ಗುರುಪ್ರಸಾದ ಮೆಂಟೇ
ಹುಲಸೂರ: ತಾಲ್ಲೂಕಿನ ಸಮೀಪದ ಕೆಸರ ಜವಳಗಾ ಗ್ರಾಮದ ರೈತ ವೀರಶೆಟ್ಟಿ ಪಾಟೀಲ್ ಅವರು ಅವರೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ತಮ್ಮ ಒಂದು ಎಕರೆ ಹೊಲದಲ್ಲಿ ಅವರೆ ಬೆಳೆದಿದ್ದು, ಕಡಿಮೆ ಖರ್ಚಿನಿಂದ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಅಂಕುರ ಎಂಬ ಅವರೆ ತಳಿ ಬಿತ್ತನೆ ಮಾಡಿದ್ದಾರೆ.
₹ 2000ಕ್ಕೆ ಕೆ.ಜಿ.ಯಂತೆ ನಾಲ್ಕು ಪ್ಯಾಕೆಟ್ ಅವರೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಮಾಡಿದ ಎರಡು ತಿಂಗಳು 10 ದಿನಕ್ಕೆ ಅವರೆಕಾಯಿ ಬೆಳೆ ಕೈಗೆ ಸಿಗಲಿದ್ದು, ಮುಂದೆ ಮೂರೂವರೆ ತಿಂಗಳಿನವರೆಗೆ ಫಸಲು ಸಿಗುತ್ತದೆ. ಈಗ ಮೂರು ತಿಂಗಳ ಬೆಳೆ ಇದ್ದು, ನಿತ್ಯ ಒಂದೆರಡು ಅವರೆಕಾಯಿ ಸಿಗುತ್ತಿದೆ’ ಎನ್ನುತ್ತಾರೆ ವೀರಶೆಟ್ಟಿ.
ಹೊಲದ ತುಂಬ ಬಳ್ಳಿ ಹರಡುವುದರಿಂದ ಸದಾ ತೇವಾಂಶ ಇರುತ್ತದೆ. ಅವರೆ ಬೆಳೆಗೆ ಬಳಸುವ ಗೊಬ್ಬರ, ಕೀಟನಾಶಕಗಳು ಇತರೆ ತರಕಾರಿ ಸಸಿಗಳ ಬೆಳವಣಿಗೆಗೂ ಸಹಕಾರಿ ಆಗುತ್ತದೆ. ಅವರೆ ಬಳ್ಳಿಯಿಂದ ಎಲೆಗಳು ಒಣಗಿ ನಂತರ ಉದುರುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂಬುದು ಅವರ ಅಂಬೋಣ.
‘ಜೂನ್ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದು, ಮಳೆಯಾಶ್ರಿತವಾಗಿಯೇ ಬೆಳೆದಿದ್ದೇವೆ. ಅವರೆಕಾಯಿಯನ್ನು ಬೀದರ್ ಹಾಗೂ ಭಾಲ್ಕಿಗೆ ಕೊಂಡೊಯ್ಯುತ್ತೇವೆ. ಬೀದರ್‌ನಲ್ಲಿ ಈಗ ಪ್ರತೀ ಕ್ವಿಂಟಲ್ ಅವರೆಕಾಯಿ ₹ 5,000ದಿಂದ ₹ 6,500ಕ್ಕೆ ಮಾರಾಟ ಆಗುತ್ತಿದೆ. ಬಸವಕಲ್ಯಾಣ ಹಾಗೂ ಹುಲಸೂರ ವ್ಯಾಪಾರಿಗಳು ಅವರೆ ಕಾಯಿ ಕೊಳ್ಳಲು ಹೊಲಕ್ಕೇ ಬರುತ್ತಿದ್ದಾರೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.
‘ಒಂದು ಎಕರೆಗಳಲ್ಲಿ ಬೆಳೆಯಲು ₹ 20,000 ಖರ್ಚಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದು, ಹೂ, ಕಾಯಿಗಳಿಂದ ತುಂಬಿದೆ. ಸದ್ಯ ₹ 1 ಲಕ್ಷ ಆದಾಯ ಬಂದಿದ್ದು, ಒಟ್ಟು ₹ 3 ಲಕ್ಷ ಆದಾಯ ನಿರೀಕ್ಷಿಸಿದ್ದೇವೆ. ₹ 200 ದಿನಗೂಲಿಯಂತೆ ನಿತ್ಯ ನಾಲ್ಕೈದು ಮಹಿಳೆಯರು ಅವರೆ ಕಾಯಿ ಕೀಳಲು ಬರುತ್ತಾರೆ. ಕೂಲಿ ಕಾರ್ಮಿಕರ ಸಮಸ್ಯೆ ಇಲ್ಲ’ ಎಂದು ವೀರಶೆಟ್ಟಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.