲ ಅನುದಾನ ಬಳಕೆಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಎರಡು ವರ್ಷಗಳ ಹಿಂದಿನ ಕಾಮಗಾರಿಗಳು ಇನ್ನೂ ನಡೆಯುತ್ತಿವೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ’ ಎಂದು ಶಾಸಕ ರಹೀಂ ಖಾನ್‌ ಅಸಮಾಧಾನ ವ್ಯಕ್ತಪಡಿಸಿದರು.

‘ತೀರ ಅಗತ್ಯವಿರುವ ಕಡೆ ಶಾಸಕರ ಅನುದಾನ ಬಳಸಿ ಕಾಮಗಾರಿ ಕೈಗೊಂಡಿಲ್ಲ. ಅಗತ್ಯವಿಲ್ಲದ ಕಡೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಹೈಮಾಸ್ಟ್‌ ಅಳವಡಿಸಲಾಗಿದೆ. ಕೊಳವೆಬಾವಿ ಕೊರೆಸಲಾಗಿದೆ’ ಎಂದು ನಗರಸಭೆ ಮಾಜಿ ಸದಸ್ಯ ನಬಿ ಖುರೇಶಿ ಆರೋಪಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು