ಗುರುವಾರ , ಮೇ 19, 2022
25 °C
ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿಕೆ

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೃಷಿ ಕ್ಷೇತ್ರದಲ್ಲಿ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಮಹತ್ವದ ಕಾರ್ಯಕ್ರಮಗಳ ಅನುಷ್ಠಾನದಿಂದಾಗಿ ಕೃಷಿ ಇಂದು ಲಾಭದಾಯಕ ಕ್ಷೇತ್ರವಾಗಿ ಪರಿವರ್ತನೆ ಹೊಂದಿದೆ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಘಾಳೆ ಫಂಕ್ಷನ್ ಹಾಲ್‌ನಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಕೃಷಿ ಮೂಲ ಸೌಕರ್ಯ ನಿಧಿ ಹಾಗೂ ಇತರೆ ಯೋಜನೆಗಳ ಕುರಿತ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಂಟು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಹೊಸ ಯೋಜನೆಗಳ ಅನುಷ್ಠಾನ ಹಾಗೂ ಹೊಸ ಬದಲಾವಣೆ ತಂದ ಕಾರಣ ಕ್ಷೇತ್ರ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ರೈತರು ಕೇವಲ ಉತ್ಪಾದಕರಾಗಿ ಉಳಿಯಬಾರದು. ಮಾರುಕಟ್ಟೆ ವ್ಯವಹಾರದಲ್ಲೂ ನೇರವಾಗಿ ತೊಡಗಿಸಿಕೊಳ್ಳುವಂತಹ ವ್ಯವಸ್ಥೆಯನ್ನು ರೂ‍‍ಪಿಸಲಾಗಿದೆ. ಅಷ್ಟೇ ಅಲ್ಲ ದೇಶದಲ್ಲಿ ಬರುವ ದಿನಗಳಲ್ಲಿ ಒಟ್ಟು 10 ಸಾವಿರ ಕೃಷಿ ಉತ್ಪಾದಕ ಸಂಸ್ಥೆಗಳನ್ನು ರಚಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಮುಖಂಡರು ರೈತರಿಗೆ ಸರ್ಕಾರದ ಯೋಜನೆಗಳು, ಹೊಸ ಸಂಶೋಧನೆಗಳು, ಮಾರುಕಟ್ಟೆಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಂ ಖಾನ್ ಮಾತನಾಡಿ, ರೈತರಿಂದ ದೂರುಗಳು ಬಾರದ ಹಾಗೆ ಕೃಷಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಬಹುತೇಕ ರೈತರ ಸಲಹೆಯಂತೆ ಬೆಳೆವಿಮೆ ಮತ್ತು ಕಬ್ಬು ಪೂರೈಸಿದ ಹಣ ಕಾರ್ಖಾನೆಯಿಂದ ಸಕಾಲಕ್ಕೆ ರೈತರಿಗೆ ಸಿಗುವಂತಾಗಬೇಕು ಎಂದರು.

ವಿಧಾನ ಪರಿಷತ್ತಿನ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯ ಸಾಧಕ– ಬಾಧಕಗಳ ಬಗ್ಗೆ ಯೋಚಿಸಿ ಯೋಜನೆಯ ಜಾರಿಗೆ ನಿರ್ಧರಿಸಬೇಕು ಎಂದು ಹೇಳಿದರು.

ರೈತ ಸಂಘದಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮ ಆಣದೂರೆ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ವಿಶ್ವನಾಥ ಶಿಳ್ಳೆ, ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಸತೀಶ್, ನಬಾರ್ಡ್‌ ಬ್ಯಾಂಕಿನ ರಾಮಚಂದ್ರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ, ಸಂತೋಷ, ಸಂಪನ್ಮೂಲ ವ್ಯಕ್ತಿ ಅಶೋಕ ಸಜ್ಜನ್, ರಂಗನಾಥ ಉಮೇಶ, ಅಯೂಬ್‌ ಪಟೇಲ್‌, ರಾಮರಾವ್‌, ಆರ್‌.ವಿ.ಪಾಟೀಲ ಪಾಲ್ಗೊಂಡಿದ್ದರು.

ಉಪ ಕೃಷಿ ನಿರ್ದೇಶಕ ರಂಗೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಜನಾಥ ಸಜ್ಜನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.